SWR: ಬೆಂಗಳೂರು-ಕಣ್ಣೂರು ದೀಪಾವಳಿ ವಿಶೇಷ ರೈಲು; ಈ ಮಾರ್ಗದ ಮೆಮು ಸೇವೆಯನ್ನು ಭಾಗಶಃ ರದ್ದು
ಬೆಂಗಳೂರು: ದೀಪಾವಳಿ ವೇಳೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಶೇಷ ರೈಲು ಕಾರ್ಯಾಚರಣೆ ಮಾಡುತ್ತಿದೆ. ಜೊತೆಗೆ ಹಳಿ ಕಾಮಗಾರಿಗಳಿಂದಾಗಿ ನಿಗದಿತ ಮಾರ್ಗದಲ್ಲಿ ಮೆಮು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.
ಬೆಂಗಳೂರು ಎಸ್.ಎಮ್.ವಿ.ಟಿ- ಕಣ್ಣೂರು ಮತ್ತು ಬೆಂಗಳೂರು ಕಂಠೋನ್ಮೆಂಟ್ ನಡುವೆ 01 ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ನಡೆಸಲಿದೆ. ಎಸ್.ಎಮ್.ವಿ.ಟಿ. ಬೆಂಗಳೂರು-ಕಣ್ಣೂರು ರೈಲು (06545) ನವೆಂಬರ್ 07ರ ಶನಿವಾರದಂದು ಮಧ್ಯರಾತ್ರಿ 00:05 ಕ್ಕೆಇಲ್ಲಿಂದ ಹೊರಡುತ್ತದೆ. ಅದೇ ದಿನ ಮಧ್ಯಾಹ್ನ 14:00 ಗಂಟೆಗೆ ಕಣ್ಣೂರು ತಲುಪುತ್ತದೆ.

ಇನ್ನೂ ಮರಳಿ ಕಣ್ಣೂರು-ಬೆಂಗಳೂರು ಕಂಠೋನ್ಮೆಂಟ್ ರೈಲು (06546) ನವೆಂಬರ್ 07ರ ಶನಿವಾರ ಸಂಖೆ 18:25 ಕ್ಕೆ ಕಣ್ಣೂರು ನಿಲ್ದಾಣದಿಂದ ಹೊರಟು ಮರುದಿನ ಭಾನುವಾರ ಬೆಳಗ್ಗೆ 09:45 ಗಂಟೆಗೆ ಬೆಂಗಳೂರಿಗೆ ಬರಲಿದೆ.
ಸಂಚಾರ ಮಾರ್ಗ, ನಿಲುಗಡೆ ನಿಲ್ದಾಣಗಳು
ದೀಪಾವಳಿ ಹಬ್ಬದ ಪ್ರಯುಕ್ತ ಸಂಚರಿಸುವ ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ವೈಟ್‌ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರ್, ಪಾಲಕ್ಕಾಡ್, ಶೋರನೂರ್, ತಿರೂರ್, ಕೋಝಿಕ್ಕೋಡ್, ವಡಕರ ಮತ್ತು ತಲಶ್ಶೇರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ. ಒಟ್ಟು 18 ಕೋಚ್‌ಗಳನ್ನು ಹೊಂದಿರುವ ಈ ರೈಲುಗಳ ಸಮಯ ಹಾಗೂ ಇತರೆ ವಿವರಗಳಿಗಾಗಿ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ www.enquiry.indianrail.gov.in, NTES ಆ್ಯಪ್ ಅಥವಾ 139 ಸಂಖ್ಯೆಗೆ ಕರೆ ಮಾಡಿ ಪರಿಶೀಲಿಸಬಹುದು.
ಬೆಂಗಳೂರು-ತೂತುಕುಡಿ ನಡುವೆ ವಿಶೇಷ ರೈಲು ಸಂಚಾರ
ದೀಪಾವಳಿ, ಜನ ಸಂಚಾರ ಹೆಚ್ಚಳ ಹಿನ್ನೆಲೆಯಲ್ಲಿ ಬೆಂಗಳೂರು ಕಂಠೋನ್ಮೆಂಟ್ ಮತ್ತು ಟುಟಿಕೊರಿನ್ (ತೂತುಕುಡಿ) ನಡುವೆ 01 ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ದೊರೆಯಲಿದೆ. ಬೆಂಗಳೂರು ಕಂಟೋನ್ಮೆಂಟ್ - ಟುಟಿಕೊರಿನ್ ರೈಲು (06533) ಇದೇ ನವೆಂಬರ್ 06ರ ಶುಕ್ರವಾರದಂದು ರಾತ್ರಿ 21:45ಕ್ಕೆ ಹೊರಟು, ಮರುದಿನ ಶನಿವಾರ ಮಧ್ಯಾಹ್ನ 12:30 ಕ್ಕೆ ತಲುಪಲಿದೆ.
ಮರಳಿ ಅಲ್ಲಿಂದ ಟುಟಿಕೊರಿನ್ - ಬೆಂಗಳೂರು ಕಂಟೋನ್ಮೆಂಟ್ ರೈಲು (06534) ನವೆಂಬರ್ 07ರ ಶನಿವಾರದಂದು ಮಧ್ಯಾಹ್ನ 15:30 ಕ್ಕೆ ಹೊರಟು, ಮರುದಿನ ಭಾನುವಾರ ಬೆಳಗ್ಗೆ 05:30 ಕ್ಕೆ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮೆಮು ರೈಲುಗಳ ಸಂಚಾರ ಭಾಗಶಃ ರದ್ದು
ಪೆನುಕೊಂಡ ಮತ್ತು ರಂಗೇಪಲ್ಲಿ ನಿಲ್ದಾಣಗಳ ನಡುವೆ ರೈಲ್ವೆ ಅಧಿಕಾರಿ, ಸಿಬ್ಬಂದಿಯು ಹಳಿ ನವೀಕರಣ ಕಾಮಗಾರಿ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 03 ರಂದು ಕೆಎಸ್‌ಆರ್ ಬೆಂಗಳೂರು - ಅನಂತಪುರ ಮೆಮು ರೈಲು (ಸಂಖ್ಯೆ 66559) ಹಿಂದೂಪುರ ಮತ್ತು ಅನಂತಪುರ ನಡುವೆ ಭಾಗಶಃ ರದ್ದಾಗಲಿದೆ.
ಮಾತ್ರವಲ್ಲದೇ ಅನಂತಪುರ - ಕೆಎಸ್‌ಆರ್ ಬೆಂಗಳೂರು ಮೆಮು ರೈಲು (ಸಂಖ್ಯೆ 66560) ಅನಂತಪುರ ಮತ್ತು ಹಿಂದೂಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.


Click it and Unblock the Notifications
