"ಹಾಲು ಕೊಟ್ಟ ತಪ್ಪಿಗೆ ಹಸುವಿಗೂ ತೆರಿಗೆ ನೋಟಿಸ್"
ರಾಜ್ಯದಲ್ಲಿ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‌ಟಿ ನೊಟೀಸ್ ನೀಡಿರುವುದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಗೂಗಲ್‌ಪೇ, ಫೋನ್ ಪೇ ಸೇರಿದಂತೆ ಅಧಿಕವಾಗಿ ಯುಪಿಐ ವಹಿವಾಟು ನಡೆಸಿರುವ ಸಣ್ಣಪುಟ್ಟ ವ್ಯಾಪಾರಿಗಳೂ ಜಿಎಸ್‌ಟಿ ಪಾವತಿ ಮಾಡಬೇಕು ಎಂದು ನೋಟಿಸ್ ನೀಡಲಾಗಿದ್ದು, ವ್ಯಾಪಾರಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಬಿಜೆಪಿ ಕೂಡ ಇದೇ ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮುಂದೆ ಹಾಲು ಕೊಟ್ಟ ತಪ್ಪಿಗೆ ಹಸುವಿಗೆ ತೆರಿಗೆ ನೋಟಿಸ್ ಕೊಡುವ ಕಾಲ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಕೆಎಂಎಫ್ ನಿಗದಿ ಪಡಿಸಿದ ದರಕ್ಕಿಂತ ಒಂದು ರೂಪಾಯಿಯನ್ನು ಹೆಚ್ಚಿಗೆ ಪಡೆಯುವಂತಿಲ್ಲ ಎಂಬ ಕನಿಷ್ಠ ಜ್ಞಾನ ಹೊಂದಿರದ ಸಿದ್ದರಾಮಯ್ಯ ಸರ್ಕಾರದ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಕೆಎಂಎಫ್ ಅಧೀನದ ನಂದಿನಿ ಹಾಲು ಮಾರಾಟ ಮಾಡುವ ಮಳಿಗೆಗಳ ಬಡ ವ್ಯಾಪಾರಿಗಳಿಗೂ ಕೋಟಿ ಲೆಕ್ಕದ ನೋಟೀಸ್ ನೀಡಿರುವುದು ನೋಡಿದರೆ, ಹಾಲು ಕೊಟ್ಟ ತಪ್ಪಿಗೆ ಹಸುವಿಗೆ ನೋಟಿಸ್ ಕೊಡುವ ಕಾಲವೇನೂ ದೂರವಿಲ್ಲ ಎಂದು ಹರಿಹಾಯ್ದಿದೆ.

ಮೊಹಬ್ಬಹತ್ ಕಿ ದುಕಾನ್‌ನಲ್ಲಿ (ಪ್ರೀತಿಯ ಅಂಗಡಿ) ಚಹಾ, ಕಾಫಿ ಅಥವಾ ಹಾಲು ಇಲ್ಲ. ಆದರೆ ಚಿಂತಿಸಬೇಡಿ, ಸರಾಗವಾಗಿ ನಡೆಯುತ್ತಿರುವ ಏಕೈಕ ಅಂಗಡಿ ಹಗರಣ, ಭ್ರಷ್ಟಾಚಾರ ಮತ್ತು ರಾಜ್ಯ ತೆರಿಗೆ ದುಕಾನ್ ಇದೆ ಎಂದು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ವ್ಯಂಗ್ಯ ಮಾಡಿದೆ.
ಲಾಟರಿ ಸಿಎಂ ಸಿದ್ದರಾಮಯ್ಯ ರಾಜ್ಯ ವಾಣಿಜ್ಯ ತೆರಿಗೆಗೆ ನೀಡಿರುವ 1.2 ಲಕ್ಷ ಕೋಟಿ ತೆರಿಗೆ ಗುರಿಯು ಮಾರಾಟಗಾರರಿಗೆ ಅನಿಯಂತ್ರಿತ ತೆರಿಗೆ ನೋಟಿಸ್‌ಗೆ ಕಾರಣವಾಗಿದೆ. ಕಾಂಗ್ರೆಸ್ ತನ್ನ ಬಿಹಾರ ಚುನಾವಣಾ ಪ್ರಚಾರಕ್ಕೆ ಹಣಕಾಸು ಒದಗಿಸಲು ಕನ್ನಡಿಗರ ರಕ್ತವನ್ನು ಸೋಸುತ್ತಿದೆ ಎಂದು ಟೀಕಿಸಿದೆ. ಖಜಾನೆ ತುಂಬಿಸಿಕೊಳ್ಳಲು ಸುಲಿಗೆಗೆ ಇಳಿದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿರುವ ನಿಮ್ಮ ಬೂಟಾಟಿಕೆ ರಾಜ್ಯದ ಜನತೆಗೆ ತಿಳಿದಿದೆ ಎಂದು ತಿರುಗೇಟು ನೀಡಿದೆ.
ಇಷ್ಟು ದಿನ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ನಾವಲ್ಲ, ಅದು ಕೇಂದ್ರ ಸರ್ಕಾರ, ತೆರಿಗೆ ಹಾಕೋದು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ ಎಂದು ರಂಗ್ ಬಿರಂಗಿ ಬೊಗಳೆ ಬಿಟ್ಟಿದ್ದ ಟ್ಯಾಕ್ಸ್ ಸಿಎಂ ಸಿದ್ದರಾಮಯ್ಯ ಅವರು ಈಗ ಸಣ್ಣ ವರ್ತಕರ ಬಳಿ ತೆರಿಗೆ ವಸೂಲಿ ಮಾಡಲ್ಲ ಎಂದು ಘೋಷಿಸಿದ್ದಾರೆ. ಅಲ್ಲಿಗೆ ಸಣ್ಣ ವ್ಯಾಪಾರಿಗಳಿಗೆ ಲಕ್ಷ-ಲಕ್ಷ ತೆರಿಗೆ ವಿಧಿಸಿದ್ದು ಲೂಟಿ ಸರ್ಕಾರ ಎಂಬುದು ಸಾಬೀತಾಗಿದೆ. ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ಕೇಂದ್ರ ಸರ್ಕಾರ ಎಂದು ಮೊಂಡುವಾದ ಮಾಡಿದ್ದ ಎಲ್ಲ ವಿತಂಡವಾದಿಗಳಿಗೂ ಓಂ ಶಾಂತಿ ಎಂದು ಬಿಜೆಪಿ ಲೇವಡಿ ಮಾಡಿದೆ.
ತೆರಿಗೆ ವಸೂಲಿ ಮಾಡಲ್ಲ: ಸಿಎಂ
ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲಿ ಮಾಡುವುದಿಲ್ಲ. ಆದರೆ ಯಾರೂ ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications