ಮಂಡ್ಯದ ಮತ್ತೊರ್ವ ಭಿಕ್ಷೆ ಬೇಡುತ್ತಿದ್ದ ಅಜ್ಜಿ ಮನೆಯಲ್ಲಿ ಪತ್ತೆಯಾಯ್ತು ಲಕ್ಷ ಲಕ್ಷ ಹಣ, ವಿದೇಶಿ ಕರೆನ್ಸಿಗಳು

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಬಳಿಕ ಆಕೆಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆಯಾಗಿದ್ದು ಎಲ್ಲರಿಗೂ ತಿಳಿದೆಯಿದೆ. ಈ ಘಟನೆ ಮಾಸುವ ಮುನ್ನವೇ, ಇದೀಗ ಅಂತಹುದೇ ಮತ್ತೊಂದು ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬಳ ಪುಟ್ಟ ಮನೆಯಲ್ಲಿ ಬರೋಬ್ಬರಿ 3.5 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಈ ಘಟನೆ ಸ್ಥಳೀಯರನ್ನ ಬೆರಗುಗೊಳಿಸಿದೆ. ಶ್ರೀರಂಗಪಟ್ಟಣದಲ್ಲಿ ಭಿಕ್ಷುಕಿ ಬಳಿ ಹಣ ಪತ್ತೆಯಾದ ಈ ಪ್ರಕರಣವೀಗ ಎಲ್ಲರ ಗಮನ ಸೆಳೆದಿದೆ.

ಪಟ್ಟಣದ ಪೂರ್ಣಯ್ಯ ಬೀದಿಯಲ್ಲಿರುವ ಪುಟ್ಟ ಮನೆಯೊಂದರಲ್ಲಿ 65 ವರ್ಷದ ಸಾವಿತ್ರಮ್ಮ ಎಂಬ ವೃದ್ಧೆ ವಾಸವಿದ್ದರು. ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಪುರಸಭೆ ನೀಡಿದ್ದ ಸಣ್ಣ ಜಾಗದಲ್ಲಿ ತಾಯಿ ಪಾರ್ವತಮ್ಮ ಅವರೊಂದಿಗೆ ನೆಲೆಸಿದ್ದ ಇವರು, ಪಟ್ಟಣದ ವಿವಿಧ ದೇವಾಲಯಗಳ ಬಳಿ ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಆರು ತಿಂಗಳ ಹಿಂದೆಯಷ್ಟೇ ತಾಯಿ ಪಾರ್ವತಮ್ಮ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ತಾಯಿಯ ಸಾವಿನ ಬಳಿಕ ಸಾವಿತ್ರಮ್ಮ ಒಂಟಿಯಾಗಿದ್ದರು.

Beggar Woman

ಕಳೆದ ಕೆಲವು ದಿನಗಳಿಂದ ಸಾವಿತ್ರಮ್ಮ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹುಷಾರಿಲ್ಲದ ಸ್ಥಿತಿಯಲ್ಲಿದ್ದ ಅವರನ್ನ ಗಮನಿಸಿದ ಸ್ಥಳೀಯ ಜ್ಯೋತಿಷಿ ಭಾನುಪ್ರಕಾಶ್ ಶರ್ಮ ಅವರು, ಗುರುವಾರ ಸ್ಥಳೀಯ ನಿವಾಸಿಗಳು ಹಾಗೂ ಸ್ವಯಂ ಸೇವಕರ ನೆರವಿನೊಂದಿಗೆ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಚೀಲಗಳಲ್ಲಿ ಪತ್ತೆಯಾದ ಲಕ್ಷಾಂತರ ಹಣ ಹಾಗೂ ವಿದೇಶಿ ಕರೆನ್ಸಿ

ಆಸ್ಪತ್ರೆಗೆ ದಾಖಲಾಗುವ ಮುನ್ನ ವೃದ್ಧೆ ಸಾವಿತ್ರಮ್ಮ, ತನಗೆ ಸರಿಯಾದ ಮನೆ ಇಲ್ಲ, ತನಗೊಂದು ಸುಸಜ್ಜಿತ ಮನೆ ಕಟ್ಟಿಸಿಕೊಡುವಂತೆ ಸ್ವಯಂ ಸೇವಕರಲ್ಲಿ ಮನವಿ ಮಾಡಿದ್ದರು. ಜೊತೆಗೆ ತನ್ನ ಮನೆಯಲ್ಲಿರುವ ಚೀಲಗಳಲ್ಲಿ ಹಣ ಇರುವುದಾಗಿಯೂ ತಿಳಿಸಿದ್ದರು. ವೃದ್ಧೆ ಆಸ್ಪತ್ರೆಗೆ ದಾಖಲಾದ ಬಳಿಕ, ಸ್ವಯಂ ಸೇವಕರು ಆಕೆಯ ಪುಟ್ಟ ಮನೆಯನ್ನ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

ಈ ವೇಳೆ ಮನೆಯಲ್ಲಿದ್ದ ಹಳೆಯ ಚೀಲಗಳನ್ನ ಪರಿಶೀಲಿಸಿದಾಗ ಎಲ್ಲರೂ ಒಮ್ಮೆಲೆ ದಂಗಾಗಿದ್ದಾರೆ. ಚೀಲಗಳ ತುಂಬಾ ಹಣ ತುಂಬಿರುವುದು ಕಂಡುಬಂದಿದೆ. ಎಣಿಸಿದಾಗ ಅದರಲ್ಲಿ ಬರೋಬ್ಬರಿ 3.5 ಲಕ್ಷ ರೂಪಾಯಿ ನಗದು ಇರುವುದು ಖಚಿತವಾಗಿದೆ. ಆಶ್ಚರ್ಯದ ಸಂಗತಿಯೆಂದರೆ, ಈ ಚೀಲಗಳಲ್ಲಿ 500, 200, 100, 50, 20 ಹಾಗೂ 10 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರವಲ್ಲದೆ, ಕೆಲವು ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ. ದೇವಾಲಯಗಳ ಬಳಿ ಬರುವ ವಿದೇಶಿ ಪ್ರವಾಸಿಗರು ನೀಡಿದ್ದ ಕರೆನ್ಸಿಗಳು ಇವಾಗಿರಬಹುದು ಎಂದು ಊಹಿಸಲಾಗಿದೆ.

ಸಾವಿತ್ರಮ್ಮ ಹಿನ್ನೆಲೆ: ಸಿರಿವಂತಿಕೆಯಿಂದ ಬೀದಿಗೆ ಬಂದ ಬದುಕು

ಲಕ್ಷಾಂತರ ರೂಪಾಯಿ ಹಣ ಹೊಂದಿದ್ದರೂ ಭಿಕ್ಷಾಟನೆ ಮಾಡುತ್ತಿದ್ದ ಸಾವಿತ್ರಮ್ಮ ಅವರ ಹಿನ್ನೆಲೆ ಕೆದಕಿದಾಗ ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ. ಮೃತ ತಾಯಿ ಪಾರ್ವತಮ್ಮ ಅವರು ಈ ಹಿಂದೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಈ ಕುಟುಂಬ ಒಂದು ಕಾಲದಲ್ಲಿ ಅತ್ಯಂತ ಸ್ಥಿತಿವಂತವಾಗಿತ್ತು. ಸ್ವಂತದ್ದೇ ಆದ ನಾಲ್ಕೈದು ಮನೆಗಳನ್ನ ಹೊಂದಿದ್ದ ಇವರು, ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿದ್ದರು.

ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಕಾಲಾನಂತರದಲ್ಲಿ ಬದಲಾದ ಕೌಟುಂಬಿಕ ಪರಿಸ್ಥಿತಿಗಳು ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಇವರು ತಮ್ಮೆಲ್ಲಾ ಆಸ್ತಿಪಾಸ್ತಿಗಳನ್ನ ಕಳೆದುಕೊಂಡರು. ಬದುಕಲು ಬೇರೆ ದಾರಿಯಿಲ್ಲದೆ ಬೀದಿಗೆ ಬಿದ್ದ ತಾಯಿ-ಮಗಳು, ಅನಿವಾರ್ಯವಾಗಿ ಭಿಕ್ಷಾಟನೆಗಿಳಿದರು. ಶ್ರೀರಂಗಪಟ್ಟಣದ ದೇವಾಲಯಗಳೇ ಇವರ ಪಾಲಿಗೆ ಆಸರೆಯಾದವು.

ಅಲ್ಲಿ ಬರುವ ಭಕ್ತರು ನೀಡುತ್ತಿದ್ದ ಹಣವನ್ನೇ ಚೀಲಗಳಲ್ಲಿ ಕೂಡಿಟ್ಟುಕೊಂಡು, ಕಣ್ಣೆದುರೇ ಲಕ್ಷಾಂತರ ಹಣವಿದ್ದರೂ ಅದನ್ನು ಬಳಸದೆ ಅನಾರೋಗ್ಯದಲ್ಲಿ ನರಳುವಂತಾದ ಸಾವಿತ್ರಮ್ಮ ಅವರ ಕಥೆ ಇದೀಗ ಎಲ್ಲರ ಕಣ್ಣಾಲಿಗಳನ್ನ ಒದ್ದೆಯಾಗಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+