ಔಷಧಿ ಖರೀದಿಯಲ್ಲಿ ಭಾರೀ ಅಕ್ರಮ : ಬಿಜೆಪಿ ಆರೋಪ

Posted By:
Subscribe to Oneindia Kannada

ಬೆಂಗಳೂರು, ಮೇ 21 : ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ರಾಜ್ಯ ಆರೋಗ್ಯ ಅಭಿಯಾನ ಮಂಡಳಿಯಿಂದ ಔಷಧಿ ಖರೀದಿ ಮಾಡಿದ ಹಾಗೂ ಆರೋಗ್ಯ ಸೇವೆ ಒದಗಿಸಿದ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಎನ್‌.ಆರ್.ರಮೇಶ್ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ ರಾಜ್ಯ ಆರೋಗ್ಯ ಅಭಿಯಾನ ಮಂಡಳಿಯಿಂದ ಔಷಧಿ ಖರೀದಿ ಮಾಡಿದ ಹಾಗೂ ಆರೋಗ್ಯ ಸೇವೆ ಒದಗಿಸಿದ ಹೆಸರಿನಲ್ಲಿ ವಂಚನೆ ಮಾಡಲಾಗಿದೆ' ಎಂದು ಆರೋಪಿಸಿದರು. [ಜನ ಸಾಮಾನ್ಯರಿಗೂ ಏರ್ ಆಂಬುಲೆನ್ಸ್ ಸೌಲಭ್ಯ ಇನ್ನೇನು ಲಭ್ಯ]

ut khader

'ಆರೋಗ್ಯ ಸಚಿವ ಯು.ಟಿ.ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಆಯುಕ್ತ ಪಿ.ಎಸ್‌. ವಸ್ತ್ರದ್‌, ಅಭಿಯಾನದ ನಿರ್ದೇಶಕಿ ಸೌಜನ್ಯ ಹಾಗೂ ಆರೋಗ್ಯ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ' ಎಂದು ರಮೇಶ್ ಆರೋಪ ಮಾಡಿದ್ದಾರೆ. [ಚಿತ್ರಗಳು : ಕಲಬುರಗಿ ಆಸ್ಪತ್ರೆಗೆ ಸಚಿವ ಖಾದರ್ ಭೇಟಿ]

'ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ ರಾಜ್ಯಕ್ಕೆ ಕಳೆದ ವರ್ಷ 1,463 ಕೋಟಿ ಅನುದಾನ ನೀಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಮುಂತಾದ ಕಡೆ ರೋಗಿಗಳಿಗೆ ಚಿಕಿತ್ಸಾ ಸಾಮಾಗ್ರಿ ಮತ್ತು ಔಷಧಿಗೆ ವೆಚ್ಚ ಮಾಡಬೇಕಿದ್ದ ಹಣವನ್ನು ದುರ್ಬಳಕೆ ಮಾಡಲಾಗಿದೆ' ಎಂದು ರಮೇಶ್ ದೂರಿದರು.

'ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿ ಮೂಲಕ ಔಷಧಿ ಖರೀದಿ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ರೋಗಿಗಳಿಗೆ ಔಷಧಿ ನೀಡದಿದ್ದರೂ ನೀಡಿದಂತೆ ದಾಖಲೆ ಸೃಷ್ಟಿ ಮಾಡಲಾಗಿದೆ. ಮಾರುಕಟ್ಟೆ ದರಕ್ಕಿಂತ ಹತ್ತಾರು ಪಟ್ಟು ಅಧಿಕ ಬೆಲೆಗೆ ಔಷಧಿ ಖರೀದಿ ಮಾಡಲಾಗಿದೆ' ಎಂದು ರಮೇಶ್ ಹೇಳಿದ್ದಾರೆ.

82 ಕಂಪೆನಿಗಳಿಂದ ಔಷಧಿ ಖರೀದಿಸಲಾಗಿದೆ ಎಂದು ದಾಖಲೆ ತಯಾರಿಸಲಾಗಿದೆ. ಆದರೆ, ಅವುಗಳಲ್ಲಿ 15 ಕಂಪನಿಗಳು ಅಸ್ತಿತ್ವದಲ್ಲಿಲ್ಲ. ಬೆಂಗಳೂರು ನಗರದಲ್ಲಿ ಅಭಿಯಾನದ ಹೆಸರಿನಲ್ಲಿ 44 ಅಕ್ರಮ ನಡೆದಿದೆ ಎಂಬುದು ಆರೋಪ.

ಯು.ಟಿ.ಖಾದರ್ ಪ್ರತಿಕ್ರಿಯೆ : ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು, 'ಇಲಾಖೆ ವಿರುದ್ಧ ಕೇಳಿಬಂದಿರುವ ಆರೋಪ ಆಧಾರವಿಲ್ಲದ್ದು. ಯಾವುದೇ ತನಿಖೆಗೂ ಇಲಾಖೆ ಸಿದ್ಧವಿದೆ. ಆಧಾರ ಇಲ್ಲದೆ ಆರೋಪ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು' ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru BJP leader N.R.Ramesh charged that large irregularities have taken place in the State Health Mission (SHM) in procuring medicines. Ramesh said the Centre had released Rs 1,463 crore to the state government.
Please Wait while comments are loading...