ಬಸನಗೌಡ ಪಾಟೀಲ್ ಯತ್ನಾಳ್ಗೆ ಮತ್ತೊಂದು ನೋಟಿಸ್ ಜಾರಿ; ಉಮಾಶ್ರೀ ವಿರುದ್ಧ ಎಫ್ಐಆರ್ ದಾಖಲು
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಬಾರಿ ಹೇಗಾದರೂ ಮಾಡಿ ಸ್ವತಂತ್ರ ಸರ್ಕಾರ ರಚಿಸಲು ತಂತ್ರ ರೂಪಿಸುತ್ತಿದ್ದಾರೆ.
ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ಮೂರೂ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ರಾಜ್ಯ ನಾಯಕರಲ್ಲದೇ ರಾಷ್ಟ್ರೀಯ ನಾಯಕರೂ ರಾಜ್ಯದೆಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ.

ಬಿಜೆಪಿ ಪರ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕಾಂಗ್ರೆಸ್ ಪರ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಣದೀಪ್ ಸುರ್ಜೇವಾಲ ಸೇರಿದಂತೆ ಹಲವರು ಪ್ರಚಾರ ನಡೆಸುತ್ತಿದ್ದಾರೆ.
ಇನ್ನು ರಾಜಕೀಯ ನಾಯಕರ ನಡುವೆ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳು ಜೋರಾಗಿದ್ದು, ವೈಯಕ್ತಿಕ ನಿಂದನೆಗಳ ಮೂಲಕ ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸುತ್ತಿದ್ದಾರೆ. ಇದೇ ವೇಳೆ ವಿಜಯಪುರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಚುನಾವಣಾ ಆಯೋಗದಿಂದ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿದೆ.
ಇದೇ ಮೇ 5ರಂದು ಮಸ್ಕಿಯಲ್ಲಿ ನಡೆದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರದ ಭಾಷಣದೊಂದಿಗೆ ಆರ್‌ಪಿ ಆಕ್ಟ್ ಉಲ್ಲಂಘನೆ ಉಲ್ಲಂಘನೆ ಮಾಡಿದ್ದು, ಹೀಗಾಗಿ ಕಾರಣ ಕೇಳಿ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ವಿಷದ ಹಾವು ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾವೇನು ಹೆಬ್ಬಾವಾ? ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಅರೇಹುಚ್ಚ ಎಂದು ವಾಗ್ದಾಳಿ ನಡೆಸಿದ್ದರು. ಇದು ಆರ್‌ಪಿ ಆಕ್ಟ್ ಉಲ್ಲಂಘನೆಯಾಗಿತ್ತು.
ಈ ಹಿನ್ನೆಲೆ ಇದೀಗ ಮಸ್ಕಿ ಕ್ಷೇತ್ರದ ಚುನಾವನಾಧಿಕಾರಿ 24 ಗಂಟೆಗಳಲ್ಲಿ ಸೂಕ್ತ ಉತ್ತರ ನೀಡುವಂತೆ ಬಸನಗೌಡ ಪಾಟೀಲ್ ಯತ್ನಾಳ್ಗೆ ನೋಟಿಸ್ ನೀಡಿದ್ದಾರೆ. ತಪ್ಪಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ವಿಷಕನ್ಯೆ ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಗೂ ಕೂಡ ಚುನಾವಣಾವಧಿಗಳು ಕಾರಣ ಕೇಳಿ ನೋಟಿಸ್ ನೀಡಿದ್ದರು.
ಕಾಂಗ್ರೆಸ್ ನಾಯಕಿ ಉಮಾಶ್ರೀ ವಿರುದ್ಧ ಎಫ್ಐಆರ್ ದಾಖಲು
ಇನ್ನು ಏಪ್ರಿಲ್ 28ರಂದು ಮಸ್ಕಿ ಪಟ್ಟಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರು ಬಿಜೆಪಿಯವರು ವಿಷಜಂತುಗಳು ಎಂದು ಹೇಳಿಕೆ ನೀಡಿದ್ದರು.
ಇದೀಗ ಉಮಾಶ್ರೀ ವಿರುದ್ಧ ರಾಯಚೂರು ಜಿಲ್ಲೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಬಿಜೆಪಿ ಮುಖಂಡರು ವಿಷ ಜಂತುಗಳೆಂದು ಉಮಾಶ್ರೀ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಬಿಜೆಪಿ ಮುಖಂಡರು ಧರ್ಮವನ್ನು ಒಡೆದು, ಕೋಮುವಾದ ಸೃಷ್ಟಿಸಿ ಬೆಂಕಿ ಹಚ್ಚುವಂಥವರು ಎಂದು ಆರೋಪ ಮಾಡಿದ್ದರು. ಇದೇ ಹೇಳಿಕೆಗಳ ಆಧಾರದಲ್ಲಿ ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಭಾಗವಾಗಿ 224 ಕ್ಷೇತ್ರಗಳಿಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಯಾವ ಪಕ್ಷ ನೂತನ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.












Click it and Unblock the Notifications