ಕನ್ನಡ ಧ್ವಜವೇ ಇಲ್ಲದೆ ಕನ್ನಡ ರಾಜ್ಯೋತ್ಸವ: ಸರ್ಕಾರದ ವಿರುದ್ಧ ಆಕ್ರೋಶ
ಬೆಂಗಳೂರು, ನವೆಂಬರ್ 1: ಕನ್ನಡ ರಾಜ್ಯೋತ್ಸವ ಎಂದರೆ ಸಾಕು ಬಿಳಿ ಜುಬ್ಬ, ಬಿಳಿ ಪಂಚೆ ತೊಟ್ಟು , ಪ್ಯಾಂಟ್ ತೊಟ್ಟು ಸೈಕಲ್, ಬೈಕ್‌ಗಳಲ್ಲಿ ಕನ್ನಡ ಧ್ವಜ ಹಿಡಿದು ಜಾಥಾ ಹೊರಡೋದೆ.
ಆದರೆ ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಕನ್ನಡ ರಾಜ್ಯೋತ್ಸವೆಂದರೆ ಎಲ್ಲೆಲ್ಲೂ ಕನ್ನಡ ಬಾವುಟದ್ದೇ ಕಲರವ, ಉದ್ದಗಲಕ್ಕೂ ಕನ್ನಡದ ಕಾರ್ಯಕ್ರಮಗಳನ್ನು ಕಾಣುತ್ತೇವೆ. ಆದರೆ ಈ ಬಾರಿ ಕನ್ನಡ ಬಾವುಟ ವಿಲ್ಲದೆಯೇ ಕನ್ನಡ ರಾಜ್ಯೋತ್ಸವ ಆಚರಿಸಿ ಎಂದು ಹೇಳಿರುವ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಾಡ ಬಾವುಟ ಇಲ್ಲದೆ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಾಕ್ಷಿಯಾಗಿರುವುದು ಇದೀಗ ರಾಜ್ಯಾದ್ಯಂತ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾರಿಸಬಾರದು, ರಾಷ್ಟ್ರಧ್ವಜ ಇರುವಾಗ ಪ್ರಾದೇಶಿಕ ಬಾವುಟಗಳಿಗೆ ಮಾನ್ಯತೆ ಇಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ಕಳೆದ ಎರಡು ವರ್ಷದಿಂದ ಖ್ಯಾತೆ ತೆಗೆಯುತ್ತಲೇ ಇದೆ. ಆದರೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಧ್ವಜ ರಚನೆಗೆ ಸಮಿತಿ ರಚಿಸಿ ನೂತನ ಧ್ವಜವನ್ನು ವಿನ್ಯಾಸಗೊಳಿಸಿದ್ದರು. ಅಲ್ಲದೆ, ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಬಾವುಟ ಹಾರಿಸುವುದು ಕನ್ನಡಿಗರ ಹಕ್ಕು ಎಂದು ಪ್ರತಿಪಾದಿಸಿದ್ದರು.
ಆದರೂ ಕೆಲವೆಡೆ ಕನ್ನಡ ಬಾವುಟವನ್ನು ಹಾರಿಸಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡ ಬಾವುಟ ಕಂಗೊಳಿಸಬೇಕಾಗಿದ್ದ ದಿನದಂದು ರಾಜ್ಯ ಸರ್ಕಾರ ಕನ್ನಡ ಬಾವುಟವನ್ನೇ ಹಾರಿಸದಿರುವುದು ಇದೀಗ ಹಲವಾರು ಚರ್ಚೆ ಮತ್ತು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯ ಸರ್ಕಾರ ಹೀಗೆ ಕನ್ನಡ ಬಾವುಟ ಇಲ್ಲದೆ ರಾಜ್ಯೋತ್ಸವ ಆಚರಿಸಿ ನಾಡಿಗೆ ಅಪಮಾನ ಎಸಗಿದೆ ಎಂದು ಕೆಲವರು ಈಗಾಗಲೇ ಟೀಕೆ ಮುಂದುವರೆಸಿದ್ದಾರೆ. ಇದು ಯಾವ ಹಂತಕ್ಕೆ ಬಂದು ತಲುಪಲಿದೆ ಎಂದು ಕಾದು ನೋಡಬೇಕಿದೆ.
ಆದರೆ, ಬೀದರ್, ಬಾಗಲಕೋಟೆ, ಹಾಸನ, ರಾಯಚೂರು, ಉಡುಪಿ, ಶಿವಮೊಗ್ಗ, ರಾಮನಗರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಲಾಗಿದೆ. ಈ ಯಾವ ಜಿಲ್ಲೆಯಲ್ಲೂ ಕನ್ನಡ ಧ್ವಜ ಹಾರಿಸಲಾಗಿಲ್ಲ.












Click it and Unblock the Notifications