ಕಿಯೋನಿಕ್ಸ್‌ನಲ್ಲಿ 12 ಪರ್ಸೆಂಟ್ ಲಂಚದ ಆರೋಪ, ಇಬ್ಬರು ಕಾಂಗ್ರೆಸ್ ಶಾಸಕರಿಗೆ ಕುತ್ತು
ರಾಜ್ಯದಲ್ಲಿ ಇತ್ತೀಚೆಗೆ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣವು ರಾಜಕೀಯವಾಗಿ ಸದ್ದು ಮಾಡುತ್ತಿದೆ. ಈಗ ಮತ್ತೊಂದು ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ದೊಡ್ಡ ಆರೋಪವೊಂದು ಕೇಳಿಬಂದಿದೆ. ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ (ಕಿಯೋನಿಕ್ಸ್) ಬಾಕಿ ಬಿಲ್ ಬಿಡುಗಡೆ ಮಾಡಲು ಶಾಸಕರು ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದು, ಗುತ್ತಿಗೆದಾರ ಸಚಿನ್ ಆತ್ಮಹತ್ಯೆಯಲ್ಲಿ ಪ್ರಭಾವಿ ಸಚಿವರ ಹೆಸರು ಬಯಲು ಮಾಡಿದ ಬೆನ್ನಲ್ಲೇ ಈಗ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಬಾಕಿ ಬಿಲ್ ಬಿಡುಗಡೆ ಮಾಡದೆ ಸುಮಾರು 6,000 ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶಾಸಕ ಶರತ್ ಬಚ್ಚೇಗೌಡರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ 'ದಕ್ಷಿಣೆ' ಕೊಟ್ಟರಷ್ಟೇ ನಮ್ಮ ಪೇಮೆಂಟ್ ಆಗುವುದು ಎಂದು ಗುತ್ತಿಗೆದಾರರು ಹೇಳಿದ್ದಾರೆ. ಶೇ 12ರಷ್ಟು ಲಂಚ ಕೊಟ್ಟರಷ್ಟೇ ನಿಮ್ಮ ಗುತ್ತಿಗೆ ಹಣಕ್ಕೆ "ಮುಕ್ತಿ" ಎಂದು ಪ್ರಭಾವಿಗಳು ಹೇಳಿರುವುದು ನಿಜಕ್ಕೂ ದುರದೃಷ್ಟಕರ, ಅಧಿಕಾರದ ದುರುಪಯೋಗ ಹಾಗೂ ಮಿತಿಮೀರಿದ ಭ್ರಷ್ಟಾಚಾರ. ಸರ್ಕಾರ ಕೂಡಲೇ ಕಿಯೋನಿಕ್ಸ್ ಗುತ್ತಿಗೆದಾರರ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಸಚಿವ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಾಸಕ ಶರತ್ ಬಚ್ಚೆಗೌಡರ ಮೇಲೆ ಮಾಡುವ ಆಪಾದನೆಗಳನ್ನು ನಿಷ್ಪಕ್ಷವಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ರಾಜ್ಯ ಬಿಜೆಪಿ ಕೂಡ 60% ಕಮಿಷನ್ ಸರ್ಕಾರದಿಂದ ಗುತ್ತಿಗೆದಾರರಿಗೆ ಟಾರ್ಚರ್ ಭಾಗ್ಯ ಎಂದು ಕಿಡಿಕಾರಿದೆ. ಬಾಕಿ ಬಿಲ್ ಪಾವತಿಯಾಗದ ಕಾರಣ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಈಗ ದಯಾಮರಣಕ್ಕೆ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಅರ್ಜಿ ಸಲ್ಲಿಸಿರುವುದು ಭ್ರಷ್ಟ ಕರ್ನಾಟಕ ಸರ್ಕಾರದ 60% ಕಮಿಷನ್ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಪತ್ರದಲ್ಲಿ ಭ್ರಷ್ಟ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಮತ್ತೊಮ್ಮೆ ಉಲ್ಲೇಖವಾಗಿದೆ. ಅಲ್ಲದೇ ಶಾಸಕ ಶರತ್ ಬಚ್ಚೇಗೌಡ ಅವರ ಹೆಸರು ಸಹ ಪ್ರಸ್ತಾಪವಾಗಿದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಬಳಿಕವೂ ಸಚಿವರ ಹಣದ ದಾಹ ತಣಿದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಇಡೀ ಸರ್ಕಾರಿ ವ್ಯವಸ್ಥೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು, ಬೆದರಿಸುವ ಕೆಲಸವನ್ನು ಸಚಿವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಂದಲೂ ಸಹ ಗುತ್ತಿಗೆದಾರರ ಜೀವ ಹಿಂಡುವ ಕೆಲಸ ಈ ಸರ್ಕಾರದಲ್ಲಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಅವರೇ, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಗುತ್ತಿಗೆದಾರರ, ವೆಂಡರ್ಸ್‌ಗಳ ಬಾಕಿ ಹಣ ಪಾವತಿಸಿ ಎಂದು ಆಗ್ರಹಿಸಿದೆ.

ಮಾನ ಮರ್ಯಾದೆ ಇಲ್ಲದ ಲೂಟಿಕೋರ 60% ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು, ಗುತ್ತಿಗೆದಾರರಿಗೆ ಉಳಿಗಾಲವಿಲ್ಲ. ಕಿಯೋನಿಕ್ಸ್‌ನಲ್ಲಿ ಬಾಕಿ ಬಿಲ್ ಪಾವತಿಸದೆ ಕಿರುಕುಳ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸತ್ತು 500 ಮಂದಿ ವೆಂಡರ್ಸ್‌ಗಳು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ತನಿಖೆ ನೆಪದಲ್ಲಿ ನಮ್ಮ ಬದುಕನ್ನು ಸರ್ವನಾಶ ಮಾಡಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಂಡರೇ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಶರತ್ ಬಚ್ಚೇಗೌಡ ಅವರೇ ಕಾರಣ ಎಂದು ಆರೋಪಿಸಿರುವುದು ಹಾಗೂ ತಮಗೆ ದಯಾಮರಣ ನೀಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು ಇವರುಗಳ ಕಿರುಕಳ ಯಾವ ಮಟ್ಟಕ್ಕೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಕೂಡ ಹರಿಹಾಯ್ದಿದೆ.
ವೆಂಡರ್‌ಗಳು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಸ್ವತಃ ಮುಖ್ಯಮಂತ್ರಿಯೇ ಭ್ರಷ್ಟರಾಗಿದ್ದಾಗ ಯಾರಿಂದ ತಾನೇ ನ್ಯಾಯ ನಿರೀಕ್ಷಿಸಲು ಸಾಧ್ಯ. ಸಿಎಂ ಬಣಕ್ಕೆ 30% , ಡಿಸಿಎಂ ಬಣಕ್ಕೆ 30% ಕಮಿಷನ್ ಕೊಟ್ಟರಷ್ಟೆ ಬಾಕಿ ಬರುತ್ತದೆಯೋ? ಎಂದು ವ್ಯಂಗ್ಯವಾಡಿದೆ.












Click it and Unblock the Notifications