ಬಿಜೆಪಿ ಮೇಲಿನ 'ಯತ್ನಾಳ್' ಆರೋಪ 'ನಿಜ'ವಿರಬಹುದು: 'ಡಿಸಿಎಂ' ಹುದ್ದೆ ಸೃಷ್ಟಿ ಬಗ್ಗೆ ಎಂಬಿ ಪಾಟೀಲ್ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 29: ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ತಮ್ಮ ಪಕ್ಷದ ವಿರುದ್ಧವೇ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದರೂ ಆ ಪಕ್ಷದವರು ಕ್ರಮ ಕೈಗೊಳ್ಳುತ್ತಿಲ್ಲ. ಇದೆಲ್ಲ ನೋಡಿದರೆ ಯತ್ನಾಳ್ ಅವರ ಆರೋಪಗಳಲ್ಲಿ ಸತ್ಯಾಂಶವಿರಬಹುದು ಎಂದು ಕಾಂಗ್ರೆಸ್ ನಾಯಕ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಬಿಜೆಪಿಗೆ ತಿರುತೇಟು ಕೊಟ್ಟಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕಾಂಗ್ರೆಸ್ ಏಜೆಂಟ್ ಎಂದು ಬಿಜೆಪಿ ಆರೋಪಿಸುತ್ತಿರುವ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು. ಯತ್ನಾಳ್ ಅವರು ಐದು ವರ್ಷಗಳಿಂದಲೂ ತಮ್ಮ ಪಕ್ಷದ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಆದರೆ, ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾರದಷ್ಟು ದುರ್ಬಲವಾಗಿದೆ. ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಅವರ ಮೇಲೆ ಕ್ರಮ ತೆಗೆದುಕೊಳ್ಳುವ ನಿರ್ಧಾರ ಸಾಧ್ಯವಾಗಿಲ್ಲ ಎಂದು ವಿವರಿಸಿದರು.

ಯತ್ನಾಳ್ ಅವರಿಗೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ. ಆದರೆ ಬಿಜೆಪಿಯವರು ತಮ್ಮ ಸಮಾಧಾನಕ್ಕೆ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಬಹುಶಃ, ಬಿಜೆಪಿ ಸರ್ಕಾರದ ಅವಧಿಯ ಅವ್ಯವಹಾರಗಳ ಬಗ್ಗೆ ಯತ್ನಾಳ್ ಅವರ ಹತ್ತಿರ ಮಾಹಿತಿ ಇರುವುದರಿಂದಲೇ ಅವರು ಹಿಂದೇಟು ಹಾಕುತ್ತಿರಬಹುದು ಎಂದು ಹೇಳಿದರು.
ಕೊರೊನಾ ಅವ್ಯವಹಾರದ ಬಗ್ಗೆ ತನಿಖೆ
ಬಿಜೆಪಿ ಸರ್ಕಾರವಿದ್ದಾಗ ಕೊರೋನಾ ಸಂದರ್ಭದಲ್ಲಿ ನಡೆದ ಖರೀದಿ ಮತ್ತಿತರ ವ್ಯವಹಾರಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಿ ವಾಸ್ತವವನ್ನು ಜನರ ಮುಂದಿಡುವ ಕೆಲಸ ಮಾಡುತ್ತದೆ. ಯಾರಿಂದಲಾದರೂ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಅಂಗಡಿ ಮುಂಗಟ್ಟುಗಳು, ವಾಣಿಜ್ಯೋದ್ಯಮ ಸಂಸ್ಥೆಗಳು ಕನ್ನಡ ನಾಮಫಲಕ ಬಳಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ). ಕಾರ್ಯಕರ್ತರು ಹೋರಾಟ ನಡೆಸಿದ್ದರು. ಈ ಕುರಿತ ಪ್ರಶ್ನೆಗೆ ಅವರು, "ನಿಯಮದ ಪ್ರಕಾರ ಕನ್ನಡ ಬಳಸಬೇಕು ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ, ಯಾರೂ ಏಕಾಏಕಿ ಕಾನೂನನ್ನು ತಮ್ಮ ಕೈಗೆ ಎತ್ತಿಕೊಳ್ಳಬಾರದು" ಎಂದು ಹೇಳಿದರು.

ಕನ್ನಡ ನಾಮಫಲಕ ಅಳವಡಿಕೆಗೆ ಗಡುವು, ಆಮೇಲೆ ಕ್ರಮ
ಮೊದಲಿಗೆ, ಕನ್ನಡ ನಾಮಫಲಕಗಳನ್ನು ಹಾಕಲು ಒಂದು ಗಡುವು ನಿಗದಿಪಡಿಸುವ ನಿರ್ಧಾರ ಆಗಲಿ. ಅದಾದ ಮೇಲೆ ನಿಯಮ ಪಾಲಿಸದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ.
ಉದ್ಯಮಗಳ ಸ್ಥಾಪನೆಗೆ ಭಾರತದ ರಾಜ್ಯಗಳೂ ಸೇರಿದಂತೆ ಜಗತ್ತಿನೆಲ್ಲೆಡೆ ಪೈಪೋಟಿ ಇದೆ. ಉದ್ಯಮಿಗಳಿಗೆ ಯಾವುದೇ ರಾಜ್ಯವೂ ಅನಿವಾರ್ಯವಲ್ಲ. ಇಂತಹ ಘಟನೆಗಳು ನಡೆದಾಗ ಅವು ಎಲ್ಲಾ ಕಡೆ ವೈರಲ್ ಆಗಿ ನಮ್ಮಲ್ಲಿ ಬಂಡವಾಳ ಹೂಡಲು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಕನ್ನಡಪರ ಹೋರಾಟಗಾರರು ಇದರ ಬಗ್ಗೆಯೂ ಗಮನಹರಿಸಬೇಕು ಎಂದು ತಿಳಿಸಿದರು.
ಡಿಸಿಎಂ ಹುದ್ದೆ ಸೃಷ್ಟಿ: ಬಹಿರಂಗವಾಗಿ ಹೇಳಲ್ಲ
ನಮ್ಮ ಇಲಾಖೆಗೆ ಒಳಪಟ್ಟ ವ್ಯಾಪ್ತಿಯಲ್ಲಿ ಕೈಗಾರಿಕೆಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಸಲಹಾಸೂಚಿ (ಅಡ್ವೈಸರಿ) ಹೊರಡಿಸಲಾಗುವುದು. ಕಾಂಗ್ರೆಸ್ ಸರ್ಕಾರದಲ್ಲಿ ಮೂವರು ಡಿಸಿಎಂ ನೇಮಕ ಸಾಧ್ಯತೆ ಇದು ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ನಾಯಕರ ಮುಂದೆ ನಮ್ಮ ಅಭಿಪ್ರಾಯ ಹೇಳುತ್ತೇವೆ. ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಅಗತ್ಯವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications