ಸಿದ್ದರಾಮಯ್ಯಗೆ ಇದು ಕೊನೇ ವಿಜಯದಶಮಿ: ಭವಿಷ್ಯ ನುಡಿದ ಶಾಸಕ
ದಸರಾಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದು ವಿವಿಧ ಪಕ್ಷಗಳ ನಾಯಕರು ಹೇಳಿಕೆಗಳನ್ನು ನೀಡಿದ್ದರು. ಇಂದು ವಿಜಯದಶಮಿ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಅವರು ವಿಶ್ವವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಯ ವಿಚಾರ ಮುನ್ನೆಲೆಗೆ ಬಂದಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಇದು ಕೊನೆಯ ವಿಜಯದಶಮಿ. ಶೀಘ್ರದಲ್ಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಭವಿಷ್ಯ ನುಡಿದಿದ್ದಾರೆ. ನಮಗೆ ಬಂದಿರೋ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವರು ಸದ್ಯದಲ್ಲೇ ರಾಜೀನಾಮೆ ಕೊಡುತ್ತಾರೆ ಎಂದಿದ್ದಾರೆ.

ಸಿಎಂ ಸ್ಥಾನಕ್ಕೆ ಈಗಾಗಲೇ ಹಲವರು ಟವಲ್ ಹಾಕಿಕೊಂಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಗರಣ, ವಾಲ್ಮೀಕಿ ಹಗರಣಗಳು ಕಾಂಗ್ರೆಸ್ ಸರ್ಕಾರವನ್ನು ಸುತ್ತಿಕೊಂಡಿವೆ. ಇದನ್ನು ಮುಚ್ಚಿಡಲು ಕಾಂಗ್ರೆಸ್ ನಾನಾ ಕಸರತ್ತು ಮಾಡುತ್ತಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಕೇಸ್ ಅನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದ್ದು, ಇದನ್ನು ನಾವು ಬಿಡುವುದಿಲ್ಲ. ಈ ಬಗ್ಗೆ ನಾವು ಕಾನೂನಾತ್ಮಕ ಹೋರಾಟ ನಡೆಸಲಿದ್ದೇವೆ. ಈ ಸಂಬಂಧ ಸಭೆ ಮಾಡಿ ಹೋರಾಟಕ್ಕೆ ಸಜ್ಜಾಗುತ್ತೇವೆ.
ಕಾಂಗ್ರೆಸ್‌ನವರು ಸಿ.ಟಿ.ರವಿ ಅವರ ಮೇಲಿನ ಕೇಸ್ ಕೂಡ ವಾಪಸ್ ಪಡೆದಿದ್ದಾಗಿ ಹೇಳುತ್ತಿದ್ದಾರೆ. ಆದರೆ, ಸಿ.ಟಿ.ರವಿ ಅವರ ಮೇಲೆ ಯಾವುದೇ ಕೇಸ್ ಇರಲಿಲ್ಲ. ತಮ್ಮಲ್ಲಿನ ವಿಷಯ ತಿರುಚಲು ಸುಖಾಸುಮ್ಮನೆ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರೈತರ ಹೋರಾಟದ ವಿಚಾರ ಬಿಟ್ಟರೆ, ಬೇರೆ ಯಾವ ಕೇಸ್ ಕೂಡ ಇರಲಿಲ್ಲ ಎಂದು ಟೆಂಗಿನಕಾಯಿ ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ದಸರಾಗೂ ಮುನ್ನವೇ ರಾಜೀನಾಮೆ ನೀಡಲಿದ್ದಾರೆ. ಈ ಬಾರಿಯ ದಸರಾಗೆ ಹೊಸ ಸಿಎಂ ಚಾಲನೆ ನೀಡಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬಂದಿದ್ದವು. ಇತ್ತೀಚೆಗೆ ಸಚಿವ ಜಾರಕಿಹೊಳಿ ಅವರಿಂದ ಹೈಕಮಾಂಡ್ ಹಾಗೂ ಹಲವು ನಾಯಕರ ಜೊತೆಗಿನ ಭೇಟಿ ಕೂಡ ಇದಕ್ಕೆ ಪುಷ್ಟಿ ನೀಡಿತ್ತು. ಆದರೆ, ಅಂತಿಮವಾಗಿ ಈ ಬಾರಿ ದಸರಾಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಸೆಡ್ಡು ಹೊಡೆದಿದ್ದಾರೆ.
ಇನ್ನು ರಾಜೀನಾಮೆ ಕೊಡಲು ಸಾಧ್ಯವೇ ಇಲ್ಲ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಇತ್ತೀಚಿನ ವೇದಿಕೆಗಳಲ್ಲೂ ಘೋಷಿಸುತ್ತಲೇ ಇದ್ದಾರೆ. ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಕೋರ್ಟ್‌ನಲ್ಲಿ ಹಿನ್ನಡೆಯಾದ ಬಳಿಕ ರಾಜೀನಾಮೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಂದ ತೀವ್ರ ಒತ್ತಾಯ ಕೇಳಿಬಂದಿತ್ತು.
ಈ ವೇಳೆ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ಕಾಂಗ್ರೆಸ್, ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿತ್ತು. ಸಿದ್ದರಾಮಯ್ಯನವರು ಚೆಕ್ ಮೂಲಕ ಲಂಚ ಪಡೆದಿಲ್ಲ. ಕಮಿಷನ್‌ಗೆ ಪೀಡಿಸಿ ಯಾವುದೇ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣವಾಗಿಲ್ಲ. ಅಪ್ರಾಪ್ತ ಹೆಣ್ಣುಮಗಳಿಗೆ ದೌರ್ಜನ್ಯ ಎಸಗಿ ಪೋಕ್ಸೋ ಕೇಸ್ ಹಾಕಿಸಿಕೊಂಡಿಲ್ಲ ಎಂದು ಬಿಜೆಪಿ ನಾಯಕರ ಮೇಲಿರುವ ಆರೋಪಗಳನ್ನು ಉಲ್ಲೇಖಿಸಿ ತಿವಿದಿತ್ತು.












Click it and Unblock the Notifications