ನಾನು ರಕ್ತಬೀಜಾಸುರ ದೇವ: ನಿತ್ಯಾನಂದ ವಾಕ್ ಪ್ರಹಾರ
ಬೆಂಗಳೂರು, ಸೆ 19: ಪುರುಷತ್ವ ಪರೀಕ್ಷೆಯ ವರದಿ ಅಧಿಕೃತವಾಗಿ ಸಿಐಡಿ ಕೈಸೇರಿರುವ ಈ ಹೊತ್ತಿನಲ್ಲಿ ಬಿಡದಿಯ ವಿವಾದಾತ್ಮಕ ದೇವಮಾನವ ನಿತ್ಯಾನಂದ ಸರಕಾರದ ವಿರುದ್ದ ಅಕ್ಷರಶಃ ವಾಕ್ ಪ್ರಹಾರ ನಡೆಸಿದ್ದಾರೆ.
ನನ್ನ ಒಂದು ತೊಟ್ಟು ರಕ್ತ ಈ ಭೂಮಿ ಮೇಲೆ ಬಿದ್ದರೆ, ನನ್ನಂತಹ ಸಾವಿರಾರು ನಿತ್ಯಾನಂದರು ಹುಟ್ಟುತ್ತಾರೆ. ಆದರೆ, ನಾನು ರಕ್ತಬೀಜಾಸುರನಲ್ಲ, ದೇವಮಾನವ. ಇದು ನಾನು ಸರಕಾರಕ್ಕೆ ಕೊಡುತ್ತಿರುವ ಎಚ್ಚರಿಕೆ ಎಂದು ಸರಕಾರದ ವಿರುದ್ದ ಹರಿಹಾಯ್ದಿರುವ ನಿತ್ಯಾ ಹೇಳಿಕೆಯನ್ನು ಉಲ್ಲೇಖಿಸಿ ಸಮಯ ಸುದ್ದಿವಾಹಿನಿ ವರದಿ ಮಾಡಿದೆ.
ನನ್ನನ್ನು ಯಾಕೆ ಈ ರೀತಿ ಪೀಡಿಸುತ್ತಿದ್ದೀರಾ ಎನ್ನುವುದು ಜನತೆಗೆ ಗೊತ್ತಿದೆ. ನನ್ನನ್ನು ನೀವು ಏನೂ ಮಾಡಿಕೊಳ್ಳಲಾಗುವುದಿಲ್ಲ. ನನ್ನನ್ನು ನೀವು ಸಾಯಿಸಿದರೆ ಸಾವಿರಾರು ನಿತ್ಯಾನಂದರು ಹುಟ್ಟುತ್ತಾರೆಂದು ಬಿಡದಿ ಆಶ್ರಮದಲ್ಲಿ ಗುರುವಾರ (ಸೆ 18) ನಿರರ್ಗಳವಾಗಿ ಇಂಗ್ಲಿಷ್ ನಲ್ಲಿ ನಿತ್ಯಾ ಭಾಷಣ ಮಾಡಿದ್ದಾರೆ. (ಸಿಐಡಿ ಕೈ ಸೇರಿದ ನಿತ್ಯಾನಂದ ಪುರುಷತ್ವ ಪರೀಕ್ಷೆ ವರದಿ)
ನನಗೆ ನೀವು ತೊಂದರೆ ಕೊಡುತ್ತಿರುವುದು ನಾನೊಬ್ಬ ಹಿಂದೂ ಎನ್ನುವುದಕ್ಕಾಗಿ. ನಾನು ಹಿಂದೂ ಸನಾತನ ಧರ್ಮವನ್ನು ಎತ್ತಿಹಿಡಿಯಲು ಹುಟ್ಟಿದ ಅವತಾರ ಪುರುಷ ಎನ್ನುವುದು ನಿಮಗೆ ತಿಳಿದಿರಲಿ ಎಂದು ಭಕ್ತರ ಕರತಾಡನದೊಂದಿಗೆ ನಿತ್ಯಾನಂದ ಉದ್ಗರಿಸಿದ್ದಾರೆ. ಮುಂದೆ ಓದಿ..

ಸರಕಾರಕ್ಕೆ ನಿತ್ಯಾ ಹಾಕಿದ ಸವಾಲು
ನನ್ನನ್ನು ಬಂಧಿಸುವ ಶಕ್ತಿ ನಿಮಗಿದೆಯೇ, ನನ್ನ ಮೇಲೆ ಆ ಕ್ರಮ ತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಿತ್ಯಾನಂದ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಸನಾತನ ಧರ್ಮವನ್ನು ಎತ್ತಿಹಿಡಿಯುತ್ತೇನೆ
ಬಿಡದಿ ಆಶ್ರಮದಲ್ಲಿ ಇಂಗ್ಲಿಷ್ ನಲ್ಲಿ ಮತ್ತು ಮಧ್ಯೆ ತಮಿಳಿನಲ್ಲಿ ಸತ್ಸಂಗ ಪ್ರವಚನ ಮಾಡುತ್ತಿದ್ದ ನಿತ್ಯಾ, ನಾನು ಹಿಂದೂ ಸನಾತನ ಧರ್ಮವನ್ನು ಎತ್ತಿ ಹಿಡಿಯಲು ಹುಟ್ಟಿರುವ ಅವತಾರ ಪುರುಷ. ನನ್ನ ಜೀವಿತಾವಧಿಯಲ್ಲಿ ಇದಕ್ಕಾಗಿ ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ ಎಂದಿದ್ದಾರೆ.

ರಾಮನಗರ ಕೋರ್ಟಿಗೆ ನಿತ್ಯಾ
ಪುರುಷತ್ವ ಪರೀಕ್ಷೆಯ ವರದಿ ಗೃಹ ಇಲಾಖೆಗೆ ಬಂದ ನಂತರ, ರಾಮನಗರ ನ್ಯಾಯಾಲಯಕ್ಕೆ ಅಕ್ಟೋಬರ್ ಹದಿನೈದರಂದು ನಿತ್ಯಾನಂದ ಹಾಜರಾಗ ಬೇಕಿದೆ. ಈ ಸಂಬಂಧ ಕೋರ್ಟ್ ನಿತ್ಯಾಗೆ ಸಮನ್ಸ್ ನೀಡುವ ಸಾಧ್ಯತೆಯಿದೆ.

ಸತ್ಸಂಗ ಪ್ರವಚನದಲ್ಲಿ ನಿತ್ಯಾ ಉವಾಚ
ಆಶ್ರಮದಲ್ಲಿ ಉಲ್ಲಾಸಭರಿತವಾಗಿ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನಿತ್ಯಾ, ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ರಕ್ತ ಕೆಳಗೆ ಬಿದ್ದರೆ ಸಾವಿರಾರು ರಕ್ತಬೀಜಾಸುರದೇವ ಹುಟ್ಟಿ ಬರುತ್ತಾರೆ.

ನಾನು ಕೂತಲ್ಲೇ ಲಕ್ಷಾಂತರ ಭಕ್ತರನ್ನು ಎಬ್ಬಿಸಬಲ್ಲೆ
ನಾನು ಕೂತು ಮಾತನಾಡಿದರೆ ಸಾಕು ಲಕ್ಷಾಂತರ ಭಕ್ತರು ಎದ್ದು ನಿಲ್ಲುತ್ತಾರೆ. ನನ್ನನ್ನು ಕೊಲ್ಲಲು, ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೂ ಪುನುರುತ್ಥಾನದ ಅವತಾರ ಪುರುಷ ಎಂದು ನಿತ್ಯಾ ತಮ್ಮನ್ನು ಪದೇ ಪದೇ ತಾವೇ ಬಣ್ಣಿಸಿಕೊಂಡಿದ್ದಾರೆ.












Click it and Unblock the Notifications