ʻಸಿದ್ದರಾಮಯ್ಯ ಯೂಟರ್ನ್ ರಾಜಕಾರಣಿʼ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಜೋರಾಗಿ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯೂಟರ್ನ್ ರಾಜಕಾರಣಿ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿದೆ. ಹಿರಿಯ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರು ರಾಜಕೀಯದ ಬಗ್ಗೆ ಕೊಟ್ಟಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಈಗಾಗಲೇ ಹಲವು ದಾಖಲೆಗಳನ್ನು ಬರೆದಿದ್ದಾರೆ. ಐದು ವರ್ಷ ಆಡಳಿತ ಪೂರ್ಣಗೊಳಿಸಿದ ಮುಖ್ಯಮಂತ್ರಿ ಹಾಗೂ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದು ಸೇರಿದಂತೆ ಹಲವು ದಾಖಲೆಗಳು ಅವರ ಹೆಸರಿನಲ್ಲಿ ಇದೆ. ಆದರೆ, ಇದೀಗ ಅವರು ಮೂರನೇ ಬಾರಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಚೆಗೆ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆಯ ಮಾತನಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಅವರು, ಕರ್ನಾಟಕದ ರಾಜಕೀಯ ರಂಗ ಕಂಡ ಅತಿದೊಡ್ಡ "ಯೂಟರ್ನ್" ರಾಜಕಾರಣಿ ಎನ್ನುವ ಶ್ರೇಯಸ್ಸು ಖಂಡಿತವಾಗಿಯೂ ಸಲ್ಲುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಎಂದು ಕಾಲೆಳೆದಿದ್ದಾರೆ. ಮುಂದುವರಿದು ಸಾರ್ವಜನಿಕ ಜೀವನದಲ್ಲಿ ಈ ಮಟ್ಟದಲ್ಲಿ ಸುಳ್ಳು ಹೇಳಿಯೂ ದಕ್ಕಿಸಿಕೊಳ್ಳಬಹುದೆಂಬುದನ್ನು ನಿಮ್ಮನ್ನು ನೋಡಿ ಕಲಿಯಬೇಕು ಎಂದು ಹೇಳಿದ್ದಾರೆ.
ನಮ್ಮ ನೆನಪಿನ ಪ್ರಕಾರ, ನೀವು ಮೊದಲು ರಾಜಕೀಯ ನಿವೃತ್ತಿಯ ಮಾತನಾಡಿದ್ದು 2013ರಲ್ಲಿ. ಅಂದು ಇದೇ ನನ್ನ ಕೊನೆಯ ಚುನಾವಣೆ ಎಂದವರು 2018ರಲ್ಲಿ ಯೂಟರ್ನ್ ತೆಗೆದುಕೊಂಡಿರಿ. 2023ರಲ್ಲೂ ನೀವು ರಾಜಕೀಯ ಶರ ಸನ್ಯಾಸದ ಬಗ್ಗೆ ಬಹಿರಂಗ ಘೋಷಣೆ ಮಾಡಿದ್ದಿರಿ. 2ನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕವೂ ನೇಪಥ್ಯಕ್ಕೆ ಸರಿಯುವ ಇಚ್ಛೆ ವ್ಯಕ್ತಪಡಿಸಿದ್ದಿರಿ ಎಂದು ಹೇಳಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಸಿದ್ದರಾಮಯ್ಯ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಎರಡು ಬಾರಿ ಅಧಿಕಾರದಿಂದ ದೂರ ಸರಿಯುವ ಮಾತನಾಡಿದ್ದಿರಿ. ಆದರೆ, ಈಗ ಮತ್ತೆ ಸಕ್ರಿಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದು ದೊಡ್ಡ ಯೂಟರ್ನ್ ಹಾಕಿದ್ದೀರಿ. ರಾಜಕಾರಣದಲ್ಲಿ ಎಷ್ಟು ದಿನ ಸಕ್ರಿಯವಾಗಿರಬೇಕು, ಇರಬಾರದು ಎಂಬುದು ನಿಮ್ಮ ವೈಯಕ್ತಿಕ ನಿಲುವು ಹಾಗೂ ಜನತೆಯ ಆಯ್ಕೆ ಎಂದೂ ಅವರು ಹೇಳಿದ್ದಾರೆ.
ರಾಜಕೀಯ ನಿಮ್ಮ ವೈಯಕ್ತಿಕ ನಿಲುವು ಆದರೆ, ಈ ರಾಜಕೀಯ ನಿವೃತ್ತಿ ಎನ್ನುವುದು ಬದುಕಿನ ಛದ್ಮವೇಷವಾಗದಂತೆ / ಮುಖವಾಡ ಧರಿಸುವುದು ಆಗದಂತೆ ನೋಡಿಕೊಳ್ಳುವುದು ಸಾರ್ವಜನಿಕ ಬದುಕಿನಲ್ಲಿ ಇರುವವರ ಜವಾಬ್ದಾರಿಯೂ ಹೌದಲ್ಲವೇ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಹಲವರಿಗೆ ಅಚ್ಚರಿ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ರಿಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಹೇಳುತ್ತಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಅವರು ರಾಜಕೀಯದಲ್ಲಿ ಇದ್ದರೂ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದೇ ನಿರೀಕ್ಷೆ ಮಾಡಲಾಗಿತ್ತು.












Click it and Unblock the Notifications