B.Y.Vijayendra: ಮೈಕ್ರೋ ಫೈನಾನ್ಸ್ ದಂಧೆಯ ಕಡಿವಾಣಕ್ಕೆ ವಿಜಯೇಂದ್ರ ಮಹತ್ವದ ಸಲಹೆ, ಏನದು?
ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಬಡ್ಡಿ ವಸೂಲಿ ಹೆಸರಲ್ಲಿ ಬಡವರನ್ನು ಶೋಷಣೆ ಮಾಡುತ್ತಿದ್ದಾರೆ ಎನ್ನುವುದು ಸಾಕಷ್ಟು ಕಡೆ ವರದಿಯಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಡಿದಿದ್ದಾರೆ. ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಹಾವಳಿ ಹಾಗೂ ವಸೂಲಾತಿ ದೌರ್ಜನ್ಯದಿಂದ ಸಾಲಗಾರ ಬಡವರು ತತ್ತರಿಸಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶದ ಬಡ ಜನರು, ಕೃಷಿಕರು, ಸಣ್ಣ ಹಿಡುವಳಿದಾರ ರೈತರು, ಶ್ರಮಿಕ ವರ್ಗದವರು, ಬೀದಿ ಬದಿ ವ್ಯಾಪಾರಿಗಳನ್ನು ಗುರಿಯನ್ನಾಗಿಸಿಕೊಂಡು ಸಾಲ ವಿತರಿಸಲಾಗುತ್ತಿದ್ದು ಇವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರು ಆರ್‌ಬಿಐ ನಿಯಮಗಳನ್ನು ಗಾಳಿಗೆ ತೂರಿ, ಮೀಟರ್ ಬಡ್ಡಿ ದಂಧೆಕೋರರನ್ನು ಹತ್ತಿಕ್ಕುವ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಜಾಲ ಸಾಲಗಾರರ ಪ್ರಾಣ ಹಿಂಡಿ ವಸೂಲಾತಿಗೆ ನಿಂತಿದೆ ಎಂದು ದೂರಿದ್ದಾರೆ.

ಮರ್ಯಾದೆಗೆ ಅಂಜಿ ಗ್ರಾಮೀಣ ಪ್ರದೇಶದ ಬಡವರು ಮನೆ ತೊರೆದು ಹೋಗುತ್ತಿದ್ದಾರೆ. ಇವರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕಾನೂನು ಹಾಗೂ ಗೃಹ ಇಲಾಖೆ ಈ ಸಂಬಂಧವಾಗಿ ನಿಯಮಾವಳಿಗಳನ್ನು ಉಲ್ಲಂಘಿಸಿ ವಸೂಲಾತಿಗಿಳಿದು, ಗುಂಡಾಗಿರಿ ಪ್ರದರ್ಶಿಸುತ್ತಿರುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಬಿಟ್ಟಿ ಭಾಗ್ಯಗಳನ್ನು ಎಷ್ಟು ನೀಡಿದರೇನು? ಬಡವರನ್ನು ಮೈಕ್ರೋ ಫೈನಾನ್ಸ್ ನಂತಹ ಜಾಲದ ವ್ಯೂಹಕ್ಕೆ ಬಡವರು ಸಿಲುಕಿಕೊಂಡು ನರಳುತ್ತಿರುವ ಪರಿಸ್ಥಿತಿ ಉದ್ಭವಿಸಿರುವುದು ವಿಪರ್ಯಾಸದ ಸಂಗತಿ. ಸಾಮಾಜಿಕ ಅಭದ್ರತೆಯಿಂದ ಹಾಗೂ ಶೇ 25ಕ್ಕೂ ಹೆಚ್ಚು ಬಡ್ಡಿ ವಿಧಿಸಿ ಸಕಾಲದಲ್ಲಿ ಕಂತು ಪಾವತಿಸಲು ಸಾಧ್ಯವಾಗದವರ ಮೇಲೆ ಇನ್ನಷ್ಟು ಶುಲ್ಕಗಳನ್ನು ವಿಧಿಸಿ ಇರುವ ಆಸ್ತಿಯನ್ನೆಲ್ಲ ಮಾರಿಕೊಳ್ಳುವ ಪರಿಸ್ಥಿತಿಯು ಈ ಮೈಕ್ರೋಫೈನಾನ್ಸ್ ಸಾಲ ನೀಡುವ ಜಾಲದಿಂದ ಉದ್ಭವಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇಡೀ ರಾಜ್ಯದ್ಯಂತ ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಸಾವಿರಾರು ಶಾಖೆಗಳು ತನ್ನ ಜಾಲಗಳನ್ನು ವಿಸ್ತರಿಸಿಕೊಂಡು ಅಮಾಯಕರು, ಕನಿಷ್ಠ ಆದಾಯದಿಂದ ಬದುಕುವವರನ್ನು ಆಯ್ದುಕೊಂಡು ಸಾಲ ನೀಡುವ ಮೂಲಕ ಅವರು ಸಾಲ ತೀರಿಸುವ ವ್ಯೂಹದಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು ದರೋಡೆಕೋರರು ಬೀದಿಗಿಳಿದು ಹಾಡುಹಗಲೇ ಬ್ಯಾಂಕ್ ಲೂಟಿಯಲ್ಲಿ ತೊಡಗಿದ್ದಾರೆ. ರಾಜಾರೋಷವಾಗಿ ಪ್ರಯಾಣಿಕರಂತೆ ಬ್ಯಾಗುಗಳಲ್ಲಿ ಹಣ ಒಡವೆ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಲದ ಶೂಲಕ್ಕೆ ಸಿಲುಕಿರುವ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸರ್ಕಾರದ ರಕ್ಷಣೆ ಸಿಗುತ್ತದೆ ಎಂದು ಜನರು ನಂಬಿಕೊಳ್ಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಇನ್ನು ನೊಂದವರಿಗೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಧೈರ್ಯ ಮೊದಲೇ ಇರುವುದಿಲ್ಲ. ಪೊಲೀಸ್ ರಕ್ಷಣೆಗೆ ದೂರು ನೀಡಿದರೂ ಅದನ್ನು ಗಂಭೀರವಾಗಿ ಸ್ವೀಕರಿಸುವ ಮನೋಭಾವ ಪ್ರದರ್ಶಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಜನರಿಗೆ ಮಾನ-ಪ್ರಾಣದ ರಕ್ಷಣೆಯ ಭಾಗ್ಯ ಕಲ್ಪಿಸಲಾಗದಿದ್ದರೆ, ಸರ್ಕಾರ ಯಾವ ಭಾಗ್ಯ ಕೊಟ್ಟರೂ ಅದು ನಿರರ್ಥಕ ಎಂಬ ಅರಿವು ಸರ್ಕಾರಕ್ಕಿರಬೇಕು ಎಂದು ತಿವಿದಿದ್ದಾರೆ.
ಬಡವರ ರಕ್ಷಣೆಗೆ ಈ ಕೂಡಲೇ ಸರ್ಕಾರ ಧಾವಿಸಿ ಬರಬೇಕು. ಮೈಕ್ರೋ ಫೈನಾನ್ಸ್ ಜಾಲದ ದೌರ್ಜನ್ಯಗಳನ್ನು ಹತ್ತಿಕ್ಕಲು ಸಾಧ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡು ಅಮಾಯಕರ ರಕ್ಷಣೆಗೆ ನಾವಿದ್ದೇವೆ ಎಂಬ ಅಭಯವನ್ನಾದರೂ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.












Click it and Unblock the Notifications