ಬಿಜೆಪಿಯ ಮನೇನಕೊಪ್ಪ, ಚಿಕ್ಕನಗೌಡರ್ ಕಾಂಗ್ರೆಸ್ ಸೇರ್ಪಡೆ? ಲಾಡ್ ಮೂಲಕ ಜೋಶಿಗೆ ಪೆಟ್ಟು ನೀಡಲು ತಂತ್ರ
ಬೆಂಗಳೂರು, ಆಗಸ್ಟ್ 28: ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಹಣಿಯಲು ಕಾಂಗ್ರೆಸ್ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಬಿಜೆಪಿಯ ಹಲವು ನಾಯಕರನ್ನು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ 'ಕೈ' ನಾಯಕರು ಕಾರ್ಯಪ್ರವೃತ್ತರಾಗಿದ್ದಾರೆ. ಇದು ಬಿಜೆಪಿಯನ್ನು ಕಂಗೆಡಿಸಿದೆ ಎಂದು ಹೇಳಲಾಗುತ್ತಿದೆ.
ಸಂತೋಷ್ ಲಾಡ್ ನೀಡಿರುವ ಸುಳಿವು ಏನು?
ಬಿಜೆಪಿ ಮಾಜಿ ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭಾನುವಾರ ಸುಳಿವು ನೀಡಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಎಸ್‌ಐ ಚಿಕ್ಕನಗೌಡರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾಹಿತಿ ಇದೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಬಿಜೆಪಿ ನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ತಮಗೆ ತಿಳಿದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ಆರಂಭವಾಗಿಲ್ಲ. ಸಮೀಕ್ಷೆ ನಡೆಸಿ ನಾಯಕರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ ಎಂದು ಲಾಡ್ ತಿಳಿಸಿದ್ದಾರೆ.
ಜೋಶಿಗೆ ಪೆಟ್ಟು ನೀಡಲು ಲಾಡ್ ಮೂಲಕ ತಂತ್ರ?
ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದರೂ ಆಗಿರುವ ಪ್ರಹ್ಲಾದ್ ಜೋಶಿ ಅವರನ್ನು ಹಣಿಯಲು ಲಾಡ್ ಮೂಲಕ ಕಾಂಗ್ರೆಸ್ ತಂತ್ರ ರೂಪಿಸಿದೆ ಎಂಬ ಮಾತುಗಳು ಕೇಳಿಬಂದಿವೆ. ನವಲಗುಂದ ಮಾಜಿ ಶಾಸಕ ಹಾಗೂ ಸಚಿವ ಶಂಕರ ಪಾಟೀಲ ಮನೇನಕೊಪ್ಪ ಹಾಗೂ ಬಿಜೆಪಿ ಮಾಜಿ ಶಾಸಕ ಚಿಕ್ಕನಗೌಡರ್ ಅವರನ್ನು ಸೆಳೆಯಲು ಲಾಡ್ ಅವರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಅವರ ವರ್ಚಸ್ಸನ್ನು ಕುಗ್ಗಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎನ್ನಲಾಗಿದೆ.

ಮನೇನಕೊಪ್ಪ ಹಾಗೂ ಚಿಕ್ಕನಗೌಡರ್ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಇವರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಕಾಂಗ್ರೆಸ್ ಲಿಂಗಾಯತ ಮತ ಬ್ಯಾಂಕ್‌ಗೆ ಕೈಹಾಕಲು ತಂತ್ರ ರೂಪಿಸಿದೆ. ಈ ಮೂಲಕ 'ಲಿಂಗಾಯತ ವರ್ಸ್‌ಸ್ ಬ್ರಾಹ್ಮಣ' ನರೆಟಿವ್ ಅನ್ನು ಲೋಕಸಭೆ ಚುನಾವಣೆಯಲ್ಲೂ ಉಳಿಸಿಕೊಳ್ಳಲು ಕೈ ಪಾಳಯ ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
ಜಗದೀಶ್ ಶೆಟ್ಟರ್ ಹೇಳಿದ್ದೇನು?
ಕರ್ನಾಟಕ ವಿಧಾನಸಭೆಗೂ ಮುನ್ನೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರು ರಾಜಕೀಯ ಧ್ರುವೀಕರಣದ ಕುರಿತು ಮಾತನಾಡಿದ್ದಾರೆ. ಬಿಜೆಪಿಯ ಕಾರ್ಯಕರ್ತರಿಂದ ಹಿಡಿದು ದೊಡ್ಡ ನಾಯಕರುಗಳೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದು ಆಪರೇಷನ್ ಹಸ್ತವಲ್ಲ. ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯುತ್ತಿದೆ. 10 ಅಥವಾ 20 ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಬಹುದು ಎಂದು ಅವರು ಸುಳಿವು ನೀಡಿದ್ದಾರೆ.












Click it and Unblock the Notifications