ಸದನದಲ್ಲಿ ಪ್ರತಿಧ್ವನಿಸಿದ ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಾಸ್ ನಿರ್ಧಾರ: ಚರ್ಚೆಗೆ ಅಸಮ್ಮತಿ
ಬೆಳಗಾವಿ, ಡಿಸೆಂಬರ್ 15: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ಹಿಂಪಡೆದ ಸರ್ಕಾರ ಕ್ರಮವನ್ನು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಶುಕ್ರವಾರ ಬೆಳಗ್ಗೆ ಪ್ರಸ್ತಾಪಿಸಿದರು. ಸರ್ಕಾರದ ನಿರ್ಧಾರವನ್ನು ಖಂಡಿಸಿ ಅವರು ತರಾಟೆಗೆ ತೆಗೆದುಕೊಂಡರು.
ಆರ್ ಅಶೋಕ್ ಅವರು, ಡಿಕೆ ಶಿವಕುಮಾರ್ ವಿಚಾರದಲ್ಲಿ ಸರ್ಕಾರದ ಕ್ರಮವನ್ನು ವಿರೋಧಿಸಿ ನಿಲುವಳಿ ಸೂಚನೆ ಮಂಡನೆಗೆ ಪ್ರಯತ್ನಿಸಿದರು. ಪ್ರಕರಣದ ವಿಚಾರಣೆ ಕೋಟ್೯ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಅವಕಾಶ ನಿರಾಕರಿಸಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಅಶೋಕ್ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ಈ ನಿರ್ಧಾರ ಸಂವಿಧಾನ ಬಾಹಿರ ಕ್ರಮವಾಗಿದೆ. ರಾಜಕೀಯ ದುರುದ್ದೇಶಗಳಿಂದ ಕೂಡಿದೆ ಎಂದು ಹರಿಹಾಯ್ದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಡಿಕೆ ಶಿವಕುಮಾರ್ ಅವರು ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಗಳ ಮೇರೆಗೆ 2019 ರ ಸೆಪ್ಟೆಂಬರ್ 25 ರಂದು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಒಮ್ಮೆ ತನಿಖೆಗೆ ನೀಡಿದ್ದ ಪ್ರಕರಣವನ್ನು ಹಿಂದೆ ಪಡೆಯಲು ಬರುವುದಿಲ್ಲ ಎಂದು ವಿಪಕ್ಷ ನಾಯಕರು ಸದನದಲ್ಲಿ ಪ್ರತಿಪಾದಿಸಿದರು.
ಬಿಜೆಪಿ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿಲ್ಲ
ಕಾಂಗ್ರೆಸ್ ಸರ್ಕಾರ ಇದೇ ರೀತಿ ಬಿಎಸ್ ಯಡಿಯೂರಪ್ಪ ಮತ್ತು ಬಳ್ಳಾರಿ ಜನಾರ್ದನ ರೆಡ್ಡಿ ಅವರುಗಳ ವಿರುದ್ಧದ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿತ್ತು. ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಆ ಪ್ರಕರಣಗಳನ್ನು ಹಿಂಪಡೆಯುವ ಕೆಲಸ ಮಾಡಲಿಲ್ಲ. ಈಗಿನ ಸರ್ಕಾರ ತಮಗೆ ತೋಚಿದಂತೆ ನಿರ್ಣಯನ್ನು ಕೈಗೊಳ್ಳುವ ಮೂಲಕ ನ್ಯಾಯಾಂಗದ ಕಣ್ಣಿಗೆ ಮಣ್ಣೆರುಚುವ ಕೆಲಸ ಮಾಡಿದೆ ಎಂದೂ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ಇದಕ್ಕೆ ಬಿಜೆಪಿಯ ಎಲ್ಲಾ ಶಾಸಕರು ದನಿಗೂಡಿಸಿ ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಆದರೆ ಇದಕ್ಕೆ ಒಪ್ಪದ ವಿಧಾನಸಭೆ ಸಭಾಪತಿ ಯು.ಟಿ ಖಾದರ್ ಅವರು ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದೆ ಇದೆ ಎಂದು ಅವಕಾಶ ನಿರಾಕರಿಸಿದರು.
ನಿಯಮ ಪಾಲನೆ ಆಗಿಲ್ಲ: ನಿರ್ಧಾರ ವಾಪಸ್
ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬಿಜೆಪಿ ಸರ್ಕಾರದ ಇದ್ದಾಗ ಅದನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಸರ್ಕಾರ ಡಿಕೆ ಶಿವಕುಮಾರ್ ಅವರ ತನಿಖೆಯನ್ನು ಸಿಬಿಐಗೆ ವಹಿಸುವಾಗ ನಿಯಮಗಳನ್ನು ಪಾಲಿಸಿಲ್ಲ. ಈ ಕಾರಣದಿಂದ ನಿಮಯ ಪಾಲನೆ ದೃಷ್ಟಿಯಿಂದ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದ ನಿರ್ಧಾರ ಹಿಂಪಡೆಯುವುದಾಗಿ ತಿಳಿಸಿತ್ತು. ಇದನ್ನು ಗೃಹ ಸಚಿವರಾದಿಯಾಗಿ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡರೆ, ಬಿಜೆಪಿ ನಾಯಕರು ಹರಿಹಾಯ್ದರು. ಇದೀಗ ಈ ವಿಚಾರ ಸದನದೊಳಗೂ ಪ್ರಸ್ತಾಪವಾಗಿದೆ.












Click it and Unblock the Notifications