ಪಂಚಮಸಾಲಿ ಮೀಸಲಾತಿ ಬೇಡಿಕೆಗೆ ಹಿಂದುಳಿದ ಜಾತಿಗಳ ಒಕ್ಕೂಟ ವಿರೋಧ
ಬೆಂಗಳೂರು, ಡಿಸೆಂಬರ್ 22: 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಜನರು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿ ಸುವರ್ಣಸೌಧದ ವರೆಗೂ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವ ಸಾಧ್ಯತೆ ಇದೆ. ರಾಜ್ಯ ವಿಧಾನಸಭೆ ಕಲಾಪದ ಸಂದರ್ಭದಲ್ಲೇ ನಡೆಯುತ್ತಿರುವ ಪಂಚಮಸಾಲಿ ಸಮುದಾಯದ ಪ್ರತಿಭಟನೆ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
#Karnataka State Backward Castes Federation objects to 2A #reservation demand by the #Panchamasali community. The Federation appeals govt not to grant reservation to the Panchamasalis under the 2A category. pic.twitter.com/45GBvxnQK2
— Mahesh Chitnis (@Mahesh_Chitnis) December 22, 2022
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಪಂಚಮಸಾಲಿ ಸಮುದಾಯದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಡಿಸೆಂಬರ್ 26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಸಲು ಮುಂದಾಗಿದೆ. ಇದಕ್ಕೆ ಹಿಂದುಳಿತ ಜಾತಿಗಳಿಗೆ ಸೇರಿದ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದೆ.
ಈ ವಿಚಾರವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, 'ಸಾಮಾಜಿವಾಗಿ, ಆರ್ಥಿಕವಾಗಿ ಹಾಗೂ ಎಲ್ಲ ರೀತಿಯಿಂದಲೂ ಪ್ರಬಲವಾಗಿ ಮುಂದುವರಿದಿರುವ ಯಾವುದೇ ಜಾತಿಯನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದೆಂದು ಸರ್ಕಾರಕ್ಕೆ ತಮ್ಮ ಮುಖಾಂತರ ಮನವಿ ಮಾಡುತ್ತೇವೆ' ಎಂದು ತಿಳಿಸಿದೆ.

ರಾಷ್ಟ್ರದಲ್ಲಿ ಮೀಸಲಾತಿಯನ್ನು ಅವಕಾಶ ವಂಚಿತ ಜಾತಿಗಳಿಗೆ ನೀಡಿ ಸಾಮಾಜಿಕ ಸಮಾನತೆಯನ್ನು ಅಗ್ರಗಣ್ಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಭಾರತದ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಹಾಗೂ ಸಾಮಾಜಿನ ನ್ಯಾಯವನ್ನು ಕೊಡಿಸುವಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಇಂತಹ ರಾಜ್ಯದಲ್ಲಿಂದು ಬಲಾಢ್ಯರು ಮೀಸಲಾತಿ ಪಡೆದು ಶೋಷಿತರ ಪಾಲನ್ನು ಕಬಳಿಸುತ್ತಿರುವುದು ಶೋಚನಿಯ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹೇಳಿದೆ.
ರಾಜ್ಯದಲ್ಲಿ ಅನೇಕ ಬಲಾಡ್ಯ ಜಾತಿಗಳು ಪ್ರವರ್ಗ 1 ಹಾಗೂ ಪ್ರವರ್ಗ 2 ರಲ್ಲಿ ಮೀಸಲಾತಿ ಪಡೆಯುತ್ತಿವೆ. ಇದು ಕಾನೂನು ಬಾಹೀರವಾಗಿದೆ. ಈಗಾಗಲೇ ಪ್ರಬಲ ಜಾತಿಗಳಿಗೆ ಶೇ 9ರಷ್ಟು ಮೀಸಲಾತಿ ಇದೆ. ಹೀಗಿದ್ದರೂ, ಬೇರೆಯವರ ಮೀಸಲಾತಿಗೆ ಕೈಹಾಕುವುದು ಎಷ್ಟು ಸರಿ ಎಂದು ಕೇಳಿದೆ.

ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳು 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿವೆ. ಒಂದು ವೇಳೆ ತಮ್ಮ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸದೇ ಇದ್ದಲ್ಲಿ, ಪ್ರತಿಭಟನೆಗಳನ್ನು ತೀವ್ರಗೊಳಿಸುವುದಾಗಿಯೂ ಸಮುದಾಯಗಳು ಹೇಳಿವೆ. ಆಡಳಿತಾರೂಢ ಬಿಜೆಪಿ ನಾಯಕರಲ್ಲೇ ಈ ಕುರಿತು ಪರ-ವಿರೋಧಗಳಿವೆ. ಪಂಚಮಸಾಲಿ ವರ್ಗದ ಬೇಡಿಕೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications