ಕಾಂಗ್ರೆಸ್‌ ಪ್ರತಿಭಟನಾ ರ‍್ಯಾಲಿಗೆ ಬಂದ ರಾಹುಲ್‌ ಗಾಂಧಿಗೆ ಬಿಜೆಪಿಯಿಂದ 13 ಪ್ರಶ್ನೆ, ಏನದು?

ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಕರ್ನಾಟಕದ ಒಂದು ಕ್ಷೇತ್ರದಲ್ಲಿ ಚುನಾವಣೆ ವೇಳೆ ಮತಗಳ್ಳತನ ಆಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇದರ ಸಲುವಾಗಿ ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನಾ ರ‍್ಯಾಲಿಯಲ್ಲಿ ರಾಹುಲ್‌ ಗಾಂಧಿ ಭಾಗಿಯಾಗಲಿದ್ದಾರೆ. ಈ ವಿಚಾರವಾಗಿ ರಾಜ್ಯ ಬಿಜೆಪಿಯು ರಾಹುಲ್‌ ಗಾಂಧಿ ಅವರಿಗೆ 13 ಗಂಭೀರ ಪ್ರಶ್ನೆಗಳನ್ನ ಕೇಳಿದೆ. ಈ ಪ್ರಶ್ನೆಗಳು ಕರ್ನಾಟಕದ ಜನತೆಯದ್ದಾಗಿವೆ. ಬಹಳಷ್ಟು ದಿನಗಳಿಂದ ಕನ್ನಡಿಗರು ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವನ್ನು ಬಯಸುತ್ತಿದ್ದು, ನೀವು ಈ ಪ್ರಶ್ನೆಗಳಿಗೆ ಉತ್ತರಿಸುತ್ತಿರಾ ಎಂದು ನಾವು ನಂಬಿದ್ದೇವೆ ಎಂದು ವಾಗ್ದಾಳಿ ನಡೆಸಿದೆ. ಈ ಕೆಳಗಿನ ಪ್ರಶ್ನೆಗಳಿಗೆ ಮಾತ್ರ ನಿಮ್ಮಿಂದ ನೇರವಾದ ಹಾಗೂ ಸಮಂಜಸವಾದ ಉತ್ತರವನ್ನು ಬಯಸುತ್ತೇವೆ ಎಂದಿದೆ. ಆ ಪ್ರಶ್ನೆಗಳು ಹೀಗಿವೆ.

1. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕಾಂಗ್ರೆಸ್‌ನ ಚುನಾವಣೆಯ ಖರ್ಚಿಗಾಗಿ, ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದ ₹187 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡ ಹಗರಣವನ್ನು ಇಡಿ ಬಯಲು ಮಾಡಿದೆ. ಆ ಹಣ ಕಾಂಗ್ರೆಸ್‌ ತನ್ನ ಪಾರ್ಟಿ ಫಂಡ್‌ಗೆ ಬಳಸಿದಕ್ಕಾಗಿ ನೀವು ಅವರ ಕ್ಷಮೆ ಕೇಳುವುದಿಲ್ಲವೇ?

BJP Raises 13 Sharp Questions To Rahul Gandhi During His Bengaluru Visit

2. ಮುಡಾ ಹಗರಣ, ಕಾರ್ಮಿಕ ಕಿಟ್ ಹಗರಣ, ವಸತಿ ಹಗರಣ, ಅಬಕಾರಿ ಲೈಸೆನ್ಸ್‌ ನವೀಕರಣ ಹಗರಣ, ವೈನ್ ವ್ಯಾಪಾರಿಗಳಿಂದ ₹200 ಕೋಟಿ ಲಂಚಕ್ಕೆ ಬೇಡಿಕೆ ಸೇರಿದಂತೆ, ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಇದೇನಾ ನೀವು ದ್ವೇಷದ ಅಂಗಡಿಯಲ್ಲಿ ತೆರೆದ "ಭ್ರಷ್ಟಾಚಾರದ ಮಾರುಕಟ್ಟೆ"?

3. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ ₹40 ಸಾವಿರ ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸುವ ಮೂಲಕ, ನಿಮ್ಮ ಸರ್ಕಾರ ಪರಿಶಿಷ್ಟರಿಗೆ ಮಹಾದ್ರೋಹ ಎಸಗಿದೆ. ಅವರ ಹಣವನ್ನು ಯಾವಾಗ ಹಿಂದಿರುಗಿಸುತ್ತೀರಿ?

BJP Raises 13 Sharp Questions To Rahul Gandhi During His Bengaluru Visit

4. ನಿಮ್ಮ ಸರ್ಕಾರದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾಯಿಸುತ್ತಾರಂತೆ. ನಿಮ್ಮ ಡಿಸಿಎಂ ಹೇಳಿಕೆಗೆ ನಿಮ್ಮ ಸಹಮತವಿದೆಯೇ? ಬಾಬಾ ಸಾಹೇಬ್‌ ಅಂಬೇಡ್ಕರ್‌ ವಿರಚಿತ ಸಂವಿಧಾನವನ್ನು ಬದಲಾಯಿಸಲು ನೀವು ಮಾಡಿದ ಪ್ರಯತ್ನಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಿರಾ?

5. ನಿಮ್ಮ ಪಕ್ಷವು 2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್, ಹಾಲು, ಇಂಧನ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಪ್ರತಿಯೊಬ್ಬ ಕನ್ನಡಿಗನ ಬದುಕು ದುಸ್ತರವಾಗಿದೆ. ಜನಸಾಮಾನ್ಯರಿಗೆ ಬೆಲೆಯೇರಿಕೆಯ ಬರೆ ಎಳೆದ ನೀವು, ಅವರ ಬಳಿ ಕ್ಷಮೆಯಾಚಿಸುವುದಿಲ್ಲವೇ?

BJP Raises 13 Sharp Questions To Rahul Gandhi During His Bengaluru Visit

6. ಕನ್ನಡ ಓದಲು, ಬರೆಯಲು ಬಾರದ ಮಂತ್ರಿಗೆ ಶಿಕ್ಷಣ ಸಚಿವನ ಪಟ್ಟ ನೀಡಿದ ಪರಿಣಾಮ ಕರ್ನಾಟಕದ ಶಿಕ್ಷಣ ಇಲಾಖೆ ಬೋರಲು ಬಿದ್ದಿದೆ. ಮಕ್ಕಳಿಗೆ ಶೂ, ಸಾಕ್ಸ್‌, ಸಮವಸ್ತ್ರ ಸಹ ನೀಡಲು ಬೊಕ್ಕಸದಲ್ಲಿ ದುಡ್ಡಿಲ್ಲದಷ್ಟು ಸರ್ಕಾರ ದಿವಾಳಿಯಾಗಿದೆ. ಕರ್ನಾಟಕವನ್ನು ದಿವಾಳಿ ಮಾಡಿರುವ ನೀವು ಈ ಬಗ್ಗೆ ಕನ್ನಡಿಗರ ಕ್ಷಮೆಯಾಚಿಸುತ್ತೀರಾ?

7. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಡ್ರಗ್ಸ್‌ ಮತ್ತು ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ. ನಿಮ್ಮ ಸರ್ಕಾರದ ಆಂತರಿಕ ಭದ್ರತಾ ಲೋಪ ಮತ್ತು ಗುಪ್ತಚರ ವೈಫಲ್ಯಗಳ ಬಗ್ಗೆ ನೀವು ಕ್ಷಮೆಯಾಚಿಸುವುದಿಲ್ಲವೇ?

8. ನಿಮ್ಮ ಸರ್ಕಾರದ ಆಡಳಿತದಲ್ಲಿ ಎಸ್‌ಟಿ ಮತ್ತು ಹಿಂದುಳಿದ ಸಮುದಾಯದ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಳ ಸಮುದಾಯದ ಮಹಿಳೆಯರ ಮೇಲೆ ಮಾನವಕುಲ ತಲೆತಗ್ಗಿಸುವಂತಹ ಪೈಶಾಚಿಕ ಘಟನೆ ನಡೆದಿವೆ. ಮಹಿಳೆಯರ ಮೇಲಾದ ಈ ದೌರ್ಜನ್ಯಗಳ ಬಗ್ಗೆ ನೀವು ಮೌನ ಮುರಿಯುವುದು ಯಾವಾಗ?

9. ಕೇವಲ ವೋಟ್‌ ಬ್ಯಾಂಕ್‌ ಕಾಪಾಡಿಕೊಳ್ಳುವ ಸಲುವಾಗಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಉದಯಗಿರಿಯಲ್ಲಿ ನಡೆದ ಹಿಂಸಾತ್ಮಕ ಗಲಭೆಗಳಲ್ಲಿ ಭಾಗಿಯಾಗಿದ್ದ ನೂರಾರು ಜನರ ವಿರುದ್ಧದ ಪ್ರಕರಣಗಳನ್ನು ನಿಮ್ಮ ಸರ್ಕಾರ ಹಿಂತೆಗೆದುಕೊಂಡಿದೆ. ನಿಮ್ಮ ಬೆಂಬಲ ಕಾನೂನನ್ನು ಉಲ್ಲಂಘಿಸಿದವರ ಪರವೋ ಅಥವಾ ಕಾನೂನನ್ನು ಪಾಲಿಸಿದವರ ಪರವೋ?

10. ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಸೇರಿದಂತೆ, ನಿಮ್ಮ ಸರ್ಕಾರದ ರೈತ ವಿರೋಧಿ ಧೋರಣೆಯಿಂದ ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ನೀವು ನಾಡಿನ ಅನ್ನದಾತರ ಕ್ಷಮೆಯಾಚಿಸುವುದಿಲ್ಲವೇ?

11.ಸಿಲಿಕಾನ್‌ ಸಿಟಿ ಬೆಂಗಳೂರು ಇಂದು ಅಕ್ಷರಶಃ ರಸ್ತೆ ಗುಂಡಿಗಳಲ್ಲಿ ಮುಳುಗಿದೆ. ಡಿಸಿಎಂ ಶಿವಕುಮಾರ್ ಅವರಿಗೆ ಬೆಂಗಳೂರಿನ ಅಭಿವೃದ್ಧಿಗಿಂತ ತಮ್ಮ ಸಿಎಂ ಕುರ್ಚಿ ಮೇಲೆ ಹೆಚ್ಚು ಗಮನ. ಬೆಂಗಳೂರನ್ನು ನರಕವನ್ನಾಗಿಸಿದಕ್ಕೆ ಬೆಂಗಳೂರಿಗರ ಬಳಿ ಕ್ಷಮೆಯಾಚಿಸುವುದಿಲ್ಲವೇ?

12. ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ, ಸಮಾರಂಭ ಆಯೋಜಿಸಿದ್ದಕ್ಕೆ ಹಾಗೂ ಕಾಂಗ್ರೆಸ್ಸಿಗರ ಫೋಟೋ ಹುಚ್ಚಿಗೆ ಅಮಾಯಕ 11 ಜನ ಬಲಿಯಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಪ್ರಾಯೋಜಿತ ಈ ಕೊಲೆಗೆ ನೀವು ಕನ್ನಡಿಗರ ಬಳಿ ಕ್ಷಮೆಯಾಚಿಸುವುದಿಲ್ಲವೇ?

13. ಹಾಲು-ಮೊಸರು-ವಿದ್ಯುತ್-ನೋಂದಣಿ ಶುಲ್ಕ ಹೀಗೆ ಪ್ರತಿಯೊಂದರ ದರ ನಿಮ್ಮ ಕಾಂಗ್ರೆಸ್‌ ಸರ್ಕಾರದ ಆಳ್ವಿಕೆಯಲ್ಲಿ ದ್ವಿಗುಣಗೊಂಡಿದೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬೆಲೆಯೇರಿಕೆ ಬರೆ ಎಳೆದ ನೀವು ಅವರ ಬಳಿ ಕ್ಷಮೆಯಾಚಿಸುವುದಿಲ್ಲವೇ..??

ಇದೆಲ್ಲವೂ ಕೇವಲ ರಾಜಕೀಯ ಆರೋಪಗಳಲ್ಲ, ಬದಲಿಗೆ ಕರ್ನಾಟಕ ಜನ ನಿಮ್ಮ ಸರ್ಕಾರದ ಈ 18 ತಿಂಗಳಲ್ಲಿ ದಿನನಿತ್ಯ ಅನುಭವಿಸಿದ ನರಕ ಯಾತನೆಗಳು. ಈ ಬಗ್ಗೆ ವಿಷಯಾಂತರ ಮಾಡದೆ ಅಂಕಿ-ಅಂಶಗಳ ಸಮೇತ ವಾಸ್ತವದ ನೆಲೆಗಟ್ಟಿನಲ್ಲಿ ನಿಮ್ಮ ಉತ್ತರವನ್ನು ಕರ್ನಾಟಕದ ಜನತೆ ಬಯಸುತ್ತಿದಾರೆ ಎಂದು ರಾಹುಲ್‌ಗಾಂಧಿಗೆ ಬಿಜೆಪಿ ಕೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+