BY Vijayendra: ಮನೆಗಳಿಗೇ ನುಗ್ಗಿ ಗೃಹಲಕ್ಷ್ಮಿಯರನ್ನು ಚಾಕುವಿನಿಂದ ಇರಿದು ಕೊಲ್ಲಲಾಗುತ್ತಿದೆ: ಬಿವೈ ವಿಜಯೇಂದ್ರ
ಬೆಂಗಳೂರು, ಮೇ. 17: ರಾಜ್ಯದಲ್ಲಿ ಒಂದಾದ ಮೇಲೆ ಒಂದು ಕೊಲೆಗಳು ನಡೆಯುತ್ತಲೆ ಇವೆ. ಹುಬ್ಬಳ್ಳಿಯಲ್ಲಿ ಕೆಲವೇ ಕೆಲವು ವಾರಗಳ ಅಂತರದಲ್ಲಿ ಒಂದೇ ಮಾದರಿಯಲ್ಲಿ ಇಬ್ಬರು ಯುವತಿಯರ ಭೀಕರ ಹತ್ಯೆ ನಡೆದಿದೆ. ಮಡಿಕೇರಿಯಲ್ಲಿ ಒಂದು ಕೊಲೆ, ಬೆಂಗಳೂರಿನ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ ಸೇರಿದಂತೆ ಹಲವು ಘಟನೆಗಳು ವರದಿಯಾಗುತ್ತಲೆ ಇವೆ.
ಘಟನೆಗಳ ಬಗ್ಗೆ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಶುಕ್ರವಾರ ಮೃತ ಅಂಜಲಿ ನಿವಾಸಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದಾರೆ. ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಕೊಲೆಯಾದಾಗಲೆ ಸರ್ಕಾರ ಕಾನೂನು ಸುವ್ಯವಸ್ಥೆ ಬಗ್ಗೆ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಕಿಡಿಕಾರಿದ್ದಾರೆ.

ಹೆಣ್ಣು ಮಕ್ಕಳು 'ಕೊಲೆ ಭಾಗ್ಯ' ಕಾಣುವಂತಾಗಿದೆ: ಬಿವೈ ವಿಜಯೇಂದ್ರ
ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರದ ವಿರುದ್ಧ ಆಕ್ರೀಶ ಹೊರಹಾಕಿದ್ದಾರೆ. "ಸಾಮಾಜಿಕ ಸುಭದ್ರತೆಗೆ ಹೆಸರಾಗಿದ್ದ ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ತನ್ನ ಒಂದು ವರ್ಷದ ಆಡಳಿತದಲ್ಲಿ ಕ್ರಿಮಿನಲ್ ಗಳು, ಕೊಲೆಗಡುಕರ ತಾಣವನ್ನಾಗಿಸುತ್ತಿದೆ" ಎಂದಿದ್ದಾರೆ.
'ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ಬೀಗುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಾಡುಹಗಲೇ ಅಮಾಯಕ ಹೆಣ್ಣು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈಯಲಾಗುತ್ತಿದೆ. ಮನೆಗಳಿಗೇ ನುಗ್ಗಿ ಗೃಹ ಲಕ್ಷ್ಮಿಯರನ್ನು ಚಾಕುವಿನಿಂದ ಇರಿದು ಕೊಲ್ಲಲಾಗುತ್ತಿದೆ, ಭಾಗ್ಯಲಕ್ಷ್ಮಿಯರನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಅರಣ್ಯರೋಧನವಾಗುತ್ತಿದೆ" ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ನಿರಂತರ ಕೊಲೆ ಪ್ರಕರಣಗಳು
'ರಾಜ್ಯಾದ್ಯಂತ ಹೆಣ್ಣು ಮಕ್ಕಳ ಸರಣಿ ಕೊಲೆಗಳು, ಅನುಮಾನದ ಸಾವುಗಳು, ಲೈಂಗಿಕ ದೌರ್ಜನ್ಯ ಪ್ರಕರಣಗಳೇ ಹೆಚ್ಚಾಗುತ್ತಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ನೇಹಾ, ಮಡಿಕೇರಿಯಲ್ಲಿ ಮೀನಾಳ ರುಂಡ ಕತ್ತರಿಸಿ ಕೊಲೆಗೈದ ಘಟನೆ, ಮತ್ತದೇ ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ, ಬೆಂಗಳೂರಿನ ಪದವಿ ವಿದ್ಯಾರ್ಥಿನಿಯ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದೂ ಸೇರಿದಂತೆ ನಿರಂತರ ಕೊಲೆ ಪ್ರಕರಣಗಳು ವರದಿಯಾಗುತ್ತಲೇ ಇವೆ' ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

'ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಮನೆಯಿಂದ ಆಚೆ ಬರಲೂ ಭಯ ಪಡುವ ವಾತಾವರಣ ನಿರ್ಮಾಣಗೊಂಡಿದೆ. ದುಷ್ಟ ಹಂತಕರಿಗೆ ಯಾರ ಭಯವೂ ಇಲ್ಲದಂತಾಗಿದ್ದು ಕೊಲೆ, ದಾಂಧಲೆ, ದರೋಡೆ, ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಸಾಮಾಜಿಕ ಭದ್ರತೆ ಕಲ್ಪಿಸಿ ಜನರಿಗೆ ಅಭಯ ತುಂಬಬೇಕಾದ ಗೃಹ ಇಲಾಖೆ ಈ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡದೇ ನಾಗರಿಕ ಸಮಾಜದ ವಿಶ್ವಾಸ ಕಳೆದುಕೊಂಡಿದೆ' ಎಂದು ಆಕ್ರೋಶನ ವ್ಯಕ್ತಪಡಿಸಿದ್ದಾರೆ.
'ದುರ್ಬಲರು, ಅಬಲೆಯರು ಭರವಸೆ ಹೊತ್ತು ಧೈರ್ಯದಿಂದ ಪೊಲೀಸ್ ಠಾಣೆ ಮೆಟ್ಟಿಲೇರುವ ವಾತಾವರಣ ಕಲ್ಪಿಸಲಾಗದ ಕಾಂಗ್ರೆಸ್ ಸರ್ಕಾರದ ನಿಷ್ಕ್ರೀಯ ಆಡಳಿತದಿಂದ ದೇಶದಲ್ಲಿ ರಾಜ್ಯದ ಗೌರವ, ಘನತೆಗಳು ಕುಸಿದು ಬೀಳುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲಾರದ ಸ್ಥಿತಿ ತಲುಪಿರುವ ಕಾಂಗ್ರೆಸ್ ಸರ್ಕಾರ ಅಸಮರ್ಥ ಗೃಹ ಸಚಿವರ ರಾಜೀನಾಮೆ ಪಡೆಯಲಿ, ಹಾಗೆಯೇ ಮುಖ್ಯಮಂತ್ರಿಗಳು ಸರಣಿ ಘಟನೆಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಒತ್ತಾಯಿಸುವೆ' ಎಂದು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.












Click it and Unblock the Notifications