ನಾಳೆ ಪಿತೃಪಕ್ಷವಿದ್ದರೂ ಮಾಂಸ ಸಿಗಲ್ಲ!
ವರ್ಷಕ್ಕೊಮ್ಮೆ ಆಚರಿಸುವ ಮಹಾಲಯ ಅಮಾವಾಸ್ಯೆ (ಪಿತೃಪಕ್ಷ) ಹಬ್ಬದಂದು ಮನೆಗಳಲ್ಲಿ ದೈವಾಧೀನರಾದವರಿಗೆ ನೆಚ್ಚಿನ ಖಾದ್ಯಗಳನ್ನು ಎಡೆಯಿಟ್ಟು ಪೂಜಿಸುವುದು ವಾಡಿಕೆ. ಬಹುತೇಕರು ಈ ಹಬ್ಬಕ್ಕೆ ಮಾಂಸಾಹಾರ ಖಾದ್ಯಗಳನ್ನೇ ಸಿದ್ಧಪಡಿಸಿ, ಸವಿಯುತ್ತಾರೆ. ಆದರೆ, ಈ ಬಾರಿಯ ಹಬ್ಬದ ಆಚರಣೆಗೆ ಭಾರಿ ತೊಡಕಾಗಲಿದೆ.
ಅಕ್ಟೋಬರ್ 2ರಂದೇ (ನಾಳೆ) ಮಹಾಲಯ ಅಮಾವಾಸ್ಯೆ ಜೊತೆಗೆ ಗಾಂಧಿ ಜಯಂತಿಯೂ ಇರುವುದರಿಂದ ಆ ದಿನ ನಿಯಮದ ಪ್ರಕಾರ ದೇಶದೆಲ್ಲೆಡೆ ಮಾಂಸ ಮಾರಾಟ ನಿಷಿದ್ಧ. ಇದು ಹಬ್ಬ ಆಚರಿಸುವ ಖುಷಿಯಲ್ಲಿದ್ದವರಿಗೆ ನುಂಗಲಾರದ ಬಿಸಿ ತುಪ್ಪದಂತೆ ಪರಿಣಮಿಸಿದೆ.

ಈ ವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದೇ ಪಿತೃಪಕ್ಷ ಕೂಡ ಬಂದಿದೆ. ಗಾಂಧಿ ಜಯಂತಿ ಹಿನ್ನೆಲೆ ಪ್ರತಿ ವರ್ಷವೂ ಆ ದಿನ ಮಾಂಸಾಹಾರ ನಿಷೇಧ ಮಾಡಲಾಗುತ್ತದೆ. ಆದರೆ, ಪಿತೃಪಕ್ಷಕ್ಕೆ ಬಹುತೇಕರು ಮಾಂಸದ ಖಾದ್ಯಗಳನ್ನೇ ಮಾಡುವ ಪದ್ಧತಿಯಲ್ಲೇ ಬೆಳೆಸಿಕೊಂಡು ಬಂದಿದ್ದಾರೆ.
ಮನೆಯ ಹಿರಿಯರಿಗೆ ನೆಚ್ಚಿನ ಮಾಂಸಾಹಾರದ ಖಾದ್ಯಗಳನ್ನು ಸಿದ್ಧಪಡಿಸಿ, ಎಡೆಯಿಟ್ಟು ಸವಿಯಬೇಕು ಎಂದುಕೊಂಡಿದ್ದವರಿಗೆ ಈ ನಿಷೇಧ ಬೇಸರ ತರಿಸಿದೆ. ಪ್ರತಿ ವರ್ಷದಂತೆ ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ನಾಳೆ ಗಾಂಧಿ ಜಯಂತಿಯ ನಿಮಿತ್ತ ಮಾಂಸ ಮಾರಾಟ ನಿಷೇಧದ ದಿನ ಎಂದು ಆದೇಶ ಹೊರಡಿಸಿವೆ. ಇದು ರಾಜ್ಯದ ಲಕ್ಷಾಂತರ ಜನರ ಹಬ್ಬದ ಸಂಭ್ರಮವನ್ನು ಕಸಿದಂತಾಗಿದೆ.

ಕಳೆದ ಕೆಲವು ದಿನಗಳ ಹಿಂದೆಯೇ ಈ ಬಾರಿ ಹಬ್ಬವನ್ನು ಪರಿಗಣಿಸಿ ಮಾಂಸ ಮಾರಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಕೂಡ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರಕ್ಕೆ ಹಾಗೂ ಬಿಬಿಎಂಪಿ ವಿಶೇಷ ಮನವಿ ಮಾಡಿತ್ತು. ಆದರೆ, ಎಂದಿನಂತೆಯೇ ನಿಯಮ ಜಾರಿಯಾಗಿದೆ.
ಇದಕ್ಕೆ ಮುಂಜಾಗ್ರತೆ ವಹಿಸಿರುವ ಮಾಂಸಹಾರಿಗಳು ದಯವಿಟ್ಟು ಮಹಾಲಯ ಅಮಾವಾಸ್ಯೆಯಂದು ಮಾಂಸ ಖರೀದಿಗೆ ಅನುಮತಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ನಾಗರಾಜು ಅವರು ಅಕ್ಟೋಬರ್ 2ರಂದೇ ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ಪಿತೃಪಕ್ಷ ಹಬ್ಬ ಬಂದಿದೆ. ಹಾಗಾಗಿ ಈ ಬಾರಿ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಪಿತೃಪಕ್ಷದ ಪ್ರಯುಕ್ತ ಬಹುತೇಕರು ಮಾಂಸಾಹಾರ ಸಿದ್ಧಪಡಿಸಿ, ಮನೆಯಲ್ಲಿ ಅಗಲಿದ ಹಿರಿಯರನ್ನು ನೆನೆದು ಎಡೆ ಹಾಕುತ್ತಾರೆ. ಇದನ್ನು ಜನ ಒಂದು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ ಎಂದಿದ್ದರು.
ಪ್ರತಿ ವರ್ಷ ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅವಕಾಶ ಇರಲ್ಲ. ಆದರೆ ಈ ಬಾರಿ ಅದೇ ದಿನ ಹಬ್ಬ ಬಂದಿದೆ. ಸರ್ಕಾರ ಈಗ ನಿಯಮ ಹೇರಿದರೆ, ಪಿತೃಪಕ್ಷ ಆಚರಿಸುವವರಿಗೆ ಭಾರಿ ತೊಂದರೆಯಾಗಲಿದೆ. ನಮ್ಮ ವ್ಯಾಪಾರ ಕೂಡ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಹಬ್ಬದ ದಿನ ಮಾಂಸ ಮಾರಾಟಕ್ಕೆ ಅನುವು ಮಾಡಿಕೊಡಬೇಕು. ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಮನವಿ ಕೂಡ ಮಾಡಿದ್ದೇವೆ. ಆದರೆ ಅಲ್ಲಿಂದ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಒಂದು ವೇಳೆ ಅಂದು ಮಾಂಸ ಮಾರಾಟಕ್ಕೆ ಅವಕಾಶ ನೀಡದಿದ್ದರೆ ಅದನ್ನು ಮೊದಲೇ ತಿಳಿಸಬೇಕು. ಹಬ್ಬ ಆಚರಿಸುವವರು ಮರುದಿನಕ್ಕೆ ಮುಂದೂಡುತ್ತಾರೆ. ಹಬ್ಬವನ್ನು ಆ ದಿನವೇ ಆಚರಿಸಿದರೆ ಒಳ್ಳೆಯದು, ಆದರೆ, ಸರ್ಕಾರದ ಬಿಗಿ ನಿಯಮಗಳಿಂದ ಆಚರಣೆಗಳಿಗೆ ಅಡ್ಡಿಯಾಗಿದೆ. ಜನರ ಭಾವನೆಗಳಿಗೂ ಧಕ್ಕೆಯಾಗಿದೆ ಎಂದು ಹೇಳಿದ್ದರು.
ಮಹಾತ್ಮಾ ಗಾಂಧಿ ಅವರು ಶಾಂತಿ ಪ್ರಿಯರಾದ ಕಾರಣ ಆ ಅವರ ಹುಟ್ಟುಹಬ್ಬವನ್ನು ಅಹಿಂಸ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾಗಿ ಅಕ್ಟೋಬರ್ 2ರಂದು ದೇಶದೆಲ್ಲೆಡೆ ಮಾಂಸ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗುತ್ತದೆ. ಆಯಾ ಸ್ಥಳೀಯ ಆಡಳಿತಗಳು ಈ ಬಗ್ಗೆ ಆದೇಶ ಹೊರಡಿಸುತ್ತವೆ. ಹಾಗಾಗಿ ಅಂದು ಮಾಂಸ ಮಾರಾಟ ಇರುವುದಿಲ್ಲ.












Click it and Unblock the Notifications