ಜಾತಿ ಗಣತಿ ವಿಚಾರದಲ್ಲಿ ಸಚಿವರ ಬ್ಲಾಕ್‌ಮೇಲ್: ಅಶೋಕ್ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜಾತಿಗಣತಿ ವರದಿ ಜಾರಿ ವಿಚಾರವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಲ್ಲೆಡೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಸದ್ಯಕ್ಕೆ ಈ ವರದಿ ಜಾರಿಗೆ ಮೀನಮೇಷ ಎಣಿಸುತ್ತಿದೆ. ಅಲ್ಲದೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಜಾರಿ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದಾಗಿ ಮುಂದೂಡಿದೆ. ಈ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್ ಅವರು ಅನುಮಾನ ವ್ಯಕ್ತಪಡಿಸಿದ್ದು, ಕೆಲ ಪ್ರಶ್ನೆಗಳನ್ನು ಸಿದ್ದರಾಮಯ್ಯ ಸರ್ಕಾರದ ಮುಂದಿಟ್ಟಿದ್ದಾರೆ. 10 ವರ್ಷಗಳ ಹಿಂದೆ ಆರಂಭವಾದ ಸಿಎಂ ಸಿದ್ದರಾಮಯ್ಯ ಅವರ ಜಾತಿ ಜನಗಣತಿ ಎಂಬ ಬೃಹನ್ನಾಟಕ ಮೆಗಾ ಸೀರಿಯಲ್ ರೀತಿ ಇನ್ನೂ ಮುಂದುವರೆಯುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಶೂನ್ಯತೆ ಬಗ್ಗೆ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರುವ ಜನಾಕ್ರೋಶದ ಕಿಚ್ಚಿನಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿಯನ್ನ ಮುನ್ನೆಲೆಗೆ ತಂದಿರುವ ಸಿಎಂ ಸಿದ್ದರಾಮಯ್ಯನವರು ತಮ್ಮ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶದ ಜ್ವಾಲೆ ಕಡಿಮೆಯಾಗುವ ತನಕ ಜಾತಿ ಜನಗಣತಿ ಜಪ ಮಾಡುತ್ತಲೇ ಇರುವ ನಿರ್ಧಾರ ಮಾಡಿದಂತಿದೆ ಎಂದು ದೂರಿದ್ದಾರೆ.

ಅಸಲಿಗೆ ವಿಶೇಷ ಸಚಿವ ಸಂಪುಟ ಸಭೆಯಿಂದ ನೀವು ಸಾಧಿಸಿದ್ದಾದರೂ ಏನು? ಜಾತಿ ಜನಗಣತಿ ವರದಿ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಅಂದರೆ ಅದಕ್ಕೆ ಕಾರಣವೇನು? ಜಾತಿ ಜನಗಣತಿ ವರದಿ ಬಗ್ಗೆ ಎಲ್ಲ ಸಚಿವರಿಗೂ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಇದೆ. ಹಾಗಾದರೆ ಸಚಿವ ಸಂಪುಟದಲ್ಲಿ ಪರಸ್ಪರ ವಿಶ್ವಾಸದ ಕೊರತೆ ಇದೆಯೇ? ಎಂದು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ. ಲಿಖಿತ ರೂಪದಲ್ಲಿ ಉತ್ತರ ಪಡೆದುಕೊಳ್ಳುವುದರ ಹಿಂದೆ ಸಚಿವರನ್ನು ಬ್ಲಾಕ್ ಮೇಲ್ ಮಾಡುವ, ಅವರ ಹೇಳಿಕೆಗಳನ್ನ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಯಿದಿದೆಯೇ? ಜಾತಿ ಜನಗಣತಿಯನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ನಡೆಸುವುದರ ಬಗ್ಗೆ ಚರ್ಚೆ ನಡೆಯಿತೇ? ಎಂದು ಆರ್.ಅಶೋಕ್ ಕೇಳಿದ್ದಾರೆ.
ಭಂಡ ಹಾಗೂ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಸಮಾಜವನ್ನು ವಿಭಜಿಸಲು ಸದಾ ಸಿದ್ದರು. ಸಂಘಟನೆಗಿಂತ ವಿಘಟನೆಗೆ ಅತಿ ಹೆಚ್ಚು ಒತ್ತು ನೀಡುವ ಸಿದ್ದರಾಮಯ್ಯ ಅವರು ಈ ಬಾರಿ ಕೈ ಹಾಕಿದ್ದು ಅಖಂಡ ಹಿಂದೂ ಧರ್ಮದ ವಿಭಜನೆಗೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಅಖಂಡ ಹಿಂದೂ ಸಮಾಜವನ್ನು ವಿಭಜಿಸುವ ಜೊತೆಗೆ ಜಾತಿಗಳಲ್ಲಿನ ಉಪ ಪಂಗಡಗಳ ಒಳಗಿರುವ ಸಣ್ಣ ಸಂಘರ್ಷವನ್ನು ದೊಡ್ಡ ಜ್ವಾಲೆಯನ್ನಾಗಿಸಿ, ತಾವು ಸದಾ ಜಪಿಸುವ ಮುಸಲ್ಮಾನರಿಗೆ ಅದರಲ್ಲಿ ಬೆಂಕಿ ಕಾಯಿಸಿಕೊಳ್ಳಲು ಅವಕಾಶ ಸೃಷ್ಟಿಸಬೇಕು ಎಂಬುದು ಸಿದ್ದರಾಮಯ್ಯ ಅವರ ದೂರಾಲೋಚನೆಯಾಗಿತ್ತು. ಈ ಕಾರಣಕ್ಕಾಗಿ ಜಾರಿ ತಂದಿದ್ದೆ ಜಾತಿಗಣತಿ ಎಂದು ತಿವಿದಿದೆ.

ಸಿಎಂ ಸಿದ್ದರಾಮಯ್ಯ ಅವರು ಮಾಡಿಸಿದ ಜಾತಿಗಣತಿ ವೈಜ್ಞಾನಿಕವಲ್ಲ, ಇದೊಂದು ಸಿದ್ದರಾಮಯ್ಯ ಮತ್ತವರ ವಂದಿಮಾಗಧ ಪಟಾಲಂ ತಯಾರಿಸಿದ ಬೋಗಸ್ ಅಂಶಗಳನ್ನೊಳಗೊಂಡ ವರದಿ ಎಂಬುದು ಸಾಬೀತಾಗುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರ ಸದ್ಯ ಬಿಡುಗಡೆಗೊಳಿಸಿರುವ ಈ ಬೋಗಸ್ ಜಾತಿಗಣತಿ ವರದಿಯನ್ನು ಕೇವಲ ಮುಸ್ಲಿಂ ಸಮುದಾಯ ಸ್ವಾಗತಿಸಿದೆಯೇ, ಹೊರತು ಉಳಿದೆಲ್ಲ ಸಮುದಾಯಗಳು ಅತ್ಯಂತ ಕಟುವಾದ ಶಬ್ದದಲ್ಲಿ ಖಂಡಿಸಿವೆ. ಇನ್ನೂ ಮುಂದುವರೆದು ಒಂದು ವೇಳೆ ಜಾತಿಗಣತಿಯನ್ನು ಅನುಷ್ಠಾನಕ್ಕೆ ತಂದರೆ ರಕ್ತಕ್ರಾಂತಿಯಾಗುತ್ತದೆ ಎಂಬ ಎಚ್ಚರಿಕೆ ಸಹ ನೀಡಿವೆ ಎಂದು ಬಿಜೆಪಿ ಹೇಳಿದೆ.
ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯ ಅತ್ಯಂತ ದೊಡ್ಡ ಸಮುದಾಯ ಎಂಬುದನ್ನು ಬಿಂಬಿಸುವ ಸಲುವಾಗಿ ಸಿದ್ದರಾಮಯ್ಯ ಅವರು ಈ ಜಾತಿಗಣತಿ ಎಂಬ ವರದಿಯನ್ನು ತಯಾರಿಸಿ, ಕರ್ನಾಟಕದ ಉಳಿದೆಲ್ಲಾ ಸಮುದಾಯಗಳಿಗೆ ಮಹಾದ್ರೋಹವೆಸಗಿರುವುದು ಎದ್ದು ಕಾಣುತ್ತಿದೆ. ಸಂಪೂರ್ಣ ಅವೈಜ್ಞಾನಿಕವಾಗಿ ತಯಾರಿಸಿರುವ ಈ ಅವೈಜ್ಞಾನಿಕ ಜಾತಿಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ಬಿಜೆಪಿ ಆಗ್ರಹಿಸಿದೆ.












Click it and Unblock the Notifications