ರಾಯಚೂರಿನಲ್ಲಿ ಅಂಬೇಡ್ಕರ್‌ಗೆ ಅಪಮಾನ ಆರೋಪ: ಪರಿಶೀಲಿಸಿ ಕ್ರಮ- ಸಿಜೆ ಭರವಸೆ
ಬೆಂಗಳೂರು. ಜ.27: ರಾಯಚೂರು ಜಿಲ್ಲಾ ನ್ಯಾಯಾಧೀಶರು ಬುಧವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ್ದಾರೆನ್ನಲಾದ ಆರೋಪ ಸಂಬಂಧ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ತಿಳಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ.
ಗುರುವಾರ(ಜ.27)ದಂದು ಮಧ್ಯಾಹ್ನ ಹೈಕೋರ್ಟ್‌ನಲ್ಲಿ ವಿವೇಕ್ ರೆಡ್ಡಿ ನೇತೃತ್ವದ ನಿಯೋಗ ಸಿಜೆ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಆ ವೇಳೆ ಮುಖ್ಯ ನ್ಯಾಯಮೂರ್ತಿಗಳು ವರದಿ ತರಿಸಿಕೊಂಡು ಪರಿಶೀಲಿಸುವುದಾಗಿ ನಿಯೋಗಕ್ಕೆ ತಿಳಿಸಿದ್ದಾರೆಂದು ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಘಟನೆ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ನೀಡಿರುದ ದೂರಿನಲ್ಲಿ ಅಂಬೇಡ್ಕರ್‌ಗೆ ಅವಮಾನ ಮಾಡಿರುವುದು ಸರಿಯಲ್ಲ. ಗಣತಂತ್ರ ದಿನದಂದೇ ಈ ರೀತಿ ಮಾಡಿರುವುದು ದುರದೃಷ್ಟಕರ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಆದ್ದರಿಂದ ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ವರದಿ ಕೇಳಿದ ಹೈಕೋರ್ಟ್: ಈ ಮಧ್ಯೆ, ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ "ಘಟನೆ ಕುರಿತು ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು" ಎಂದು ತಿಳಿಸಿದ್ದಾರೆ.
''ಗಾಂಧೀಜಿಯ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿಡುವ ಸಂಬಂಧ ಪೂರ್ಣಪೀಠವು ಹಿಂದೆಯೇ ಗೊತ್ತುವಳಿ ಅಂಗೀಕರಿಸಿದೆ. ಆದರೆ ಅಂಬೇಡ್ಕರ್ ಭಾವಚಿತ್ರವನ್ನು ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಪೂರ್ಣಪೀಠದ ಮುಂದೆ ಪರಿಶೀಲನೆಗೆ ಬಾಕಿ ಇದೆ. ಪೂರ್ಣಪೀಠ ಒಪ್ಪಿಗೆ ನೀಡಿದ ಬಳಿಕ ಅದು ಜಾರಿಗೆ ಬರಲಿದೆ"ಎಂದು ಹೈಕೋರ್ಟ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಅಗೌರವ ತೋರಿಲ್ಲ: ಈ ಮಧ್ಯೆ, ಬುಧವಾರದ ಘಟನೆ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ಅಂಬೇಡ್ಕರ್‌ಗೆ ಅಪಮಾನ ಮಾಡಿಲ್ಲ. ನನ್ನ ಬಗ್ಗೆ ಅಪಪ್ರಚಾರ ಮಾಡುವ ದುರುದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೂರುಗಳು ಸಲ್ಲಿಕೆ: ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ತೆಗೆಸಿದ ವಿವಾದ ಸಂಬಂಧ ಬೆಂಗಳೂರು ವಕೀಲರ ಸಂಘ ಸೇರಿ ಕೆಲವು ಸಂಘಟನೆಗಳು ಹಾಗೂ ವಕೀಲರಿಂದ ಹೈಕೋರ್ಟ್‌ಗೆ ದೂರುಗಳು ಸಲ್ಲಿಕೆಯಾಗಿವೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಿಜಿಸ್ಟ್ರಾರ್ ಜನರಲ್ ಅವರಿಗೆ ಇ-ಮೇಲ್, ಪತ್ರ ಮುಖೇಣ ಹಾಗೂ ಖುದ್ದಾಗಿ ಮೂಲಕ ಕೆಲವು ವಕೀಲರು ಮತ್ತು ವಕೀಲರ ಸಂಘಗಳಿಂದ ದೂರುಗಳು ಸಲ್ಲಿಕೆಯಾಗಿವೆ.
ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯ ಹಾಗೂ ವಕೀಲ ವೆಂಕಟೇಶ್ ದೊಡ್ಡೇರಿ, ಮತ್ತೋರ್ವ ವಕೀಲ ರಮೇಶ್ ಎಲ್. ನಾಯಕ್ ಮುಖ್ಯ ನ್ಯಾಯಮೂರ್ತಿ ಮತ್ತು ರಿಜಿಸ್ಟ್ರಾರ್ ಜನರಲ್‌ಗೆ ದೂರು ಸಲ್ಲಿಸಿದ್ದಾರೆ.
"ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಆದೇಶಿಸಬೇಕು ಹಾಗೂ ಮಲ್ಲಿಕಾರ್ಜುನ ಗೌಡ ಅವರನ್ನು ವಜಾಗೊಳಿಸಬೇಕು' ಎಂದು ಮನವಿ ಮಾಡಿದ್ದಾರೆ.
ವಿವಾದದ ಹಿನ್ನೆಲೆ: ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಬುಧವಾರ ಧ್ವಜಾರೋಹಣ ನಡೆಯುತ್ತಿದ್ದ ಸ್ಥಳದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಲಾಗಿತ್ತು. ಆದರೆ, ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಧ್ವಜಾರೋಹಣ ಸ್ಥಳದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಸಿದ್ದರು. ಇದು ವಿವಾದಕ್ಕೆ ಗುರಿಯಾಗಿದೆ.












Click it and Unblock the Notifications