ಸಿ.ಟಿ.ರವಿ ಬಿಡುಗಡೆ: 'ಗೃಹ ಸಚಿವರಿಗೆ, ಬೆಳಗಾವಿ ಪೊಲೀಸ್ ಅಧಿಕಾರಿಗಳಿಗೆ ಮುಖಭಂಗ'

ಬೆಂಗಳೂರು, ಡಿಸೆಂಬರ್‌ 21: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಿಡುಗಡೆಗೆ ಹೈಕೋರ್ಟ್ ಸೂಚಿಸಿದೆ. ಇದರಿಂದ ರಾಜ್ಯದ ಗೃಹ ಸಚಿವರು, ಬೆಳಗಾವಿಯ ಪೊಲೀಸ್ ಅಧಿಕಾರಿಗಳಿಗೆ ಒಂದು ರೀತಿ ಮುಖಭಂಗ ಆಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮತ್ತು ಗೃಹಸಚಿವರಿಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ ಎಂದರಲ್ಲದೆ, ರಾಜ್ಯದಲ್ಲಿ ಕೆಲವು ವಿಭಾಗಗಳಲ್ಲಿ ಪೊಲೀಸ್ ಗೂಂಡಾಗಿರಿ ಮೂಲಕ ಹತ್ತಿಕ್ಕುವ ಕೆಲಸ ನಡೆದಿದೆ ಎಂದು ಟೀಕಿಸಿದರು.

Belagavi Police Officials Are Embarrassed By The Release Of CT Ravi Says Ashwathnarayan

ರಾಜ್ಯ ಸರಕಾರದ ವೈಫಲ್ಯಗಳನ್ನು ಯಾರು ಟೀಕಿಸುತ್ತಾರೋ, ಯಾರು ಚರ್ಚಿಸುತ್ತಾರೋ ಅವರ ವಿರುದ್ಧವಾಗಿ ಮೊಕದ್ದಮೆಗಳನ್ನು ಹಾಕುತ್ತಿದ್ದಾರೆ. ಅಲ್ಲದೆ ಹಲ್ಲೆ ಮಾಡುತ್ತಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೈಕೋರ್ಟಿನ ಆದೇಶವನ್ನು ಬಿಜೆಪಿ ಸ್ವಾಗತಿಸುತ್ತದೆ. ಪರಮೇಶ್ವರ್ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ ಎಂದು ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇತರರು ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಸಿ.ಟಿ.ರವಿರವರು ಮಾತನಾಡುವ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿ.ಟಿ.ರವಿರವರನ್ನು ಅವಮಾನಿತರನ್ನಾಗಿ ಮಾಡಿದ್ದರು. ಆಗ ಇಡೀ ರಾಜ್ಯದಲ್ಲಿ ನಿಮ್ಮ ಸರಕಾರ ವಿಫಲವಾಗಿದೆ. ಅಪರಾಧಿ ಸ್ಥಾನದಲ್ಲಿ ನಿಂತಿದ್ದೀರಿ. ಫ್ರಸ್ಟ್ರೇಟ್ ಆಗಿ ಮಾತನಾಡುತ್ತಿದ್ದೀರಿ ಎಂಬ ಪದ ಉಪಯೋಗಿಸಿದ್ದನ್ನು ತಿರುಚಿದ್ದಾರೆ. ಅವರ ಕಡೆಯ ಗೂಂಡಾಗಳನ್ನು ಕರೆಸಿ ಸುವರ್ಣಸೌಧದಲ್ಲಿ ಸಿ.ಟಿ.ರವಿರವರ ಮೇಲೆ ಹಲ್ಲೆ ಮಾಡಿದ್ದಾಗಿ ವಿವರಿಸಿದರು.

ಸಿ.ಟಿ.ರವಿರವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡಿಲ್ಲ; ಅವರು ಮಾತನಾಡಿದ್ದನ್ನು ಅವರವರ ಆತ್ಮಾವಲೋಕನಕ್ಕೆ ಬಿಟ್ಟಿರುವುದಾಗಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದರು. ಆದರೂ ರವಿರವರು ಬೇರೆ ಸಂದರ್ಭದಲ್ಲಿ ಹೊರಕ್ಕೆ ಬಂದಾಗ ಪೊಲೀಸರು ಏಕಾಏಕಿ ಬಂಧಿಸಿ ಖಾನಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ಮೇಲೆ ಗಂಭೀರವಾದ ಪ್ರಕರಣಗಳನ್ನು ಹೂಡಿ, ಇವತ್ತು ನ್ಯಾಯಾಲಯಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ ಎಂದರು.

ಇದರ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಿದೆ. ರಾಜ್ಯ ಹೈಕೋರ್ಟಿನಲ್ಲಿ ರವಿರವರ ಬಂಧನ ಮತ್ತು ಅವರ ಮೇಲಿನ ಮೊಕದ್ದಮೆಗಳನ್ನು ಪ್ರಶ್ನಿಸಿ, ಬಿಜೆಪಿ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯವು ಸಿ.ಟಿ.ರವಿಯವರಿಗೆ ಮಧ್ಯಂತರ ಜಾಮೀನನ್ನು ನೀಡಿದೆ. ಸಿ.ಟಿ.ರವಿಯವರನ್ನು ಬೆಂಗಳೂರಿಗೆ ಕರೆತರುವ ಜಾಗದಿಂದಲೇ ಬಿಡುಗಡೆ ಮಾಡಲು ತಿಳಿಸಿದ್ದು, ಹೈಕೋರ್ಟ್ ಸರಕಾರಕ್ಕೆ ಕಪಾಳಮೋಕ್ಷವನ್ನು ಮಾಡಿದೆ ಎಂದು ವಿಶ್ಲೇಷಿಸಿದರು.

ಈ ಕುರಿತು ಬಿ ವೈ ವಿಜಯೇಂದ್ರ ಕುರಿತು ಮಾತನಾಡಿ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಮಧ್ಯಂತರ ಜಾಮೀನು ನೀಡಿ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಇದನ್ನು ಬಿಜೆಪಿ ಸ್ವಾಗತಿಸುತ್ತದೆ. ಮಧ್ಯಂತರ ಆದೇಶ ನೀಡುವ ವೇಳೆ ಹೈಕೋರ್ಟ್, ಸಿ.ಟಿ.ರವಿ ಅವರಿಗೆ ನೋಟಿಸ್ ನೀಡದೆ ಬಂಧನ ಮಾಡಿದ್ದು ಕಾನೂನುಬಾಹಿರ ಎಂದು ಹೇಳಿದರು.

ಪೊಲೀಸ್ ಇಲಾಖೆಯ ಧೋರಣೆಗೆ ಸಚಿವರ ಒತ್ತಡವೇ ಕಾರಣ. ಸಿ.ಟಿ.ರವಿ ಅವರನ್ನು ಬಂಧಿಸಿ ಒಬ್ಬ ಭಯೋತ್ಪಾದಕನಂತೆ ನಡೆಸಿಕೊಂಡಿದ್ದಾರೆ. ಇದು ಅತ್ಯಂತ ಆಘಾತಕರ ವಿಚಾರ. ರವಿ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಆದರೆ, ಅವರನ್ನು ಒಬ್ಬ ಭಯೋತ್ಪಾದಕ ಎಂಬಂತೆ ನಡೆಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ರವಿಯವರನ್ನು ಒಂದು ಪಶುವಿನಂತೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಇಂಥ ಘಟನೆ ಕರ್ನಾಟಕದ ರಾಜಕೀಯ ಮಾತ್ರವಲ್ಲ; ದೇಶದ ರಾಜಕಾರಣದಲ್ಲಿ ನಡೆದಿಲ್ಲ ಎಂದು ವಿವರಿಸಿದರು. ಕಾಂಗ್ರೆಸ್ ಸರಕಾರವು ಹಿಟ್ಲರ್ ಧೋರಣೆಯನ್ನು ಪ್ರದರ್ಶಿಸಿದೆ. ಈ ಆದೇಶವು ರಾಜ್ಯ ಸರಕಾರಕ್ಕೆ ಏಟು ಕೊಟ್ಟಂತಿದೆ. ರವಿಯವರ ಬಂಧನವನ್ನು ಖಂಡಿಸಿ ಮತ್ತು ಸರಕಾರದ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಕರೆಯಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿತ್ತು ಎಂದು ತಿಳಿಸಿದರು. ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ಮುಂದಾದ ಗೂಂಡಾಗಳನ್ನು ಕೂಡಲೇ ಬಂಧಿಸುವಂತೆ ಅವರು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+