ಬೆಳಗಾವಿ ಅಧಿವೇಶನ: ಶಾಸಕರಿಗೆ ತಣ್ಣನೆಯ ಸ್ವಾಗತ

ಬೆಳಗಾವಿಯಲ್ಲಿ ಮೊನ್ನೆ ಮಂಗಳವಾರ ಬೆಳಗ್ಗೆ ಕನಿಷ್ಠ ತಾಪಮಾನ 11.6 ಡಿಗ್ರಿಗೆ ತಲುಪಿತ್ತು. ಇದು ಇಡೀ ರಾಜ್ಯದಲ್ಲಿ ಕನಿಷ್ಠ ಪ್ರಮಾಣದಲ್ಲಿತ್ತು. ಇನ್ನು ಧಾರವಾಡದಲ್ಲಿ 12.5 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿತ್ತು. ಸೋಮವಾರ ಬೆಳಗ್ಗೆ ಧಾರವಾಡದಲ್ಲಿ 13.7 ಡಿಗ್ರಿಯಿತ್ತು.
ಈ ಬಾರಿ ಮಳೆ ಹೆಚ್ಚಾಗಿರುವುದೂ ಚಳಿ ಏರಿಕೆಗೆ ಕಾರಣವಾಗಬಲ್ಲದು. ಇದರಿಂದ ಚಳಿಗಾಲದ ಅಧಿವೇಶನ ಹೆಸರಿಗೆ ತಕ್ಕಂತೆ ಹೆಚ್ಚು ಚಳಿಯಿಂದ ಕೂಡಿರುತ್ತದೆ.
ಕಳೆದ ಒಂದು ವಾರದಿಂದ ಈ ಎರಡೂ ನಗರಗಳ ತಾಪಮಾನ ಇಳಿಮುಖದಲ್ಲಿ ಸಾಗುತ್ತಿದೆ. ಕಳೆದೊಂದು ವಾರದಲ್ಲಿ ಧಾರವಾಡದಲ್ಲಿ ತಾಪಮಾನ 18.3 ಡಿಗ್ರಿಯಿಂದ 12.5 ಡಿಗ್ರಿಗೆ ಇಳಿದಿದೆ. 2012ರಲ್ಲಿ ಧಾರವಾಡದಲ್ಲಿ ಕನಿಷ್ಠ ತಾಪಮಾನ ದಾಖಲೆಯ 9.5 ಡಿಗ್ರಿಯಷ್ಟು ದಾಖಲಾಗಿತ್ತು.
ಬೆಳಗಾವಿಯಲ್ಲೂ ಹೀಗೇ 18.6 ಡಿಗ್ರಿಯಿಂದ 12.5 ಡಿಗ್ರಿಯಷ್ಟಾಯಿತು. 2012ರಲ್ಲಿ ಬೆಳಗಾವಿಯಲ್ಲಿ 7.7 ಡಿಗ್ರಿ ತಾಪಮಾನ ನೆಲೆಸಿತ್ತು. ಇದು ಕಳೆದ 10 ವರ್ಷಗಳಲ್ಲಿ ಅತಿ ಕಡಿಮೆ ತಾಪಮಾನವಾಗಿದೆ.
ಇದರಿಂದ ಒಂದಷ್ಟು ಕಾಯಿಲೆಗಳು ಕಾಣಿಸಿಕೊಂಡಿದ್ದರೆ ಈಗಾಗಲೇ ಕಾಯಿಲೆ ಹೊಂದಿರುವ ವಯಸ್ಸಾದವರು ಮನೆ ಬಿಟ್ಟು ಹೊರಗೆ ಬಾರದಂತಾಗಿದ್ದಾರೆ. ಬೆಳಗ್ಗೆ 10 ಗಂಟೆಯಾದರೂ ಮನೆ ಬಿಟ್ಟು ಹೊರಬಾರದಂತಾಗಿದೆ. ಡಿಸೆಂಬರ್ ಚಳಿ ನೆನಪಿಸಿಕೊಂಡರೆ ಇನ್ನೂ ಆತಂಕವಾಗುತ್ತಿದೆ ಎನ್ನುತ್ತಾರೆ ನಿವೃತ್ತ ಸರಕಾರಿ ಅಧಿಕಾರಿಯೊಬ್ಬರು.
ಇನ್ನು ತಪ್ಪದೆ ಜಾಗಿಂಗ್ ಅದೂ ಇದೂ ಎಂದು ಹೊರಹೋಗುತ್ತಿದ್ದ ಯುವಜನತೆ ಬೆಳಗ್ಗೆ ವೇಳೆ ಜಾಗಿಂಗ್ ಮಾಡಲು ಹಿಂಜರಿಯುತ್ತಿದ್ದಾರೆ. (ಚಿತ್ರ ಕೃಪೆ)












Click it and Unblock the Notifications