ಗ್ಯಾರಂಟಿಗಳಿಗೆ ತಿಲಾಂಜಲಿ ಇಟ್ಟ ಭ್ರಷ್ಟ A1 ಆರೋಪಿ ಸಿದ್ದರಾಮಯ್ಯ: ಬಿಜೆಪಿ ಆರೋಪ
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. ಎಲ್ಲ ದಾಖಲೆಗಳಿದ್ದರೂ ರಾಜ್ಯದ 1.82 ಲಕ್ಷ ಮಹಿಳೆಯರಿಗೆ ಒಂದೂ ಕಂತಿನ ಹಣ ಖಾತೆಗೆ ಜಮೆಯಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವಿಚಾರವಾಗಿ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ, ಗ್ಯಾರಂಟಿಗಳಿಗೆ ಕಾಂಗ್ರೆಸ್ ಸರ್ಕಾರ ತಿಲಾಂಜಲಿ ಇಟ್ಟಿದೆ ಎಂದು ಗುಡುಗಿದೆ.
ಈ ಬಗ್ಗೆ ಟ್ವೀಟ್ ಮಾಡಿ, ರಾಜ್ಯದ 1.82 ಲಕ್ಷ ಗೃಹಲಕ್ಷ್ಮಿಯರಿಗೆ ಎಲ್ಲಾ ದಾಖಲೆಗಳಿದ್ದರೂ ಭ್ರಷ್ಟ ಕಾಂಗ್ರೆಸ್ ಸರ್ಕಾರ ಇದುವರೆಗೆ ಒಂದೇ ಒಂದು ಕಂತಿನ ಹಣವನ್ನು ಖಾತೆಗೆ ಜಮೆ ಮಾಡಿಲ್ಲ. ಆದರೂ ದಲಿತರ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದ ಸುಮಾರು 26 ಸಾವಿರ ಕೋಟಿ ರೂಪಾಯಿ ಯಾರ ಖಾತೆಗೆ ಹೋಗಿದೆ ಎಂಬ ಲೆಕ್ಕವೂ ಇಲ್ಲ ಎಂದು ವಾಗ್ದಾಳಿ ನಡೆಸಿದೆ.

ಲೋಕಸಭಾ ಚುನಾವಣೆ ಮುಗಿದ ಬಳಿಕ ಗ್ಯಾರಂಟಿಗಳಿಗೆ ತಿಲಾಂಜಲಿ ಇಟ್ಟಿರುವ ಭ್ರಷ್ಟ A1 ಆರೋಪಿ ಸಿದ್ದರಾಮಯ್ಯ ಅವರು, ದಲಿತರ ಭೂಮಿ ಕಬಳಿಸಿ ಖಜಾನೆ ಲೂಟಿ ಮಾಡಿ ಬೆಲೆ ಏರಿಕೆ ಮಾಡಿದ್ದು ಬಿಟ್ಟರೇ ಮತ್ತೊಂದು ಸಾಧನೆ ಇಲ್ಲ ಎಂದು ಲೇವಡಿ ಮಾಡಿದೆ.
ಇನ್ನು ಗೃಹಲಕ್ಷ್ಮಿ ಹಣ ಬರದಿರಲು ಇರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದ್ದಾರೆ. ಯೋಜನೆ ಜಾರಿಯಾಗಿ ಒಂದು ವರ್ಷ ಕಳೆದಿದ್ದು, ಜುಲೈ ಹಾಗೂ ಆಗಸ್ಟ್ ಕಂತಿನ ಹಣ ಇನ್ನೂ ಫಲಾನುಭವಿಗಳಿಗೆ ಜಮೆ ಆಗಿಲ್ಲ ಎಂದು ಹಲವು ಜಿಲ್ಲೆಗಳಲ್ಲಿ ದೂರು ಕೇಳಿಬಂದಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಬಳಿಕ ಆಗಸ್ಟ್ ತಿಂಗಳ ಹಣ ಕೂಡ ಖಾತೆಗಳಿಗೆ ಜಮೆ ಆಗಲಿದೆ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರದ ನಿರಂತರವಾಗಿ ನೀಡಲಿದೆ. ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದಿದ್ದಾರೆ.
ಇತ್ತೀಚೆಗೆ ಅರಭಾವಿ ವಿಧಾನಸಭಾ ಕ್ಷೇತ್ರದ ಮೂಡಲಗಿ ಪಟ್ಟಣದ ನಿವಾಸಿ ಆಶಾ ಸು ತಳವಾರ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡು, ಬದುಕು ಕಟ್ಟಿಕೊಂಡಿರುವುದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಹಂಚಿಕೊಂಡಿದ್ದರು. ಗೃಹಲಕ್ಷ್ಮಿ ಯೋಜನೆ ಇಂದು ಲಕ್ಷಾಂತರ ಮಹಿಳೆಯರ ಕನಸುಗಳನ್ನು ಸಾಕಾರಗೊಳಿಸಿ, ನೆಮ್ಮದಿಯ ಜೀವನ ನಡೆಸಲು ದಾರಿ ಮಾಡಿಕೊಟ್ಟಿದೆ ಎಂದು ಹೇಳಿಕೊಂಡಿದ್ದರು.
ಇದೀಗ ಸಾಲು ಸಾಲು ಹಬ್ಬಗಳಿರುವುದರಿಂದ ಮಹಿಳೆಯರು ತಮಗೆ ಗೃಹಲಕ್ಷ್ಮಿ ಯಾವಾಗ ಬರುತ್ತದೆ ಎಂದು ಬಕಪಕ್ಷಿಗಳಂತೆ ಕಾಯುತ್ತಾ ಕುಳಿತಿದ್ದಾರೆ. ಹಣ ಬಂದರೆ ನೆಮ್ಮದಿಯಾಗಿ ಹಬ್ಬ ಆಚರಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications