ಬೆಂಗಳೂರು-ಹಾಸನ ರಸ್ತೆಯಲ್ಲಿ ಟೋಲ್ ಕಟ್ಟಬೇಕು
ಬೆಂಗಳೂರು, ನ.6 : ಬೆಂಗಳೂರು ಮತ್ತು ಹಾಸನ ನಡುವೆ ಸಂಚರಿಸುವ ವಾಹನ ಸವಾರರ ಟೋಲ್ ಪಾವತಿ ಮಾಡುವ ಕಾಲ ಹತ್ತಿರವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟೋಲ್ ಸಂಗ್ರಹಿಸಲು ನಿರ್ಧರಿಸಲಾಗಿದೆ. ಈಗಾಗಲೇ ದೇವಿಹಳ್ಳಿಯಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಟೋಲ್ ಸಂಗ್ರಹ ಕಾರ್ಯ ಆರಂಭವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು-ಹಾಸನ ನಡುವಿನ ಮಾರ್ಗದಲ್ಲಿ ಟೋಲ್ ಸಂಗ್ರಹ ಕಾರ್ಯ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ದೇವಿಹಳ್ಳಿಯಿಂದ ಬೆಂಗಳೂರಿಗೆ ಆಗಮಿಸುವ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಣ ಮಾಡುವ ಕಾರ್ಯವನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದ್ದು, ಸದ್ಯ ಟೋಲ್ ಸಂಗ್ರಹ ಕಾರ್ಯ ಆರಂಭವಾಗಿದೆ.

ಬೆಂಗಳೂರು-ಹಾಸನ ನಡುವಿನ ಹೆದ್ದಾರಿಯ ಕಾಮಗಾರಿಗಳು ಪೂರ್ಣಗೊಂಡ ನಂತರ ಈ ರಸ್ತೆಯಲ್ಲೂ ಟೋಲ್ ಸಂಗ್ರಹಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಎಲ್ ಅಂಡ್ ಟಿ ಕಂಪನಿ ಹೊರಡಿಸಿರುವ ಅಧಿಸೂಚನೆಯಂತೆ ಕಾರು, ಜೀಪ್, ವ್ಯಾನ್ ಗಳು ಒಂದು ಬಾರಿ ಸಂಚರಿಸಲು 40 ಕಿ.ಮೀಗಳಿಗೆ 35 ರೂ.ಶುಲ್ಕ ಪಾವತಿ ಮಾಡಬೇಕು. ಉಳಿದ 20 ಕಿ.ಮೀ.ಪ್ರಯಾಣಕ್ಕೆ 20 ರೂ.ಟೋಲ್ ಪಾವತಿ ಮಾಡಬೇಕಾಗುತ್ತದೆ.
ಬಸ್ ಮತ್ತು ಲಾರಿಗಳು 175 ರೂ. ಟೋಲ್ ಪಾವತಿ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ, ಟೋಲ್ ಸಂಗ್ರಹದ ದಿನಾಂಕವನ್ನು ಮಾತ್ರ ಅಧಿಕೃತವಾಗಿ ಪ್ರಕಟಿಸಬೇಕಾಗಿದೆ. ಬೆಂಗಳೂರು ಮತ್ತು ಹಾಸನ ನಡುವೆ ಕಾರಿನಲ್ಲಿ ಪ್ರಯಾಣಿಸುವವರು ಒಮ್ಮೆ ಪ್ರಯಾಣಿಸಲು 110 ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ.
ರಸ್ತೆ ನಿರ್ಮಾಣ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್ ಎಚ್ 75 ರಸ್ತೆಯನ್ನು ಅಭವೃದ್ಧಿ ಪಡಿಸಲು ಮುಂದಾಗಿದೆ. ರಸ್ತೆ ಅಭಿವೃದ್ಧಿ ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವಿ ಸಂಚಾರದ ಅವಧಿ ಕಡಿಮೆಗೊಳಿಸಲು ಚಿಂತನೆ ನಡೆಸಿದೆ. ಈ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಲು ಪ್ರಾಧಿಕಾರ ಚಿಂತನೆ ನಡೆಸಿದ್ದು, ಈ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಬೆಂಗಳುರು-ಮಂಗಳೂರು ನಡುವಿನ ರಸ್ತೆ ಅಭಿವೃದ್ಧಿ ಯೋಜನೆಯ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಅಲ್ಲಿಂದ ಅನುಮತಿ ದೊರೆತ ಬಳಿಕ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಶಿರಾಡಿ ಘಾಟ್ ನಲ್ಲಿ ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡಿಯಬೇಕಾಗಿದೆ. ಆದ್ದರಿಂದ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ.












Click it and Unblock the Notifications