ಬಳ್ಳಾರಿ ಗಲಭೆ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಎಸ್ಪಿ ಪವನ್ ನೆಜ್ಜೂರು ಸಸ್ಪೆಂಡ್
ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ಹೊಸ ವರ್ಷದ ದಿನವೇ ಗಲಭೆ ನಡೆದಿದೆ. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಡುವಿನ ಗಲಾಟೆಯಲ್ಲಿ ಖಾಸಗಿ ಗನ್ ಮ್ಯಾನ್ ಮಾಡಿದ ಫೈರಿಂಗ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ಈ ಘಟನೆ ಸಂಬಂಧ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಲಾಗಿದೆ. ಅಚ್ಚರಿ ಎಂದರೆ ಪವನ್ ನೆಜ್ಜೂರ್ ಅವರು ಗುರುವಾರವೇ ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಒಂದೇ ದಿನಕ್ಕೆ ಸಸ್ಪೆಂಡ್ ಆಗಿದ್ದಾರೆ.
ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಎದುರು ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗುರುವಾರ ರಾತ್ರಿ ಭಾರೀ ಘರ್ಷಣೆ ಸಂಭವಿಸಿತ್ತು. ಈ ವೇಳೆ ಗಲಭೆ ತಾರಕಕ್ಕೇರಿ, ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದರು. ಈ ಸಂಬಂಧ ಬಳ್ಳಾರಿ ನೂತನ ಎಸ್ಪಿ ಪವನ್ ನೆಜ್ಜೂರು ಅವರ ತಲೆದಂಡವಾಗಿದೆ.

ನಿಕಟಪೂರ್ವ ಎಸ್ಪಿಯಾಗಿದ್ದ ಶೋಭಾರಾಣಿ ಅವರಿಂದ ಬಳ್ಳಾರಿ ಎಸ್ಪಿಯಾಗಿ ಪವನ್ ನೆಜ್ಜೂರು ಅಧಿಕಾರ ವಹಿಸಿಕೊಂಡಿದ್ದರು. ಈಗ ಬ್ಯಾನರ್ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಹಿರಿಯ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿದೆ. ಈ ಘಟನೆಗೆ ಕೆಲವೇ ಗಂಟೆಗಳ ಮೊದಲು ಅಧಿಕಾರ ವಹಿಸಿಕೊಂಡ ಅಧಿಕಾರಿಯನ್ನು ಶಿಕ್ಷೆಗೆ ಗುರಿಯಾಗಿದ್ದಾರೆ.
ಗಲಭೆ ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲರಾಗಿದ್ದು, ಘಟನೆಯನ್ನು ಸರಿಯಾಗಿ ನಿಭಾಯಿಸಿಲ್ಲ. ಅಲ್ಲದೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿಲ್ಲ ಎಂದು ಡಿಜಿ-ಐಜಿಪಿ ವರದಿ ನೀಡಿದ್ದು, ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಕ್ರಮ ಕೈಗೊಂಡಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿಯಾಗಿದ್ದ ಆಗಿದ್ದ ಪವನ್ ನೆಜ್ಜೂರು ಅವರನ್ನು ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು. ಅದರಂತೆ ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡು, ಒಂದೇ ದಿನಕ್ಕೆ ನೆಜ್ಜೂರು ಸಸ್ಪೆಂಡ್ ಆಗಿದ್ದಾರೆ.
ಘಟನೆಯ ಹಿನ್ನೆಲೆ ಏನು?
ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬಳ್ಳಾರಿಯಲ್ಲಿ ಬ್ಯಾನರ್ ಹಾಕುವ ಸಂಬಂಧ ಶಾಸಕ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಪೊಲೀಸರು ಗಲಾಟೆಯನ್ನು ಹತೋಟಿಗೆ ತಂದರೂ ದೊಡ್ಡ ಮಟ್ಟದ ಗಲಾಟೆಯಾಗಿ ಒಂದು ಸಾವು ಸಂಭವಿಸಿತ್ತು.
ಬಳ್ಳಾರಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಗೂಂಡಾಗಿರಿ ನಡೆದಿದೆ. ಮಾಜಿ ಸಚಿವರು, ಹಾಲಿ ಶಾಸಕ ಜನಾರ್ದನ್ ರೆಡ್ಡಿ ಅವರ ನಿವಾಸದ ಮುಂಭಾಗದಲ್ಲಿ ಕಾಂಗ್ರೆಸ್ ಶಾಸಕರ ಆಪ್ತರು ದಾಂಧಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಶಾಸಕರ ಆಪ್ತರು ಖಾಸಗಿ ಗನ್‌ಮ್ಯಾನ್‌ಗಳನ್ನು ಬಳಸಿಕೊಂಡು ಗುಂಡು ಹಾರಿಸಿದ್ದಾರೆ. ಕಾಂಗ್ರೆಸ್ಸಿನ ರಾಜಕೀಯ ತೆವಲಿಗೆ ಬಿಜೆಪಿ ನಾಯಕರ, ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಶಾಸಕರನ್ನು ಮುಗಿಸಿ ಬಿಡುತ್ತೇನೆ, ಪ್ರತೀಕಾರ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಾಜಾರೋಷವಾಗಿ ಹೇಳಿಕೆ ನೀಡುತ್ತಿದ್ದಾರೆ. ಅಂದರೆ ಸರ್ಕಾರಿ ಪ್ರಾಯೋಜಕತ್ವದಲ್ಲಿ ಬಿಜೆಪಿ ಶಾಸಕರನ್ನು ಬಲಿಪಡೆಯಲು ಕಾಂಗ್ರೆಸ್ ಸಂಚು ರೂಪಿಸಲಾಗಿದೆಯೇ? ಕಾಂಗ್ರೆಸ್ ಆಡಳಿತದಲ್ಲಿ ಗಂಧದ ನಾಡು ಈಗ ಕಾಂಗ್ರೆಸ್ ಗೂಂಡಾಗಳ ನಾಡಾಗಿ ಬದಲಾಗುತ್ತಿದೆ ಎಂದು ಬಿಜೆಪಿ ಖಂಡಿಸಿದೆ.
ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಗೂಂಡಾ ಧೋರಣೆ ಮತ್ತು ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆಯನ್ನು ಖಂಡಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗವು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ.












Click it and Unblock the Notifications