ಲಾಕ್ಡೌನ್ ಹಿಂದೆ ಸಿದ್ದರಾಮಯ್ಯ ಒತ್ತಡ: ಏನಿದು ಗುರುತರ ಆರೋಪ?
ಓಮಿಕ್ರಾನ್ ಕೇಸುಗಳಲ್ಲಿ ಭಾರೀ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರಕಾರ ವೀಕೆಂಡ್ ಕರ್ಫ್ಯೂವನ್ನು ಈ ವಾರಾಂತ್ಯದಲ್ಲೇ ಅನ್ವಯವಾಗುವಂತೆ ಜಾರಿಗೆ ತಂದಿದೆ. ಜೊತೆಗೆ, ಇನ್ನಷ್ಟು ಹೊಸ ರೂಲ್ಸ್ ಅನ್ನು ಪ್ರಕಟಿಸಿದೆ.
ಮಂಗಳವಾರ (ಜ 4) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮೂರು ತಾಸುಗಳ ಮ್ಯಾರಥಾನ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಸರಕಾರದ ತೀರ್ಮಾನವನ್ನು ಪ್ರಕಟಿಸಿದ್ದಾರೆ.
ಜೀವ ಉಳಿಯಬೇಕು, ಜೀವನವೂ ನಡೆಯಬೇಕೆಂದು ಎರಡು ತಾಸಿನ ಹಿಂದೆ ಹೇಳಿದ್ದ ಸರಕಾರ, ವೀಕೆಂಡ್ ಕರ್ಫ್ಯೂ ಅನ್ನು ಜಾರಿಗೆ ತಂದಿದೆ. ಸ್ವಾಭಾವಿಕವಾಗಿ ವರ್ತಕರು, ಸಂಘ ಸಂಸ್ಥೆಗಳು, ಟ್ರಾವೆಲ್ ಯೂನಿಯನ್, ಹೊಟೇಲ್ ಮಾಲೀಕರು ಮತ್ತಿತರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಇನ್ನು, ಕಾಂಗ್ರೆಸ್ ಪಕ್ಷ ವೀಕೆಂಡ್ ಕರ್ಫ್ಯೂ ಹಾಕಿರುವುದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದೆ. ಇದು ಬಿಜೆಪಿ ಲಾಕ್ಡೌನ್ ಎಂದು ಲೇವಡಿ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆ ಇದೇ ಬರುವ ಭಾನುವಾರದಿಂದ (ಜ 9) ಆರಂಭವಾಗಲಿದೆ. ಲಾಕ್ಡೌನ್ ಸರಕಾರ ವಿಧಿಸಿರುವುದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ.

ಮೇಕೆದಾಟು ಪಾದಯಾತ್ರೆಯನ್ನು ಟಾರ್ಗೆಟ್ ಮಾಡಿ ವೀಕೆಂಡ್ ಕರ್ಫ್ಯೂ
ಕಾಂಗ್ರೆಸ್ಸಿನವರ ಮೇಕೆದಾಟು ಪಾದಯಾತ್ರೆಯನ್ನು ಟಾರ್ಗೆಟ್ ಮಾಡಿ ವೀಕೆಂಡ್ ಕರ್ಫ್ಯೂ ವಿಧಿಸಿರುವುದಲ್ಲ. ಇದು ರಾಜ್ಯದ ಜನತೆಯ ಹಿತದೃಷ್ಟಿಗಾಗಿ ತೆಗೆದುಕೊಂಡಿರುವ ನಿರ್ಧಾರ. ಸರಕಾರದ ನಿರ್ಧಾರ ಎಲ್ಲರಿಗೂ ಅನ್ವಯವಾಗುತ್ತದೆ. ಅಸಲಿಗೆ, ಲಾಕ್ಡೌನ್ ಹೇರಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸರಕಾರಕ್ಕೆ ಒತ್ತಡವನ್ನು ಹೇರುತ್ತಿದ್ದರು ಎನ್ನುವ ಬಿಜೆಪಿ ನಾಯಕರೊಬ್ಬರ ಹೇಳಿಕೆ, ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಇದು ಕೋವಿಡ್ ಲಾಕ್ಡೌನ್ ಅಲ್ಲ, ಇದು ಬಿಜೆಪಿ ಲಾಕ್ಡೌನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
"ಆರೋಗ್ಯ ಸಚಿವ ಸುಧಾಕರ್ ಅಣ್ಣ ಅವರು ನಮಗೆ ಉಪದೇಶ ಮಾಡುವ ಬದಲು, ತಮ್ಮದೇ ಕೇಂದ್ರ ಸರಕಾರಕ್ಕೆ ನೀತಿಪಾಠ ಮಾಡಲಿ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಪಾಲನ್ನು ತೆಗೆದುಕೊಂಡು ಬರಲಿ. ಪ್ರಧಾನಮಂತ್ರಿಯವರು ಚುನಾವಣಾ ಸಭೆಯನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿಯವರೂ ರಾಜ್ಯದೆಲ್ಲಡೆ ಸುತ್ತಾಡಿ ರ‍್ಯಾಲಿಯನ್ನು ಮಾಡಿದರು. ಆಗ ಕೊರೊನಾ ಇರಲಿಲ್ಲವೇ, ಮೋದಿಯವರ ಸಭೆಯಿಂದ ಕೊರೊನಾ ದೂರ ಉಳಿಯಲಿದೆಯೇ? ಇದು ಕೋವಿಡ್ ಲಾಕ್ಡೌನ್ ಅಲ್ಲ, ಇದು ಬಿಜೆಪಿ ಲಾಕ್ಡೌನ್"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಆರೋಪಿಸಿದ್ದಾರೆ.

ರೆಡ್ಡಿಯವರ ಸವಾಲನ್ನು ಸ್ವೀಕರಿಸಿದ್ದ ಕಾಂಗ್ರೆಸ್ಸಿನವರು ಬಳ್ಳಾರಿ ಪಾದಯಾತ್ರೆ
ಅಂದು ಸಚಿವರಾಗಿದ್ದ ಜನಾರ್ಧನ ರೆಡ್ಡಿಯವರ ಸವಾಲನ್ನು ಸ್ವೀಕರಿಸಿದ್ದ ಕಾಂಗ್ರೆಸ್ಸಿನವರು ಬಳ್ಳಾರಿ ಪಾದಯಾತ್ರೆಯನ್ನು ನಡೆಸಿದ್ದರು. ಭರ್ಜರಿ ಯಶಸ್ಸನ್ನು ಪಡೆದಿದ್ದ ಆ ಪಾದಯಾತ್ರೆಯ ಉಸ್ತುವಾರಿಯನ್ನು ನೇರವಾಗಿ ಸಿದ್ದರಾಮಯ್ಯನವರು ವಹಿಸಿಕೊಂಡಿದ್ದರು. ಇದಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಈಗ, ಮೇಕೆದಾಟು ಸರದಿ.

ಬಿಜೆಪಿಯ ಮೇಲಿನ ಆರೋಪ, ಸುಮ್ಮನೆ ಗಾಳಿಯಲ್ಲಿ ಕಲ್ಲು ತೂರಿದ್ದೋ ಗೊತ್ತಿಲ್ಲ?
ಜನವರಿ ಒಂಬತ್ತರಿಂದ ಸಂಗಮದಿಂದ ಆರಂಭವಾಗಲಿರುವ ಮೇಕೆದಾಟು ಪಾದಯಾತ್ರೆ ಜನವರಿ ಹತ್ತೊಂಬತ್ತರಂದು ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯ ಮೂಲಕ ಮುಕ್ತಾಯಗೊಳ್ಳಲಿದೆ. ಈ ಪಾದಯಾತ್ರೆಯ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ನಡುವೆ, ಬಿಜೆಪಿಯ ಮೇಲಿನ ಆರೋಪ ಹೊಸ ಆವಾಂತರ ಸೃಷ್ಟಿಸುವ ಸಾಧ್ಯತೆಯಿಲ್ಲದಿಲ್ಲ. ಆದರೆ, ಬಿಜೆಪಿಯ ಮೇಲಿನ ಆರೋಪ, ಸುಮ್ಮನೆ ಗಾಳಿಯಲ್ಲಿ ಕಲ್ಲು ತೂರಿದ್ದೋ ಗೊತ್ತಿಲ್ಲ?












Click it and Unblock the Notifications