ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ ಯಾವಾಗ? ಕೂಡಲೇ ಎಸ್‌ಎಪಿ ದರ ನಿಗದಿಪಡಿಸಿ: ಬಸವರಾಜ ಬೊಮ್ಮಾಯಿ ಆಗ್ರಹ

ಹಾವೇರಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಲು ಸರ್ಕಾರ ಕೂಡಲೇ ಎಸ್‌ಎಪಿ (State Advised Price) ದರವನ್ನು ನಿಗದಿಪಡಿಸಿ ಘೋಷಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಪ್ರಮುಖ ಪಾತ್ರ ವಹಿಸಬೇಕಿದ್ದು, ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಬ್ಬಿನ ಬೆಲೆ ನಿಗದಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹಲವು ನ್ಯಾಯಯುತ ಬೇಡಿಕೆಗಳಿವೆ. ರೈತರಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Basavaraj Bommai Former cm Bommai Urges Karnataka Government to Fix SAP for Sugarcane Farmers Immediately

Basavaraj Bommai: ಎಸ್‌ಎಪಿ ಸೂತ್ರದಡಿ ದರ ನಿಗದಿಪಡಿಸಲು ಆಗ್ರಹ

ಕಬ್ಬು ಬೆಳೆಯುವ ದೇಶದ ವಿವಿಧ ರಾಜ್ಯಗಳು ರೈತರ ಹಿತಾಸಕ್ತಿ ಕಾಪಾಡಲು ಹೆಚ್ಚುವರಿ ಬೆಲೆ ಅಥವಾ ಪ್ರೋತ್ಸಾಹಧನ ನೀಡುತ್ತಿವೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ರೈತರಿಗೆ ಹೆಚ್ಚುವರಿ ಆರ್ಥಿಕ ನೆರವು ನೀಡುವ ವ್ಯವಸ್ಥೆಗಳಿವೆ. ಉತ್ತರ ಪ್ರದೇಶದಲ್ಲಿ ಎಫ್‌ಆರ್‌ಪಿ ದರದ ಮೇಲೆ ಪ್ರತಿ ಟನ್‌ಗೆ ಸುಮಾರು ₹400 ಹೆಚ್ಚುವರಿ ಮೊತ್ತ ನೀಡಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ಕರ್ನಾಟಕದಲ್ಲಿ ಎಸ್‌ಎಪಿ ಕಾನೂನಿನಡಿ ಸಕ್ಕರೆ ಹಾಗೂ ಕಬ್ಬಿನಿಂದ ಉತ್ಪಾದನೆಯಾಗುವ ಇತರ ಉಪ ಉತ್ಪನ್ನಗಳ ಆದಾಯದಲ್ಲಿ ರೈತರಿಗೆ ಪಾಲು ನೀಡುವ ನೀತಿಯಿದೆ. ಈ ಸೂತ್ರದ ಆಧಾರದಲ್ಲಿ ಈ ಹಂಗಾಮಿಗೆ ಎಷ್ಟು ದರ ನಿಗದಿಪಡಿಸಬಹುದು ಎಂಬುದನ್ನು ಲೆಕ್ಕಹಾಕಿ, ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಸಕ್ಕರೆಯ ಜೊತೆಗೆ ವಿದ್ಯುತ್‌, ಮೊಲಾಸಿಸ್‌, ಆಲ್ಕೋಹಾಲ್‌ ಮತ್ತು ಎಥೆನಾಲ್‌ ಉತ್ಪಾದನೆಯಿಂದಲೂ ಆದಾಯ ಬರುತ್ತದೆ. ಈ ಉತ್ಪನ್ನಗಳಿಂದ ದೊರೆಯುವ ಆದಾಯದಲ್ಲಿ ರೈತರಿಗೆ ಎಷ್ಟು ಪಾಲು ನೀಡಬೇಕು ಎಂಬುದನ್ನು ಎಸ್‌ಎಪಿ ಸೂತ್ರದ ಅನ್ವಯ ನಿರ್ಧರಿಸಬೇಕು. ಇದರಿಂದ ರೈತರಿಗೆ ತಮ್ಮ ಬೆಳೆಗೆ ದೊರೆಯಬಹುದಾದ ಬೆಲೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದರು.

ತೂಕದಲ್ಲಿ ಮೋಸ ತಡೆಯಲು ಸ್ವತಂತ್ರ ವೇಬ್ರಿಡ್ಜ್‌ ಸ್ಥಾಪಿಸಿ

ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವಾಗ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ದೂರುಗಳಿವೆ. ಈ ಸಮಸ್ಯೆಯನ್ನು ಪರಿಹರಿಸಲು ಸ್ವತಂತ್ರ ವೇಬ್ರಿಡ್ಜ್‌ಗಳನ್ನು ಸ್ಥಾಪಿಸುವುದಾಗಿ ಹೇಳಲಾಗಿದ್ದರೂ, ಹಲವು ವರ್ಷಗಳಿಂದ ಈ ವ್ಯವಸ್ಥೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಸರ್ಕಾರ ಕೂಡಲೇ ಸ್ವತಂತ್ರ ವೇಬ್ರಿಡ್ಜ್‌ಗಳನ್ನು ಸ್ಥಾಪಿಸಬೇಕು. ಕಬ್ಬಿನ ತೂಕದಲ್ಲಿ ಯಾವುದೇ ರೀತಿಯ ಅನ್ಯಾಯವಾಗದಂತೆ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಎಂಎಸ್‌ಪಿ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿ

ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪರಿಷ್ಕರಣೆಯ ಅಗತ್ಯವಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು. ದೀರ್ಘಕಾಲದಿಂದ ಎಂಎಸ್‌ಪಿ ಪರಿಷ್ಕರಣೆಯಾಗದಿರುವುದರಿಂದ ರೈತರ ಸಮಸ್ಯೆಗಳು ಹೆಚ್ಚಾಗಿವೆ. ಬೆಲೆಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿದ್ದರೆ ಈಗಿನ ಪರಿಸ್ಥಿತಿಯ ತೀವ್ರತೆ ಕಡಿಮೆಯಾಗುತ್ತಿತ್ತು ಎಂದರು.

ಕಬ್ಬು ಬೆಳೆಗಾರರ ಹಿತಾಸಕ್ತಿ, ಸಕ್ಕರೆ ಬಳಕೆದಾರರ ಹಿತಾಸಕ್ತಿ ಹಾಗೂ ವಿವಿಧ ರಾಜ್ಯಗಳ ಬೇಡಿಕೆಗಳನ್ನು ಸಮತೋಲನಗೊಳಿಸಿ ಎಂಎಸ್‌ಪಿ ಪರಿಷ್ಕರಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯು ತಕ್ಷಣ ಕಾರ್ಯಾರಂಭ ಮಾಡಿ, ರೈತರ ಪ್ರತಿನಿಧಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಪ್ರಯತ್ನದಿಂದ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಸಮಿತಿ ರಚನೆಯಾಗಿರುವುದನ್ನು ಉಲ್ಲೇಖಿಸಿದ ಅವರು, ಸಮಿತಿಯು ರೈತರಿಗೆ ಲಾಭದಾಯಕ ಬೆಲೆ ದೊರೆಯುವಂತೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಬ್ಬು ಕಟಾವು ವಿಳಂಬವಾದರೆ ರೈತರಿಗೆ ನಷ್ಟ

ಕಬ್ಬು ಬೆಳೆ ಈಗಾಗಲೇ ಕಟಾವಿಗೆ ಸಿದ್ಧವಾಗಿದ್ದರೂ, ಅರೆಯುವ ಕಾರ್ಯ ವಿಳಂಬವಾಗುತ್ತಿರುವುದು ರೈತರಿಗೆ ನಷ್ಟ ಉಂಟುಮಾಡುತ್ತಿದೆ ಎಂದು ಬೊಮ್ಮಾಯಿ ಎಚ್ಚರಿಸಿದರು. ಕಬ್ಬು ಒಣಗಿದರೆ ಅದರ ತೂಕ ಕಡಿಮೆಯಾಗುವುದರ ಜೊತೆಗೆ ಸಕ್ಕರೆ ಉತ್ಪಾದನೆಯ ರಿಕವರಿ ಪ್ರಮಾಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಈಗಾಗಲೇ ರೈತರು ಬರಗಾಲದಂತಹ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಬ್ಬು ಕಟಾವು ಮತ್ತು ಅರೆಯುವ ಪ್ರಕ್ರಿಯೆ ವಿಳಂಬವಾಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಬೆಲೆ ಮತ್ತು ಖರೀದಿಯ ವಿಚಾರದಲ್ಲಿ ಆರಂಭಿಕ ಹಂತದಲ್ಲೇ ಭದ್ರತೆ ಒದಗಿಸಬೇಕು ಎಂದು ಹೇಳಿದರು.

ಎಸ್‌ಎಪಿ ನಿಯಮಗಳನ್ನು ಜಾರಿಗೊಳಿಸುವುದು ಮತ್ತು ರಿಕವರಿ ದರವನ್ನು ನಿರ್ಧರಿಸುವುದು ಕಾನೂನು ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆಯುಕ್ತರು ಮತ್ತು ಅಧಿಕಾರಿಗಳು ರೈತರು, ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಸೂತ್ರ ರೂಪಿಸಬೇಕು ಎಂದು ಸಲಹೆ ನೀಡಿದರು.

ರಿಕವರಿ ಪ್ರಮಾಣವನ್ನು ಪಾರದರ್ಶಕವಾಗಿ ನಿರ್ಧರಿಸಲು ಒತ್ತಾಯ

ಹಾವೇರಿ ಭಾಗದ ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿನ ರಿಕವರಿ ಪ್ರಮಾಣವನ್ನು ಕಡಿಮೆ ತೋರಿಸುತ್ತಿವೆ ಎಂಬ ರೈತರ ಆರೋಪಗಳ ಬಗ್ಗೆಯೂ ಬೊಮ್ಮಾಯಿ ಪ್ರಸ್ತಾಪಿಸಿದರು.

ಕಬ್ಬಿನ ರಿಕವರಿ ಪರೀಕ್ಷೆಯನ್ನು ರೈತರು ಮತ್ತು ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿ ಬೆಳಗಾವಿಯ ನಿಜಲಿಂಗಪ್ಪ ಸಂಸ್ಥೆಯ ಪ್ರಯೋಗಾಲಯದಲ್ಲಿ ನಡೆಸಬೇಕು. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿ, ಕಬ್ಬಿನ ಹಂಗಾಮು ಆರಂಭವಾಗುವ ಮೊದಲೇ ರಿಕವರಿ ಪ್ರಮಾಣವನ್ನು ಪರಸ್ಪರ ಒಪ್ಪಿಗೆಯೊಂದಿಗೆ ನಿರ್ಧರಿಸಿ ರೈತರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಹಾವೇರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕೃಷ್ಣಾ ಜಲಾನಯನ ಪ್ರದೇಶದ ಇತರ ಕಾರ್ಖಾನೆಗಳಿಗೆ ಅನ್ವಯಿಸುವ ಮಾನದಂಡಗಳನ್ನು ಅನ್ವಯಿಸಬೇಕು ಎಂಬ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದರು.

ಕಬ್ಬು ಉದ್ಯಮ ದೇಶದ ಆರ್ಥಿಕತೆಗೂ ಕೊಡುಗೆ

ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವುದು ಕೇವಲ ರೈತರ ಸಮಸ್ಯೆಯಲ್ಲ. ದೇಶದ ಆರ್ಥಿಕತೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸಕ್ಕರೆ ಉತ್ಪಾದನೆಯ ಜೊತೆಗೆ ಎಥೆನಾಲ್‌ ಉತ್ಪಾದನೆಯಿಂದ ಕಚ್ಚಾ ತೈಲದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ವಿದೇಶಿ ವಿನಿಮಯ ಉಳಿಸಲು ನೆರವಾಗುತ್ತದೆ. ಕಬ್ಬಿನಿಂದ ಉತ್ಪಾದನೆಯಾಗುವ ಹಲವು ಉಪ ಉತ್ಪನ್ನಗಳು ಕೈಗಾರಿಕೆಗಳಿಗೆ ಉಪಯುಕ್ತವಾಗಿದ್ದು, ತೆರಿಗೆಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೂ ಆದಾಯ ಬರುತ್ತದೆ. ಹೀಗಾಗಿ ಕಬ್ಬು ಉದ್ಯಮದ ಬೆಳವಣಿಗೆಗೆ ರೈತರಿಗೆ ನ್ಯಾಯಯುತ ಬೆಲೆ ದೊರೆಯುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+