ಬೆಂಗಳೂರು - ಕೋಲಾರ ಹೊಸ ನೇರ ರೈಲು ಮಾರ್ಗ ಯೋಜನೆ ಬಗ್ಗೆ ಸಚಿವ ವಿ.ಸೋಮಣ್ಣ ಮಹತ್ವದ ಮಾಹಿತಿ
Karnataka New Railway Line: ರಾಜ್ಯದಲ್ಲಿ ರೈಲ್ವೆ ಜಾಲ ವಿಸ್ತರಣೆಯಾಗುತ್ತಲಿದೆ. ಈ ನಡುವೆಯೇ ಕರ್ನಾಟಕದ ಹೊಸ ರೈಲು ಮಾರ್ಗ ನಿರ್ಮಾಣ ಮಾಡುವ ಕುರಿತು ಸಚಿವ ವಿ.ಸೋಮಣ್ಣ ಅವರು ಮಹತ್ವದ ಅಪ್ಡೇಟ್ ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು ಮತ್ತು ಕೋಲಾರ ನಗರಗಳ ನಡುವೆ ಹೊಸದಾಗಿ ನೇರ ರೈಲು ಮಾರ್ಗವನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಶೀಘ್ರದಲ್ಲೇ ವಿಸ್ತೃತ ವರದಿ (ಡಿಪಿಆರ್) ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿ ಮಾಲ್ ಹಿಂಭಾಗದಲ್ಲಿ ನೂತನ ಪಾದಚಾರಿ ಸಬ್ವೇ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ಕಾಮಗಾರಿಗಳು ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿವೆ ಎಂದ ಅವರು ವಿವಿಧ ಯೋಜನೆಗಳನ್ನು ಉಲ್ಲೇಖಿಸಿ ಹೆಳಿದರು.
ನೂತನ ರೈಲು ಮಾರ್ಗದಿಂದ ಯಾರಿಗೆ ಹೆಚ್ಚು ಅನುಕೂಲ?
ಕೋಲಾರ ಮತ್ತು ಬೆಂಗಳೂರು ನಡುವಿನ ಸಂಪರ್ಕವನ್ನು ಮತ್ತಷ್ಟು ಸುಲಭಗೊಳಿಸುವ ಈ ಹೊಸ ರೈಲು ಮಾರ್ಗವು ಕೆಳಗಿನ ಪ್ರಮುಖ ಪ್ರದೇಶಗಳ ಮೂಲಕ ಹಾದುಹೋಗಲಿದೆ. ಬೆಂಗಳೂರು, ಹೊಸಕೋಟೆ, ನರಸಾಪುರ, ವೇಮಗಲ್ ಮಾರ್ಗವಾಗಿ ಹೊಸ ರೈಲು ಮಾರ್ಗವನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಹೊಸ ನೇರ ರೈಲು ಮಾರ್ಗದ ನಿರ್ಮಾಣದಿಂದಾಗಿ ಬೆಂಗಳೂರು ಮತ್ತು ಕೋಲಾರ ಭಾಗದ ಸಾರ್ವಜನಿಕರು ಹಾಗೂ ಪ್ರತಿದಿನ ಪ್ರಯಾಣಿಸುವ ಉದ್ಯೋಗಿಗಳಿಗೆ ಸುಗಮ ಮತ್ತು ವೇಗದ ಸಂಚಾರ ಸೌಲಭ್ಯ ಸಿಗಲಿದೆ.
ನೂತನ ರೈಲು ಮಾರ್ಗ ಎಲ್ಲೆಲ್ಲಿ ಹಾದುಹೋಗಲಿದೆ?
* ಬೆಂಗಳೂರು
* ಹೊಸಕೋಟೆ
* ನರಸಾಪುರ
* ವೇಮಗಲ್
* ಕೋಲಾರ
ಪ್ರಸ್ತುತ ಮಾರ್ಗದ ವಿವರ
ಪ್ರಸ್ತುತ ಬೆಂಗಳೂರಿನಿಂದ ಕೋಲಾರಕ್ಕೆ ಹೋಗಬೇಕಾದರೆ ಬಂಗಾರಪೇಟೆ ಮಾರ್ಗವಾಗಿ ಸುತ್ತಿ ಬಳಸಿ ಹೋಗಬೇಕಾಗಿದೆ. ಅಥವಾ ಕೆ.ಆರ್. ಪುರಂ - ವೈಟ್ಫೀಲ್ಡ್ ಮಾರ್ಗ ಬಳಸಬೇಕು. ಆದರೆ ಹೊಸದಾಗಿ ಪ್ರಸ್ತಾವನೆ ಮಾಡಲಾಗಿರುವ ಬೆಂಗಳೂರು - ಹೊಸಕೋಟೆ - ನರಸಾಪುರ - ವೇಮಗಲ್ - ಕೋಲಾರ ಮಾರ್ಗವು ಈ ಎರಡು ನಗರಗಳ ನಡುವಿನ ದೂರ ಮತ್ತು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಸದ್ಯದ ರೈಲು ಪ್ರಯಾಣಕ್ಕೆ ಹೋಲಿಸಿದರೆ ಈ ನೇರ ಮಾರ್ಗದಿಂದ ಸುಮಾರು 30 ರಿಂದ 45 ನಿಮಿಷಗಳ ಸಮಯ ಉಳಿತಾಯವಾಗಲಿದೆ. ಈ ಮಾರ್ಗವು ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲದೆ, ಪ್ರಮುಖ ಕೈಗಾರಿಕಾ ಪ್ರದೇಶಗಳಾದ ನರಸಾಪುರ ಇಂಡಸ್ಟ್ರಿಯಲ್ ಏರಿಯಾ ಮತ್ತು ವೇಮಗಲ್ ಕೈಗಾರಿಕಾ ವಲಯಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸಲಿದೆ. ಇದರಿಂದಾಗಿ ಅಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಹೊಸಕೋಟೆ ಮತ್ತು ನರಸಾಪುರ ಭಾಗದಲ್ಲಿ ಉತ್ಪಾದನೆಯಾಗುವ ಆಟೋಮೊಬೈಲ್ ಮತ್ತು ಇತರ ಕೈಗಾರಿಕಾ ಉತ್ಪನ್ನಗಳನ್ನು ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ಸಾಗಿಸಲು ಈ ಮಾರ್ಗ ಹೆಚ್ಚು ಸಹಕಾರಿಯಾಗಲಿದೆ. ಸಚಿವ ವಿ. ಸೋಮಣ್ಣ ಅವರು ತಿಳಿಸಿರುವಂತೆ, ಈ ಮಾರ್ಗದ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಸಮೀಕ್ಷೆ ನಡೆಸಿ ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ.
ಸವಾಲುಗಳು, ಮುಂದಿನ ಹಂತದ ವಿವರ
ಬೆಂಗಳೂರು ಗ್ರಾಮಾಂತರ (ಹೊಸಕೋಟೆ) ಮತ್ತು ಕೋಲಾರ ಜಿಲ್ಲೆಗಳ ಫಲವತ್ತಾದ ಹಾಗೂ ಕೈಗಾರಿಕಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಈ ಯೋಜನೆಯ ದೊಡ್ಡ ಸವಾಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರದ ಅಗತ್ಯವಿದೆ. ಡಿಪಿಆರ್ ಸಿದ್ಧವಾದ ನಂತರ ರೈಲ್ವೆ ಇಲಾಖೆ ಮತ್ತು ಕೇಂದ್ರ ಕ್ಯಾಬಿನೆಟ್ ಇದಕ್ಕೆ ಅನುಮೋದನೆ ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಈ ಹೊಸ ರೈಲು ಮಾರ್ಗ ನಿರ್ಮಾಣವಾದ್ರೆ ಬೆಂಗಳೂರು ಹಾಗೂ ಕೋಲಾರ ಭಾಗದ ಜನರಿಗೆ ಹೆಚ್ಚು ಸಹಾಯ ಆದಂತಾಗಲಿದೆ.












Click it and Unblock the Notifications