114 ನಿವೇಶಗಳನ್ನು ಬಿಜೆಪಿ ನಾಯಕರು ಖರೀದಿಸಿದ್ದರು: ಸಂತೋಷ್ ಲಾಡ್ ಸ್ಫೋಟಕ ಹೇಳಿಕೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಕ್ಲೀನ್ ಚೀಟ್ ಸಿಕ್ಕಿದೆ. ಆದರೆ, ಮುಖ್ಯಮಂತ್ರಿಗೆ ಕ್ಲೀನ್ ಚೀಟಿ ಸಿಕ್ಕಿರುವ ಬಗ್ಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಆದರೆ, ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಾಯಕ್ಕೆ ಧಾವಿಸಿದ್ದಾರೆ. ಬಿಜೆಪಿ ಸರಣಿ ಟ್ವೀಟ್‌ಗಳ ಮೂಲಕ ಲೋಕಾಯುಕ್ತ ರಿಪೋರ್ಟ್‌ಗೆ ವಿರೋಧ ವ್ಯಕ್ತಪಡಿಸಿದೆ. ಇದೀಗ ಬಿಜೆಪಿ ಟೀಕೆಗಳಿಗೆ ಉತ್ತರಿಸಿರುವ ಸಚಿವ ಸಂತೋಷ್ ಲಾಡ್ ಅವರು ಬಿಜೆಪಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕೆಲವರು 114 ನಿವೇಶಗಳನ್ನು ಖರೀದಿಸಿದ್ದರು. ಆ ಕುರಿತು ಯಾರೂ ಪ್ರಶ್ನಿಸಿಲ್ಲ. ಅರ್ಹತೆಯ ಮೇಲೆ 14 ನಿವೇಶನ ಪಡೆದ ಮುಖ್ಯಮಂತ್ರಿ ಅವರ ಪತ್ನಿಯನ್ನು ಪ್ರಶ್ನಿಸಿದರು. ಇದೀಗ ನ್ಯಾಯಾಲಯ ಅವರಿಗೆ ಕ್ಲೀನ್ ಚಿಟ್ ನೀಡಿ ನ್ಯಾಯ ಒದಗಿಸಿದೆ ಅಂತ ಅವರು ಹೇಳಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿದರು. ಮುಡಾ ಹಗರಣ ಎಂದು ಆರೋಪಿಸಿದರು. ಇದೀಗ ನ್ಯಾಯಾಲಯದಲ್ಲಿ ಅವರಿಗೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಹೆಜ್ಜೆ ಹೆಜ್ಜೆಗೂ ಬಿಜೆಪಿ ರಾಜಕಾರಣ ಮಾಡುತ್ತಲೇ ಬಂದಿದೆ. ಅವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಏನೇನು ಹಗರಣ ಮಾಡಿದ್ದರು. ಯಾರ್ ಯಾರು ಎಷ್ಟೆಷ್ಟು ನಿವೇಶನ ಪಡೆದಿದ್ದರು ಎಂದು ಯಾರೂ ಅವರನ್ನು ಪ್ರಶ್ನಿಸಿಲ್ಲ. ಒಬ್ಬರು 125 ನಿವೇಶನಗಳನ್ನು ಪಡೆದು, 111 ನಿವೇಶನ ಮಾರಾಟ ಮಾಡಿದ್ದಾರೆ. ಅದನ್ನು ಪ್ರಶ್ನಿಸದವರು, ಸಿಎಂ ಪತ್ನಿ ಅರ್ಹತೆ ಮೇಲೆ ಪಡೆದ 14 ನಿವೇಶನದ ಬಗ್ಗೆ ಪ್ರಶ್ನೆ ಮಾಡಿದರು. ಸತ್ಯ ಏನೆಂಬುದು ರಾಜ್ಯದ ಜನತೆಗೆ ತಿಳಿಯಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಹಿಗ್ಗಾಮುಗ್ಗಾ ಟೆಂಡರ್: ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹಿಗ್ಗಾಮುಗ್ಗಾ ಟೆಂಡರ್ ಕರೆದ ಪರಿಣಾಮ, ಗುತ್ತಿಗೆದಾರರಿಗೆ ಹಣ ಪಾವತಿಸಲು ಪಾಲಿಕೆಯಿಂದ ಸಾಧ್ಯವಾಗುತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ಹಣ ಖರ್ಚಾಗಿದೆ. ಇಲ್ಲಿ ಆದಾಯ ಕಡಿಮೆಯಾಗಿದೆ. ಪರಿಹಾರವಾಗಿ ಆದಾಯದ ಮೂಲ ಹುಡುಕಬೇಕಿದೆ. ಈ ಕುರಿತು ಸರ್ಕಾರದ ಕಾರ್ಯದರ್ಶಿ, ಮೇಯರ್ ಮತ್ತು ಸದಸ್ಯರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಗುತ್ತಿಗೆದಾರರಿಗೆ ಹಳೆಯ ಬಾಕಿ ₹120 ಕೋಟಿ, ಹೊಸ ಕಾಮಗಾರಿಯದ್ದು ₹200 ಕೋಟಿ ನೀಡಬೇಕಿದೆ. 2024ರ ಬಜೆಟ್‌ನಲ್ಲಿ ಮೀಸಲಿಟ್ಟ ಹಣವೆಲ್ಲ ಮುಕ್ತಾಯವಾಗಿದೆ. 2025ರ ಬಜೆಟ್‌ನಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು, ಕಾಮಗಾರಿಯನ್ನು ಕಡಿಮೆ ಮಾಡಬೇಕಿದೆ ಎಂದು ಹೇಳಿದರು.
ಇನ್ನು ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಮಾತಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು, ಯಾವಾಗ ಆಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಅಧ್ಯಕ್ಷರು ಬದಲಾಗಬೇಕು, ಯಾರಾಗಬೇಕು ಎನ್ನುವ ಕುರಿತು ನಾನು ಯಾವ ಪ್ರತಿಕ್ರಿಯೆಯೂ ನೀಡುವುದಿಲ್ಲ ಎಂದಷ್ಟೇ ಅವರು ಹೇಳಿದರು.












Click it and Unblock the Notifications