ಸರ್ಕಾರದಿಂದ 'ಬಾಣಂತಿಯರಿಗೆ ಸಾವಿನ ಭಾಗ್ಯ: ಲೋಕಾಯುಕ್ತ ತನಿಖೆ, ಭಾರೀ ಪರಿಹಾರಕ್ಕೆ ಒತ್ತಾಯ'
ಬೆಂಗಳೂರು, ಡಿಸೆಂಬರ್ 01: ರಾಜ್ಯದಲ್ಲಿ ಸರಣಿ ಬಾಣಂತಿಯರ ಸಾವಿನ ಪ್ರಕರಣದ ಕಾವು ಹೆಚ್ಚಾಗಿದೆ. ಬಾಣಂತಿಯರ ಸಾವುಗಳಾದ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಅಲ್ಲಿನ ಸ್ಥಿತಿ ವೈದ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಲ್ಲದೇ, ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಬಾಣಂತಿಯರ ಸಾವಿಗೆ ಕಾರಣ ಎನ್ನಲಾಗುತ್ತಿರುವ ಪಶ್ಚಿಮ ಬಂಗಾಲ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಐವಿ ದ್ರಾವಣ ಕಳಪೆ ಎಂದು ಆರು ತಿಂಗಳ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಅದನ್ನೇ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಇದರ ಹಿಂದೆ ಬಲಾಢ್ಯರ ಕಾಣದ ಕೈ ಕೆಲಸ ಮಾಡಿದೆ. ಈ ಸಾವುಗಳಿಗೆ ಸರ್ಕಾರವೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 10 ತಿಂಗಳಲ್ಲಿ 111 ನವಜಾತ ಶಿಶುಗಳು ಸಾವನ್ನಪ್ಪಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ತಾಯಂದಿರು ಹೆರಿಗೆ ನಂತರ ಮೃತರಾಗಿದ್ದಾರೆ. ಈಗ ಜನರಲ್ಲಿ ಭಯದ ವಾತಾವರಣವಿದೆ. ಹಾಗೆಯೇ ಇಲ್ಲಿ ಮೆಡಿಕಲ್ ಮಾಫಿಯಾ ಕೂಡ ಇದೆ. ಇದು ಒಂದು ಜಿಲ್ಲೆಯಲ್ಲಿ ಈ ಸಮಸ್ಯೆ ಕಂಡು ಬಂದಿದೆ.
ಇಂತಹ ಘಟನೆಗಳು ಕೇವಲ ಬಳ್ಳಾರಿಯಲ್ಲಿ ಅಷ್ಟೇ ಆಗಿವೆಯೋ ಅಥವಾ ರಾಜ್ಯದ ಇತರ ಜಿಲ್ಲೆಗಳಲ್ಲಿ ಕಥೆ ಹೇಗಿದೆ ಎಂಬುದುನ್ನು ನೋಡಬೇಕಿದೆ. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ಇಲ್ಲವಾದರೆ ನಾನೇ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವಿ ದ್ರಾವಣ ನೀಡಿದ ಬಳಿಕ ತಾಯಂದಿರ ಲಿವರ್ ವಿಫಲವಾಗಿದೆ. ರಕ್ತದೊತ್ತಡ ಸಂಪೂರ್ಣ ಇಳಿಮುಖವಾಗಿದೆ. ಈ ದ್ರಾವಣ ಯಾರ ಪ್ರಭಾವದಿಂದ ಕರ್ನಾಟಕಕ್ಕೆ ಬಂತು ಎಂದು ನೋಡಬೇಕಿದೆ. ಹಿಂದೆ ಇದ್ದ ಡ್ರಗ್ ಕಂಟ್ರೋಲರ್ ಆರು ತಿಂಗಳ ಹಿಂದೆ ಐವಿ ದ್ರಾವಣ ಖರೀದಿಸಬಾರದು ಎಂದು ಸರ್ಕಾರಕ್ಕೆ ತಿಳಿಸಿದ್ದರು.
ಬಳಸಬಾರದು ಎಂದು ಹೇಳಿದ್ದರೂ ಯಾವ ಕಾಣದ ಬಲಾಢ್ಯ ಕೈ ಇದನ್ನೇ ಖರೀದಿ ಮಾಡಬೇಕೆಂದು ಪ್ರಭಾವ ಬೀರಿದೆ ಎಂದು ನೋಡಬೇಕಿದೆ. ಈ ಕಂಪನಿಯ ಅನ್ಸಾರಿ ಎಂಬುವರು ಇಲ್ಲಿ ಪ್ರಭಾವ ಬೀರಿದ್ದು, ಈತನನ್ನು ಬಂಧಿಸಿದರೆ ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲಿದೆ. ಅದನ್ನು ಬಿಟ್ಟು ಸರ್ಕಾರ ಅಧಿಕಾರಿಯನ್ನು ಅಮಾನತು ಮಾಡಿ ನುಣುಚಿಕೊಂಡಿದೆ. ಸಚಿವರೇ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು.
ಜಿಲ್ಲಾಸ್ಪತ್ರೆಗೆ ಪೂರೈಕೆ ಆಗಿದ್ದು ಕಳಪೆ ದ್ರಾವಣ
ಅಧಿಕಾರಿಗಳಾದ ಚಿದಾನಂದ ವಟಾರೆ, ರಘುನಂದನ್, ನಂದಿನಿ, ಶೈಲಾವತಿ ಇದನ್ನು ಶಿಫಾರಸು ಮಾಡಿದ್ದಾರೆ. 97 ಬ್ಯಾಚ್‌ಗಳಲ್ಲಿ 23 ಬ್ಯಾಚ್‌ಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ವರದಿ ನೀಡಲಾಗಿದೆ. ಔಷಧಿಯಲ್ಲಿ ಶೇ.1 ರಷ್ಟು ಕಳಪೆ ಇದ್ದರೂ ಅದು ರೋಗಿಗಳಿಗೆ ಅಪಾಯ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಕಳಪೆ ಔಷಧಿ ಇದ್ದರೂ ಅದನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಇದರ ಹಿಂದೆ ಸರ್ಕಾರವೇ ಇದೆ. ಈ ಸಾವುಗಳಿಗೆ ಯಾರು ನ್ಯಾಯ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದರು.
ಇದು ವೈದ್ಯರ ಲೋಪವಲ್ಲ. ಈ ದ್ರಾವಣ ನೀಡಿದ ನಂತರ ತಾಯಂದಿರ ಅಂಗಾಂಗ ವೈಫಲ್ಯವಾಗಿದೆ. ಸರ್ಕಾರವೇ ಬಾಳಂತಿಯರನ್ನು ಕೊಲ್ಲುವ ಕೆಲಸ ಮಾಡಿದ್ದು, ಇದು ಸಂಪೂರ್ಣವಾಗಿ ಸರ್ಕಾರದ್ದೇ ತಪ್ಪು. ಬಾಳಂತಿಯರಿಗೆ ಸಾವಿನ ಭಾಗ್ಯ ನೀಡಿದ ಕಾಂಗ್ರೆಸ್, ಹಾಸನದಲ್ಲಿ ಸಮಾವೇಶ ಮಾಡಲು ಮುಂದಾಗಿದೆ. ಖಜಾನೆ ಖಾಲಿ ಮಾತ್ರವಲ್ಲ, ಆಸ್ಪತ್ರೆಗಳಲ್ಲಿ ಔಷಧಿ ಕೂಡ ಖಾಲಿಯಾಗಿದೆ ಎಂದು ದೂರಿದರು.
ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ. ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಕಾಣೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಗೆ ಬಂದರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾತ್ರ ಇವರ ಕಾರ್ಯಕ್ರಮ ಎಂದು ಆರೋಪಿಸಿದರು.
ಮೃತರ ಕುಟುಂಬ 25 ಲಕ್ಷ ರೂ. ಪರಿಹಾರ ಕೊಡಿ
ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯೆಯಿಂದ ಮೃತಪಟ್ಟ ಬಾಣಂತಿರಿಯರಿಗೆ 2 ಲಕ್ಷ ರೂ. ಪರಿಹಾರ ನೀಡಿದೆ. ಇದನ್ನು ಖಂಡಿಸಿದ ಅವರು ಸರ್ಕಾರಕ್ಕೆ ಜೀವದ ಬೆಲೆ ಗೊತ್ತಿಲ್ಲ ಎಂದು ಗುಡುಗಿದರು. ಮೃತಪಟ್ಟ ಪ್ರತಿ ಸಂತ್ರಸ್ತರಿಗೂ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿದರು.












Click it and Unblock the Notifications