ದೇವಾಲಯದ ಸ್ನಾನಘಟ್ಟ ಸಮೀಪ ಸೋಪು, ಶ್ಯಾಂಪು ಮಾರಾಟ ನಿಷೇಧ
ಬೆಂಗಳೂರು, ಮಾರ್ಚ್ 10: ಕರ್ನಾಟಕದ ವಿವಿಧ ದೇವಾಲಯಗಳ ಸ್ನಾನಘಟ್ಟದ ಬಳಿ ಸ್ವಚ್ಛತೆ ಕಾಪಾಡಲು, ನದಿಗಳ ಮಾಲಿನ್ಯ ತಡೆಯಲು ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಈ ಕುರಿತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಆದೇಶವನ್ನು ಹೊರಡಿಸಿದ್ದಾರೆ. ಸಚಿವರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅಪರ ಮುಖ್ಯ ಕಾರ್ಯದರ್ಶಿಯವರು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಇವರಿಗೆ ಸೂಚನೆಯನ್ನು ನೀಡಿದ್ದಾರೆ.
ಸಚಿವರ ಟಿಪ್ಪಣಿ ರಾಜ್ಯದ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ನದಿ ತೀರ, ಕಲ್ಯಾಣಿ ಹಾಗೂ ಸ್ನಾನಘಟ್ಟಗಳಲ್ಲಿ ಭಕ್ತರು ಶ್ಯಾಂಪು, ಸೋಪು ಬಳಸಿ ಸ್ನಾನ ಮಾಡಿ, ಉಳಿದ ಸೋಪಿನ ತುಂಡು ಮತ್ತು ಶ್ಯಾಂಪು ಪ್ಯಾಕೇಟ್‌ಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ ಎಂದು ಹೇಳಿದೆ.

ಇದೆಲ್ಲವೂ ನದಿ, ಕೂಳ, ಸರೋವರ ಸೇರಿ ನದಿಯ ನೀರಿನಲ್ಲೂ ನೊರೆ ಉಕ್ಕುತ್ತಿರುವುದು, ನೀರು ಕಲುಷಿತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಚಿವರ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ನದಿಗಳ ನೀರಿನ ಶುದ್ಧತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ರಾಜ್ಯದ ಎಲ್ಲ ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕೆರೆ, ಕಲ್ಯಾಣಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪು ಇತ್ಯಾದಿ ಮಾರಾಟ ಮಾಡದಂತೆ ನಿರ್ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟಿಪ್ಪಣಿಯಲ್ಲಿ ಸೂಚನೆ ನೀಡಲಾಗಿದೆ.
ಅಲ್ಲದೇ ನದಿ, ಕಲ್ಯಾಣಿ, ಸರೋವರಗಳಲ್ಲಿ ಭಕ್ತರು ತಮ್ಮ ವಸ್ತ್ರಗಳನ್ನು ವಿಸರ್ಜನೆ ಮಾಡದಂತೆ ನಿರ್ಬಂಧಿಸಲು ಸೂಕ್ತ ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಿದೆ ಎಂದು ಟಿಪ್ಪಣಿಯಲ್ಲಿ ಸಚಿವರು ಅಪರ ಮುಖ್ಯ ಕಾರ್ಯದರ್ಶಿಗಳು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಇವರಿಗೆ ಸೂಚನೆ ನೀಡಿದ್ದಾರೆ.
ಧರ್ಮಸ್ಥಳದ ನೇತ್ರಾವತಿಯ ಸ್ನಾನಘಟ್ಟ, ಇತಿಹಾಸ ಪ್ರಸಿದ್ಧ ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ದೇಗುಲದ ಬಳಿ ಇರುವ ಸ್ನಾನಘಟ್ಟ, ಕುಕ್ಕೆ ಸುಬ್ರಮಣ್ಯದ ಸ್ನಾನಘಟ್ಟ, ಕಾವೇರಿ ನದಿ ತೀರದಲ್ಲಿರುವ ಸ್ನಾನಘಟ್ಟ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳ ಸಮೀಪದಲ್ಲಿ ಸ್ನಾನಘಟ್ಟಗಳಿವೆ.
ಹಲವು ಭಕ್ತರು ಸ್ನಾನಘಟ್ಟದಲ್ಲಿ ಸ್ನಾನ ಮಾಡಿದ ಬಳಿಕ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದರೆ ಸ್ನಾನಘಟ್ಟದ ಸ್ವಚ್ಛತೆ ಬಗ್ಗೆ ಯಾರೂ ಸಹ ಗಮನಹರಿಸುತ್ತಿಲ್ಲ. ನದಿ ಸಮೀಪದ ಸ್ನಾನಘಟ್ಟಗಳು ತ್ಯಾಜ್ಯಮಯವಾಗಿದ್ದು ಆಗಾಗ ವಿವಿಧ ಸಂಘಟನೆಗಳು ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತವೆ.
ಸ್ನಾನಘಟ್ಟದ ಬಳಿ ಸೋಪು, ಶ್ಯಾಂಪೂ, ಬಟ್ಟೆ ಇಂತಹ ತ್ಯಾಜ್ಯಗಳೇ ಅಧಿಕವಾಗಿರುತ್ತದೆ. ಇವುಗಳನ್ನು ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದೆ. ಇವುಗಳು ನದಿಯ ನೀರಿನ ಜೊತೆ ಸೇರಿಕೊಂಡು ಮುಂದೆ ಹರಿದು ಹೋಗಿ ನದಿ ಕಲುಷಿತಗೊಳ್ಳುತ್ತದೆ. ಆದ್ದರಿಂದ ಸಚಿವರು ಸೋಪು, ಶ್ಯಾಂಪು ಮಾರಾಟವನ್ನೇ ನಿರ್ಬಂಧಿಸಿ ಆದೇಶ ಹೊರಡಿಸಿಬೇಕು ಎಂದು ಸೂಚನೆ ಕೊಟ್ಟಿದ್ದಾರೆ.
ಆದರೆ ಸಚಿವರ ಸೂಚನೆ ಚರ್ಚೆಗೆ ಕಾರಣವಾಗಿದೆ. ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದ ಬಳಿಯ ವ್ಯಾಪಾರಿಗಳು ಸಚಿವರ ಸೂಚನೆ ವಿರೋಧಿಸಿದ್ದಾರೆ. ಭಕ್ತರು, ಪ್ರವಾಸಿಗರು ಸ್ನಾನ ಮಾಡಿ, ದೇವರ ದರ್ಶನಕ್ಕೆ ಬರುತ್ತಾರೆ. ಅಪರ ಕರ್ಮಗಳನ್ನು ಮಾಡಿದ ಬಳಿಕ ಕಡ್ಡಾಯವಾಗಿ ಸ್ನಾನ ಮಾಡುತ್ತಾರೆ. ಮಾರಾಟ ನಿಷೇಧ ಮಾಡಿ, ವ್ಯಾಪಾರಿಗಳ ಜೀವನಾಧಾರ ಕಿತ್ತುಕೊಳ್ಳಲಾಗುತ್ತಿದೆ. ಇದರ ಬದಲು ಸ್ನಾನಘಟ್ಟದ ಬಳಿ ಕಸ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications