ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ: ಯಡಿಯೂರಪ್ಪ ಗಂಭೀರ ಹೇಳಿಕೆ
ಶಿವಮೊಗ್ಗ, ನ 13: ಬಿಹಾರದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಉಪಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮೋದಿ ಮತ್ತು ಶಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಗುರುವಾರ (ನ12) ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿದ್ದು ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಹಿರಿಯ ಮುಖಂಡರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ.
ಈ ಮಧ್ಯೆ ಬಿಜೆಪಿ ಸರಕಾರದ ಪ್ರಮುಖ ಸಚಿವ ನಿತಿನ್ ಗಡ್ಕರಿ, ಮೋದಿ ಮತ್ತು ಶಾ ಪರವಾಗಿ ಹೇಳಿಕೆ ನೀಡಿದ್ದು, ರಾಜಕೀಯ ಎಂದ ಮೇಲೆ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೇ ಎಂದು ಹೇಳಿದ್ದಾರೆ. (ಬಿಹಾರದಲ್ಲಿ ಬಿಜೆಪಿ ಸೋಲಿನ ಬಗ್ಗೆ ನಟಿ ರಮ್ಯಾ)
ಸಂಸದರಾದ ಶತ್ರುಘ್ನ ಸಿನ್ಹಾ, ಹುಕುಂರಾಮ್ ಯಾದವ್ ನಂತರ ಬಿಹಾರದ ಏಳು ಸಂಸದರು ಮತ್ತು ಹನ್ನೆರಡಕ್ಕೂ ಹೆಚ್ಚು ಶಾಸಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಉನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಚುನಾವಣೆಯ ಸಂದರ್ಭದಲ್ಲಿ ಬಳಸಿದಂತಹ ಪದವಾಕ್ಯ ಮತ್ತು ಲಾಲೂ ಪ್ರಸಾದ್ ಯಾದವ್ ಅವರನ್ನು ಬಿಜೆಪಿ ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ಮೋದಿ ಮತ್ತು ಶಾ ವಿರುದ್ದ ತಿರುಗಿ ಬಿದ್ದಿದ್ದಾರೆ.
ಶಿಸ್ತುಬದ್ದ ಪಕ್ಷವೆಂದು ಹೆಸರು ಪಡೆದಿದ್ದ ಜೊತೆಗೆ ಆರ್ ಎಸ್ ಎಸ್ ಸೂಚನೆಯನ್ನು ಪಾಲಿಸುವ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆ, ಪಕ್ಷದೊಳಗಿನ ಆಂತರಿಕ ಬೇಗುದಿಗೆ ಯಾವ ರೀತಿ ಬ್ರೇಕ್ ಹಾಕುತ್ತೆ ಎನ್ನುವ ಸಮಯದಲ್ಲಿ ಕರ್ನಾಟಕದಲ್ಲಿ ಪಕ್ಷದ ಮುಖವಾಣಿಯಂತಿರುವ ಯಡಿಯೂರಪ್ಪನವರು ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.
ಬಿಎಸ್ವೈ ಗಂಭೀರ ಹೇಳಿಕೆ, ಮುಂದೆ ಓದಿ..

ವಿದ್ಯಮಾನ ಪಾರ್ಟಿಗೆ ಖಂಡಿತ ಒಳ್ಳೆಯ ಲಕ್ಷಣವಲ್ಲ
ಬಿಹಾರದ ಸೋಲಿನ ನಂತರ ಪಕ್ಷದಲ್ಲಿನ ಆಂತರಿಕ ಭಿನ್ನಮತ ಒಳ್ಳೆಯ ಲಕ್ಷಣವಲ್ಲ. ರಾಜಕೀಯ ಎಂದ ಮೇಲೆ ಸೋಲು, ಗೆಲುವು ಇದ್ದಿದ್ದೇ. ಸೋತ ಮೇಲೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ನನ್ನ ವಿರೋಧವಿದೆ. ಸೋಲಿನ ಪರಾಮರ್ಶೆ ಮಾಡುವುದು, ಮುಂದೆ ಈ ರೀತಿ ಸೋಲಾಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ - ಯಡಿಯೂರಪ್ಪ.

ಬಿಜೆಪಿ ಹಿರಿಯರ ಬಗ್ಗೆ
ಬಿಹಾರದಲ್ಲಿನ ಸೋಲನ್ನು ಮೋದಿ ಮತ್ತು ಅಮಿತ್ ಶಾ ವಹಿಸಿಕೊಳ್ಳಲು ಹಿರಿಯ ನಾಯಕರು ಒತ್ತಡ ಹೇರುತ್ತಿದ್ದಾರೆ. ಮೋದಿಯವರು ಪ್ರಧಾನಿಯಾಗಿದ್ದು ಅಡ್ವಾಣಿ ಸೇರಿದಂತೆ ಕೆಲವು ಹಿರಿಯ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಯಡಿಯೂರಪ್ಪ ನೇರವಾಗಿ ಅಡ್ವಾಣಿ ವಿರುದ್ದ ಚಾಟಿ ಬೀಸಿದ್ದಾರೆ.

ಸ್ಥಳೀಯ ಮುಖಂಡತ್ವದ ಬಗ್ಗೆ ಬಿಎಸ್ವೈ
ಮಾಧ್ಯಮವರೊಂದಿಗೆ ಮಾತನಾಡುತ್ತಾ ವಿಷಯಕ್ಕೆ ಬಂದ ಬಿಎಸ್ವೈ, ಸ್ಥಳೀಯ ನಾಯಕತ್ವದ ಮಹತ್ವ ಏನು ಎನ್ನುವುದು ಬಿಹಾರದ ಫಲಿತಾಂಶ ತೋರಿಸಿದೆ. ರಾಜ್ಯ ಮಟ್ಟದ ನಾಯಕರನ್ನು ಗುರುತಿಸಿ, ಜವಾಬ್ದಾರಿ ವಹಿಸುವ ಕೆಲಸ ಆಗಬೇಕಾಗಿದೆ. ಪಕ್ಷದ ಮಾರ್ಗದರ್ಶಕರಾಗಿರುವ ಅಡ್ವಾಣಿ, ಹಗುರವಾಗಿ ಮಾತನಾಡಬಾರದು ಎಂದು ಬಿಎಸ್ವೈ ಮನವಿ ಮಾಡಿದ್ದಾರೆ.

ಸಾರ್ವಜನಿಕವಾಗಿ ಹೇಳಿಕೆ ನೀಡಬೇಡಿ
ಮೋದಿ ಇದುವರೆಗೆ ಎಲ್ಲಿಯೂ ನನ್ನಿಂದಲೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿಲ್ಲ. ಪಕ್ಷದ ಹಿರಿಯ ಮುಖಂಡರಿಗೆ ತಮ್ಮ ಅಭಿಪ್ರಾಯ ತಿಳಿಸಲು ಮೋದಿ ಮತ್ತು ಶಾ ಅವರ ಮನೆ/ ಪಕ್ಷದ ಕಚೇರಿಯ ಬಾಗಿಲು ಯಾವತ್ತೂ ತೆರೆದಿರುತ್ತೆ. ಸೋತಾಗಲೂ, ಗೆದ್ದಾಗಲೂ ಸಮನಾಗಿ ನೋಡಬೇಕು, ಇನ್ಮುಂದೆಯಾದರೂ ಇಂತಹ ವಿಷಯವನ್ನು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಲಿ ಎಂದು ಬಿಎಸ್ವೈ ಸಲಹೆ ನೀಡಿದ್ದಾರೆ.

ಅಟಲ್, ಅಡ್ವಾಣಿ ಕಾಲದಲ್ಲಿ ನಾವು ಸೋತಿದ್ವಿ
ಅಮಿತ್ ಶಾ ಮತ್ತು ಮೋದಿ ಪರವಾಗಿ ಮಾತನಾಡುತ್ತಾ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಸೋಲು ಗೆಲುವು ಯಾರನ್ನೂ ಬಿಟ್ಟಿಲ್ಲ. ಮೋದಿ ಅಧಿಕಾರಕ್ಕೆ ಬಂದ ನಂತರ ನಾವೂ ಮಹಾರಾಷ್ಟ್ರ, ರಾಜಸ್ಥಾನ, ಹರ್ಯಾಣ ಮುಂತಾದ ಅಸೆಂಬ್ಲಿ ಚುನಾವಣೆಯನ್ನು ಗೆದ್ದಿದ್ದೇವೆ. ದೆಹಲಿ, ಬಿಹಾರ ಚುನಾವಣೆ ಸೋತಿದ್ದೇವೆ. ವಾಜಪೇಯಿ, ಅಡ್ವಾಣಿ ಅವರ ಕಾಲದಲ್ಲೂ ನಮ್ಮ ಪಕ್ಷಕ್ಕೂ ಸೋಲಾಗಿತ್ತು ಎಂದು ಗಡ್ಕರಿ ಹೇಳಿಕೆ ನೀಡಿದ್ದಾರೆ.












Click it and Unblock the Notifications