ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಹಸಿರು ನಿಶಾನೆ: ಸಿ.ಎಂ ಸಿದ್ದರಾಮಯ್ಯ ರಿಯಾಕ್ಷನ್!
ಕಳೆದ ಒಂದು ತಿಂಗಳಿಗೂ ಹೆಚ್ಚು ಅವಧಿಯಿಂದ ಅಥವಾ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಯನ್ನು ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಸರ್ಕಾರ ನಿರ್ಧಾರ ತೆಗೆದುಕೊಂಡಾಗಿನಿಂದಲೂ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಅವರು ಇದನ್ನು ಉಗ್ರವಾಗಿ ಖಂಡಿಸಿದ್ದರು. ಈ ಸಂಬಂಧ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ಇದೀಗ ಮೈಸೂರು ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಮುಂದುವರಿದು ಮೈಸೂರು ದಸರಾವನ್ನು ಧಾರ್ಮಿಕ ನೆಲೆಗಟ್ಟಿಗೆ ಸೀಮಿತವಾಗಿಸಲು ಸಾಧ್ಯವಿಲ್ಲ. ಜಾತಿ, ಧರ್ಮಗಳನ್ನು ಮೀರಿ ನಾಡಿನ ಸಮಸ್ತ ಜನರು ಕೂಡಿ ಸಂಭ್ರಮಿಸುವ ಹಬ್ಬವೆಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೆವು. ಆದರೂ ಇದರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ, ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಯಿತು. ಈಗ ಸುಪ್ರೀಂ ತೀರ್ಪಿನಿಂದ ನಮ್ಮ ಸರ್ಕಾರದ ನಿಲುವಿಗೆ ಮನ್ನಣೆ ದೊರೆತಿದೆ ಎಂದು ಭಾವಿಸುತ್ತೇನೆ. ಜಾತಿ, ಧರ್ಮಗಳ ವೈಷಮ್ಯ ಬಿತ್ತುವ ವಿಚ್ಛಿದ್ರಕಾರಿ ಮನಸುಗಳಿಗೆ ಇನ್ನಾದರೂ ತಾಯಿ ಚಾಮುಂಡೇಶ್ವರಿ ಸದ್ಬುದ್ದಿ ನೀಡಲಿ ಎಂದು ಆಶಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, "ಧರ್ಮ ನಿರಪೇಕ್ಷತೆ" ನಮ್ಮ ಸಂವಿಧಾನದಲ್ಲಿ ಮೂಲಭೂತವಾಗಿರುವ ತತ್ವ. ಸಂವಿಧಾನದತ್ತವಾಗಿ ಆಯ್ಕೆಯಾದ ಸರ್ಕಾರದ ನಿರ್ಧಾರಗಳು ಹಾಗೂ ಆಚರಣೆಗಳು ಧರ್ಮ ನಿರಪೇಕ್ಷತೆಯಿಂದ ಕೂಡಿರಬೇಕಾಗುತ್ತದೆ.
ಹೈಕೋರ್ಟಷ್ಟೇ ಅಲ್ಲ ಸುಪ್ರೀಂ ಕೋರ್ಟ್ ಕೂಡ ಕೋಮುವಾದದ ಪ್ರತಿಪಾದಕರಿಗೆ ಮುಖಭಂಗ ಮಾಡಿದೆ. ಬಾನು ಮುಷ್ತಾಕ್ ಅವರು ನಾಡಹಬ್ಬ ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಹಾಕಿದ್ದ ಅರ್ಜಿಯು ವಿಚಾರಣೆಗೂ ಅರ್ಹವಲ್ಲದ್ದು ಎಂದು ವಜಾಗೊಳಿಸಿ ದೇಶದ ಸಮಗ್ರತೆಯ ಆಶಯವನ್ನು ಎತ್ತಿ ಹಿಡಿದಿದೆ.
ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿದ್ದು ಅರ್ಜಿ ವಿಚಾರಣೆಯನ್ನಷ್ಟೇ ಅಲ್ಲ,
ಕೋಮುವಾದದ ನಿರಾಕರಣೆ,
ದ್ವೇಷದ ನಿರಾಕರಣೆ,
ಸಂವಿಧಾನ ವಿರೋಧಿ ನೀತಿಯ ನಿರಾಕರಣೆ,
ಮಹಿಳಾ ವಿರೋಧಿತನದ ನಿರಾಕರಣೆ,
ಮನುವಾದದ ನಿರಾಕರಣೆ,
ಸುಪ್ರೀಂ ಕೋರ್ಟ್ ಅರ್ಜಿದಾರರ ವಾದವನ್ನೇ ಕೇಳಲು ತಯಾರಿಲ್ಲದೆ, ವಿಚಾರಣೆಗೂ ಮನ್ನಣೆ ನೀಡದೆ ಸ್ಪಷ್ಟವಾಗಿ ಕೋಮು ಪ್ರತಿಪಾದನೆಯನ್ನು ಎತ್ತಿ ಬಿಸಾಡಿದೆ. ಇನ್ನಾದರೂ ಬಿಜೆಪಿಗರಿಗೆ ಜ್ಞಾನೋದಯವಾಗಲಿ, ಸಂವಿಧಾನದ ಆಶಯ ಅರಿವಾಗಲಿ ಎಂದು ಹೇಳಿದ್ದಾರೆ.












Click it and Unblock the Notifications