ಬಿ.ವೈ ವಿಜಯೇಂದ್ರಗೆ ಮತ್ತೊಂದು ಸಂಕಷ್ಟ ತಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!
ಬಿಜೆಪಿ ಶಾಸಕ ಹಾಗೂ ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಸವಣ್ಣನವರ ಬಗ್ಗೆ ವಿವಾದಾತ್ಮ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದ್ದು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. "ಬಸವಣ್ಣನವರು ಕೈಲಾಗದವರ ರೀತಿಯಲ್ಲಿ ಕೊನೆಗೆ ಕೈಚೆಲ್ಲಿ ಪ್ರಾಣ ಬಿಟ್ಟರು. ಅವರಂತೆ ಸಮಾಜದವರೆಲ್ಲ ಹೊಳೆಗೆ ಹಾರಿ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಇದು ಅಕ್ಷಮ್ಯ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.
ಯತ್ನಾಳ್ ಈಗಾಗಲೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಜೋರಾಗಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದೆ. ಅಲ್ಲದೇ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಬಸವಣ್ಣನವರ ಬಗ್ಗೆ ಯತ್ನಾಳ್ ಅವರು ಮಾತನಾಡಿದ್ದಾರೆ ಎನ್ನಲಾಗಿರುವ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. ಲಿಂಗಾಯತ ಸಮುದಾಯದ ವಿವಿಧ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಬಿಜೆಪಿ ಶಾಸಕ ಯತ್ನಾಳ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮುದಾಯದ ಮಹಾಪುರುಷ ಹಾಗೂ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಬಗ್ಗೆ ಯತ್ನಾಳ್ ಅವರು ಕೀಳುಮಟ್ಟದಲ್ಲಿ ಮಾತನಾಡಿದ್ದು ಸರಿಯಲ್ಲ. ಇದು ಅವರ ಸಂಸ್ಕಾರದ ದ್ಯೋತಕವಾಗಿದೆ. ಅವರ ಹೇಳಿಕೆಗೆ ಯಾವ ಆಧಾರವಿದೆ ಎಂದು ಸಮುದಾಯದ ನಾಯಕರು ಪ್ರಶ್ನೆ ಮಾಡಿದ್ದಾರೆ. ಬಸವಣ್ಣರ ಬದುಕು, ಸಾಮಾಜಿಕ ಕಳಕಳಿ ಹೇಗಿತ್ತು ಎನ್ನುವುದು ಅವರ ಸಮಕಾಲೀನ ಶರಣರ ವಚನಗಳೇ ಸಾಕ್ಷಿಯಾಗಿವೆ. ತಕ್ಷಣ ಯತ್ನಾಳ್ ಅವರು ಕ್ಷಮೆ ಕೇಳಬೇಕು. ಕೇಳದಿದ್ದರೆ ಸರ್ಕಾರ ಮತ್ತು ಅವರ ಪಕ್ಷದ ವರಿಷ್ಠರು ಶಾಸಕ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಎಂದು ಗುರುಬಸವ ಮಂಟಪದ ಸಂಚಾಲಕ ಶಶಿಧರ ಕರವೀರಶೆಟ್ಟರ ಅವರು ಒತ್ತಾಯಿಸಿದ್ದಾರೆ.
ಒಂದೊಮ್ಮೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕ್ಷಮೆ ಕೇಳದಿದ್ದರೆ, ಲಿಂಗಾಯತ ನಾಯಕರಲ್ಲ ಎಂದು ಬಿಂಬಿಸಿ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದೂ ಸಹ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಲಾಗಿದೆ. ಇನ್ನು ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ವಿ. ಗೊಂಗಡಶೆಟ್ಟಿ ಅವರು ಮಾತನಾಡಿ, ಬಸವಾದಿ ಶರಣರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಲಿಂಗಾಯತ ಸಮುದಾಯದಷ್ಟೇ ಕ್ಷಮೆಯಲ್ಲ. ಸಮಸ್ತ ನಾಡಿನ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡು, ಅವರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹಿಸಲಾಗುವುದು ಎಂದಿದ್ದಾರೆ.

ವಿಜಯೇಂದ್ರಗೆ ಸಂಕಷ್ಟ: ಯತ್ನಾಳ್ ಅವರು ಕೊಟ್ಟಿದ್ದಾರೆ ಎನ್ನಲಾಗಿರುವ ಹೇಳಿಕೆಯು ಯತ್ನಾಳ್ ಅವರಿಗಿಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಸಂಕಷ್ಟ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈಗಾಗಲೇ ಕೊತ ಕೊತ ಕುದಿಯುತ್ತಿರುವ ಯತ್ನಾಳ್ ಅವರನ್ನು ಹಾಗೂ ಅವರ ತಂಡದವರ ಮೇಲೆ ರಾಜ್ಯ ಮಟ್ಟದಲ್ಲಿ ಬಿಜೆಪಿಯಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕೆ ಬಿಜೆಪಿ ಹೈಕಮಾಂಡ್ ಅವರೇ ಮಧ್ಯಪ್ರವೇಶಿಸಬೇಕಾಯಿತು. ಆದರೆ, ಇದೀಗ ಯತ್ನಾಳ್ ಅವರು ಸಮುದಾಯಕ್ಕೆ ಸಂಬಂಧಿಸಿದಂತೆ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದ್ದು, ಇದು ಅದೇ ಸಮುದಾಯದವರಾದ ಬಿ.ವೈ ವಿಜಯೇಂದ್ರ ಅವರಿಗೂ ಸಂಕಷ್ಟವನ್ನು ತಂದೊಡ್ಡಿದೆ.
ಈ ವಿಚಾರದಲ್ಲಿ ಯತ್ನಾಳ್ ಅವರಿಂದ ಕ್ಷಮಾಪಣೆ ಕೇಳಿಸಬೇಕು ಇಲ್ಲವೇ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದೆರಡೂ ಆಗದಿದ್ದರೆ, ಸಮುದಾಯದ ಕೋಪವನ್ನು ಬಿ.ವೈ ವಿಜಯೇಂದ್ರ ಅವರು ಎದುರಿಸಬೇಕಾಗುತ್ತದೆ.












Click it and Unblock the Notifications