ಎಂಬಿಎ ಪದವೀಧರ ಬೆಳಗ್ಗೆ ಮ್ಯಾನೇಜರ್ ಸಂಜೆಗೆ ಸರಗಳ್ಳ

ಅವನು ಎಂಬಿಎ ಪದವೀಧರ ಯುವಕ. ಹೆಸರು ಸೈಕತ್ ಗುಯಿ (Saikat Guin). ತನ್ನ ಓದು- ಬುದ್ಧಿಮತ್ತೆಗೆ ತಕ್ಕಂತೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆಯ ಹುದ್ದೆಯಲ್ಲೂ ಇದ್ದ. ಆದರೆ ಅವನಿಗೆ ಸ್ವಲ್ಪ ವಕ್ರಬುದ್ಧಿಯೂ ಇತ್ತು. ಏನಪ್ಪಾ ಅಂದರೆ ಬೆಳಗ್ಗೆಯಿಂದ ಸಂಜೆವರೆಗೂ ಸೂಟು-ಬೂಟು ಹಾಕಿಕೊಂಡು ಪ್ರತಿಷ್ಠಿತ MNC ಕಂಪನಿಯಲ್ಲಿ ಮ್ಯಾನೇಜರ್ ಆಗಿ ಉದ್ಯೋಗ ಮಾಡುವುದು.
ಆದರೆ ಸಂಜೆಯಾಗುತ್ತಿದ್ದಂತೆ ಆಫೀಸರ್ ವೇಶ ಕಳಚಿಟ್ಟು ಕಳ್ಳನ ಪೋಷಾಕು ತೊಡುವುದು. ಅಂದರೆ ರಾತ್ರಿಗತ್ತಲಲ್ಲಿ ಮಹಿಳೆಯರ ಕತ್ತಿಗೆ ಕೈಹಾಕಿ ಚಿನ್ನದ ಸರಗಳನ್ನು ಎಗರಿಸುವ ಕೈಚಳಕವನ್ನು ಸಿದ್ಧಿಸಿಕೊಂಡಿದ್ದ. ಏನೋ ಶಾಲಾ-ಕಾಲೇಜು ಬಿಟ್ಟವರು. ಪುಂಡಪೋಕರಿಗಳು ಇಂತಹ ಕುಕೃತ್ಯಕ್ಕೆ ಕೈಹಾಕಿದರೆ ಅವರನ್ನು ಹೇಗೂ ಸರಿದಾರಿಗೆ ತರಬಹುದು. ಆದರೆ ಸೋ ಕಾಲ್ಡ್ ಇಂಟಲೆಕ್ಚುಯಲ್ಸ್ ಕಳ್ಳತನಕ್ಕೆ ಇಳಿದರೆ...
ಅಂದಹಾಗೆ ಈ ಎಂಬಿಎ ಪದವೀಧರ ಸರಗಳ್ಳ ಕೋಲ್ಕೊತ್ತಾದವ. ಇನ್ನು ಇವನಿಗೆ ಜತೆಯಾಗಿದ್ದವನು ಶೌನಕ್ ದತ್ತಾ (20). ಇವನೂ ಅಲ್ಲಿಯವನೇ. ಆದರೆ ಇಲ್ಲಿ ಸೈಕತ್ ಗುಯಿ (27) ಜತೆಗಾರ. ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ. ಕಳೆದೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಹತ್ತಾರು ಸರಗಳ್ಳತನ ಮಾಡಿರುವ ಖದೀಮ ಜೋಡಿ ಇವರದು.
ತಿಂಗಳಿಗೆ 25 ಸಾವಿರ ರೂ ಸಂಬಳ ಪಡೆಯುವ ಸೈಕತ್ ಗುಯಿ ದುಂದುವೆಚ್ಚಕ್ಕೆ ಆರಿಸಿಕೊಂಡ ಮಾರ್ಗವೇ ಸರಗಳ್ಳತನ. ಇಂತಿಪ್ಪ ಸರಗಳ್ಳ ಮುಂದಿನ ತಿಂಗಳು ಯುವತಿಯೊಬ್ಬಳ ಕುತ್ತಿಗೆಗೆ ಮಾಂಗಲ್ಯ ಧಾರಣೆ ಮಾಡುವವನಿದ್ದ!
ಖದೀಮ ಜೋಡಿ Yamaha R15 ಬೈಕೇರಿ ರೋಡಿಗಿಳಿದರೆಂದರೆ ಮೊದಲ ರೌಂಡಿನಲ್ಲೇ ಒಂದಿಬ್ಬರು ಹೆಣ್ಣುಮಕ್ಕಳ ಕುತ್ತಿಯಲ್ಲಿರುವ ಪವಿತ್ರ ಮಾಂಗಲ್ಯಗಳು ಕಳಚಿದವು ಅಂತಲೇ ಅರ್ಥ. ಸುಮಾರು ಒಂದುವರೆ ವರ್ಷ ಕಾಲ ಹೀಗೆ ಸುತ್ತು ಹಾಕಿದವರು ಮೊನ್ನೆ ಭಾನುವಾರ ಪೊಲೀಸರ ಕೈಗೆ ಸಿಕ್ಕಿಬೀಳುವ ಮೂಲಕ ತಮ್ಮ ಚೈನ್ ಸ್ನಾಚಿಂಗ್ ರೌಂಡ್ಸ್ ಮುಗಿಸಿದ್ದಾರೆ. ಅಂದಹಾಗೆ ಇವರು ಹೆಚ್ಚಾಗಿ ಬಾಬೂಸಾಪಾಳ್ಯ ಮತ್ತು ಎಚ್ಆರ್ ಬಿಆರ್ ಲೇಔಟಿನಲ್ಲಿ ಅಡ್ಡಾಡಿದ್ದರು. (ಚಿತ್ರ ಸುದ್ದಿ)











Click it and Unblock the Notifications