BJP: ದಿಢೀರ್ ರಾಜೀನಾಮೆಗೆ ನಿರ್ಧರಿಸಿದ ರಾಜ್ಯ ಬಿಜೆಪಿ ಪ್ರಬಲ ನಾಯಕ
ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಒಂದೆಡೆ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದ್ದರೆ ಮತ್ತೊಂದೆಡೆ ವಿಜಯೇಂದ್ರ ಹಾಗೂ ಯತ್ನಾಳ್ ಬಣಗಳ ನಡುವೆ ಟಾಕ್ ವಾರ್ ಜೋರಾಗಿದೆ. ಇದರ ನಡುವೆ ಬಿಜೆಪಿ ನಾಯಕರೊಬ್ಬರು ದಿಢೀರ್ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರ ಹೆಸರು ಕೇಳಿಬಂದಿದೆ.
ಹೌದು ಮಾಜಿ ಸಚಿವರೂ ಆಗಿದ್ದ ವಿ.ಸುನಿಲ್ ಕುಮಾರ್ ಅವರು ರಾಜೀನಾಮೆ ಮುಂದಾಗಿದ್ದಾರೆ. ಸುನಿಲ್ ಕುಮಾರ್ ಅವರಿಗೆ ನೀಡಲಾಗಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಯಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖುದ್ದು ಅವರೇ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತನ್ನನ್ನು ಕೆಳಗಿಳಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಂದೆಡೆ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಕೇಳಿಬರುತ್ತಿರುವ ನಡುವೆಯೇ ಸುನಿಲ್ ಕುಮಾರ್ ಅವರ ಈ ನಿರ್ಧಾರ ಕುತೂಹಲ ಮೂಡಿಸಿದೆ.

ಸುನಿಲ್ ಕುಮಾರ್ ಅವರ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮೊದಲಿಗೆ ವಿಜಯೇಂದ್ರ ಅವರ ಬಣದಲ್ಲೇ ಸುನಿಲ್ ಕುಮಾರ್ ಗುರುತಿಸಿಕೊಂಡಿದ್ದರು. ಈ ಕಾರಣದಿಂದಲೇ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ಕೂಡ ಸಿಕ್ಕಿತ್ತು. ಆದರೆ, ಇತ್ತೀಚೆಗೆ ಅವರು ಪಕ್ಷದ ಬಣ ಬಡಿದಾಟದಿಂದ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಅವರು ವಿಜಯೇಂದ್ರ ಅವರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ ಎಂದು ಗುಸಗುಸು ಇದೆ.
ಆದರೆ, ವಿಜಯೇಂದ್ರ ಹಾಗೂ ಸುನಿಲ್ ಕುಮಾರ್ ಅವರ ನಡುವೆ ಯಾವುದೇ ವೈಮನಸ್ಸಿರಲಿಲ್ಲ. ಆದರೂ ಅವರು ತಮಗೆ ನೀಡಿರುವ ಜವಾಬ್ದಾರಿಯಿಂದ ಕೆಳಗಿಳಿಯಲು ನಿರ್ಧರಿಸುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ಅವರೇ ನೇರವಾಗಿ ಹೈಕಮಾಂಡ್‌ಗೆ ತಮ್ಮ ನಿರ್ಧಾರ ತಿಳಿಸಿದ್ದು, ಈ ಬಗ್ಗೆ ಹೈಕಮಾಂಡ್ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಸುನಿಲ್ ಕುಮಾರ್ ಅವರ ಈ ನಿರ್ಧಾರ ಬೆನ್ನಲ್ಲೇ ಪಕ್ಷದಲ್ಲಿ ಹಲವು ವಿಚಾರಗಳು ಮುನ್ನೆಲೆಗೆ ಬಂದಿವೆ. ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಜೋರಾಗಿರುವುದರಿಂದ ಸುನಿಲ್ ಕುಮಾರ್ ಅವರೂ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಪ್ರಧಾನ ಕಾರ್ಯದರ್ಶಿ ಹುದ್ದೆ ಕೂಡ ರಾಜ್ಯ ಬಿಜೆಪಿಯಲ್ಲಿ ಉನ್ನತ ಸ್ಥಾನ ಎಂದೆನಿಸಿಕೊಂಡಿದ್ದರೂ ಸುನಿಲ್ ಕುಮಾರ್ ದಿಢೀರನೆ ಯಾಕೆ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸುನಿಲ್ ಕುಮಾರ್ ಅವರು ತಮ್ಮ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಇದಕ್ಕೂ ಮುನ್ನವೇ ಅವರು ಮೌಖಿಕವಾಗಿಯೂ ಒಮ್ಮೆ ಮನವಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ ಸುನಿಲ್ ಕುಮಾರ್ ಅವರ ಈ ನಿರ್ಧಾರಕ್ಕೆ ಪಕ್ಷದ ಬಣ ಬಡಿದಾಟ ಕಾರಣವಲ್ಲ, ಅವರು ತಮ್ಮ ವೈಯಕ್ತಿಕ ಕಾರಣದಿಂದ ಪ್ರ‍್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.











Click it and Unblock the Notifications