ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಬಿಜೆಪಿಯಿಂದ 'ಭೀಮ ಹೆಜ್ಜೆ' ಜಾಗೃತಿ ಕಾರ್ಯಕ್ರಮ
ಬೆಂಗಳೂರು, ಏಪ್ರಿಲ್ 10: ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಏಪ್ರಿಲ್ 11ರಂದು 'ಭೀಮ ಹೆಜ್ಜೆ 100ರ ಸಂಭ್ರಮ' ಎಂಬ ಜಾಗೃತಿ ಕಾರ್ಯಕ್ರಮವನ್ನು ಬೆಂಗಳೂರಿನಿಂದ ನಿಪ್ಪಾಣಿ ವರೆಗೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು 1925ರ ಏಪ್ರಿಲ್ 10 ಮತ್ತು ಏಪ್ರಿಲ್ 11ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಭೇಟಿ ನೀಡಿದ್ದರು. ಇದೇ ಏಪ್ರಿಲ್ 10 ಮತ್ತು 11ಕ್ಕೆ 100 ವರ್ಷ ತುಂಬುತ್ತಿದೆ. ಈ 100 ವರ್ಷದ ಕಾರ್ಯಕ್ರಮವನ್ನು ಬಿಜೆಪಿ ವತಿಯಿಂದ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಅಂಬೇಡ್ಕರರು ಶೋಷಿತ ವರ್ಗಗಳನ್ನು ಸಂಘಟಿಸಿ, ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಶೋಷಣೆಗಳಿಂದ ಮುಕ್ತಗೊಳಿಸಲು ಮೊದಲ ಸಂಘಟಿತ ಪ್ರಯತ್ನ ಮಾಡಿದ್ದರು. ಅದು ಬಹಿಷ್ಕತ ಹಿತಕಾರಿಣಿ ಸಭಾ ಎಂಬುದಾಗಿತ್ತು. ಅದರ ಎರಡನೇ ಸಮಾವೇಶ ನಿಪ್ಪಾಣಿಯಲ್ಲಿ ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು, ಅಸ್ಪೃಶ್ಯರು, ದಲಿತರಿಗೆ ಶಿಕ್ಷಣ ಕೊಡಬೇಕು. ಆ ಶಿಕ್ಷಣ ಸಮರ್ಪಕವಾಗಿ ಸಿಗಲು ವಸತಿ ಶಾಲೆಗಳು, ವಸತಿ ನಿಲಯಗಳನ್ನು ಪ್ರಾರಂಭಿಸಬೇಕು ಆದರೆ 100 ವರ್ಷ ಕಳೆದರೂ ನಮ್ಮ ರಾಜ್ಯದಲ್ಲಿ ಸುಮಾರು 200 ಹಾಸ್ಟೆಲ್, ವಸತಿ ಶಾಲೆಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಏಪ್ರಿಲ್ 11ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದ ಬಾಬಾಸಾಹೇಬರ ಪ್ರತಿಮೆ ಮುಂದಿನಿಂದ ರಥಯಾತ್ರೆ ಆರಂಭಿಸಿ ಸಂಜೆ ಚಿತ್ರದುರ್ಗ ತಲುಪುತ್ತೇವೆ. ಏಪ್ರಿಲ್ 12ರಂದು ಹುಬ್ಬಳ್ಳಿ, ಧಾರವಾಡ, ಏಪ್ರಿಲ್ 13ರ ಸಂಜೆ ಬೆಳಗಾವಿ, ಏಪ್ರಿಲ್ 14ರಂದು ಬಾಬಾಸಾಹೇಬರ ಜಯಂತಿಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಏಪ್ರಿಲ್ 15ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದೇವೆ ಎಂದು ತಿಳಿಸಿದರು.

1924ರಲ್ಲಿ ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವು 100 ವರ್ಷದ ಅಧಿವೇಶನ ಮಾಡಿತ್ತು. ಅದಕ್ಕೆ ಪೂರ್ವಭಾವಿಯಾಗಿ ಬೆಳಗಾವಿ ಅಧಿವೇಶನದಲ್ಲಿ ಶಾಸಕಿ ಶಶಿಕಲಾ ಜೊಲ್ಲೆಯವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಗಾಂಧೀಜಿ ಬಂದು 100 ವರ್ಷಗಳ ಆಚರಣೆ ನಡೆಸುತ್ತಿದ್ದೀರಿ. ಅಂಬೇಡ್ಕರ್ ಅವರು ಬಂದು 100 ವರ್ಷವಾಗಿದೆ. ಅದನ್ನೂ ಆಚರಿಸಿ ಎಂದು ಸರಕಾರಕ್ಕೆ ಸಲಹೆ ಕೊಟ್ಟಿದ್ದರು. ಆದರೆ, ಸರಕಾರವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದರು.
ಬಿಜೆಪಿಯು ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಎಲ್ಲೆಲ್ಲಿ ಅಪಮಾನ ಆಗಿದೆಯೋ? ಎಲ್ಲೆಲ್ಲಿ ತೊಂದರೆ ಆಗಿದೆಯೋ? ಆ ಎಲ್ಲ ಸ್ಥಳಗಳಲ್ಲಿ ಅವರಿಗೆ ಸನ್ಮಾನ ಮಾಡುವ ಅಥವಾ ಗೌರವಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಏಪ್ರಿಲ್ 11 ಐತಿಹಾಸಿಕ ದಿನ ಎಂದು ಬಿಜೆಪಿ ಪರಿಭಾವಿಸುತ್ತದೆ ಎಂದು ತಿಳಿಸಿದರು.
ಇದು ಸಾಂಕೇತಿಕ ಕಾರ್ಯಕ್ರಮವಲ್ಲ. ಅರ್ಥಪೂರ್ಣವಾಗಿ ನಡೆಯಲಿದೆ. ಬಾಬಾ ಸಾಹೇಬರ ಹೋರಾಟ, ಅವರ ಸಾಧನೆಗಳು, ಅವರಿಗೆ ಅಂದಿನ ಕಾಂಗ್ರೆಸ್ ಮಾಡಿದ ಮೋಸ, ಇಂದಿನ ಕಾಂಗ್ರೆಸ್ ಮಾಡುತ್ತಿರುವ ಮೋಸವನ್ನು ಜನಮಾನಸಕ್ಕೆ ತಲುಪಿಸಲಿದ್ದೇವೆ. ಏಪ್ರಿಲ್ 14ರಂದು ಬಾಬಾಸಾಹೇಬರ ಜನ್ಮ ದಿನಾಚರಣೆ ಬರಲಿದೆ. ಅದನ್ನು ಸೇರಿಸಿಕೊಂಡು ನಾವು ಈ ಕಾರ್ಯಕ್ರಮ ಮಾಡುತ್ತೇವೆ ಎಂದು ವಿವರಿಸಿದರು.












Click it and Unblock the Notifications