"ಕೆ.ಎನ್.ರಾಜಣ್ಣ ಬಿಜೆಪಿಗೆ ಬಂದರೆ ಉನ್ನತ ಹುದ್ದೆ ಕೊಡ್ತೀವಿ"
ಕಾಂಗ್ರೆಸ್‌ನ ಪ್ರಭಾವಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ದಿಢೀರ್ ವಜಾ ಮಾಡಲಾಗಿದ್ದು, ರಾಜೀನಾಮೆ ನೀಡಿದ್ದರು. ಸ್ವಪಕ್ಷದ ಬಗ್ಗೆ ವ್ಯಂಗ್ಯವಾದ ಹೇಳಿಕೆ ನೀಡಿದ್ದಕ್ಕೆ ರಾಜಣ್ಣ ಅವರ ಮೇಲೆ ಹೈಕಮಾಂಡ್ ಈ ಕ್ರಮ ತೆಗೆದುಕೊಂಡಿದೆ. ರಾಜೀನಾಮೆ ಬೆನ್ನಲ್ಲೇ ರಾಜಣ್ಣ ಅವರು ಬಿಜೆಪಿಗೆ ಹೋಗ್ತಾರೆ ಎಂಬ ಚರ್ಚೆಯೂ ಜೋರಾಗಿತ್ತು. ಇದರ ನಡುವೆ ಕೆ.ಎನ್.ರಾಜಣ್ಣ ಅವರಿಗೆ ಬಿಜೆಪಿಯಿಂದಲೇ ದೊಡ್ಡ ಆಫರ್ ಬಂದಿದೆ. ರಾಜಣ್ಣ ಅವರು ಬಿಜೆಪಿಗೆ ಬಂದರೆ ಉನ್ನತ ಹುದ್ದೆ, ಸ್ಥಾನಮಾನ ನೀಡುವುದಾಗಿ ಪ್ರಭಾವಿ ಬಿಜೆಪಿ ನಾಯಕ ಆಹ್ವಾನ ನೀಡಿದ್ದಾರೆ.
ತುಮಕೂರು ಭಾಗದ ಪ್ರಭಾವಿ ಶಾಸಕರೂ ಆಗಿರುವ ಕೆಎನ್.ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರು ಆಪ್ತಬಳಗದಲ್ಲಿರುವ ನಾಯಕ. ಆದರೆ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪದ ಬಗ್ಗೆ ರಾಜಣ್ಣ ನೀಡಿದ್ದ ಹೇಳಿಕೆಯೇ ಅವರಿಗೆ ಮುಳುವಾಗಿ ಪರಿಣಮಿಸಿತು. ಸ್ವಪಕ್ಷದ ವಿರುದ್ಧ ಮಾತನಾಡಿದ ಕಾರಣಕ್ಕೆ ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಸಂಪುಟದಿಂದ ಕೈಬಿಡುವ ಅನಿವಾರ್ಯತೆ ಸೃಷ್ಟಿಯಾಯ್ತು ಎಂದು ಸಿಎಂ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ರಾಜಣ್ಣ ಕೂಡ ಹೈಕಮಾಂಡ್ ನಾಯಕರ ಮನವೊಲಿಸಿ, ಮತ್ತೆ ಸಚಿವ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ. ಈ ಹೊತ್ತಲ್ಲೇ ಬಿಜೆಪಿಯಿಂದ ಅವರಿಗೆ ಆಹ್ವಾನ ಬಂದಿದೆ.

́'ಕೆ.ಎನ್.ರಾಜಣ್ಣ ಅವರು ಜಾತ್ಯತೀತವಾಗಿ ನಮ್ಮ ಸಮುದಾಯದ ನಾಯಕರು. ರಾಜಣ್ಣ ಅವರಿಂದ ರಾಜೀನಾಮೆ ಪಡೆದಿರುವುದನ್ನು ನಾವು ಖಂಡಿಸುತ್ತೇವೆ. ಇಡೀ ಸಮಾಜ ರಾಜಣ್ಣನವರ ಜೊತೆ ನಿಲ್ಲುತ್ತೆ. ನಮ್ಮ ಸಮುದಾಯಕ್ಕೆ ನಿರಂತರವಾಗಿ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ. ರಾಜಣ್ಣನವರೇ..ನೀವು ಹೆದರಬೇಡಿ. ನಿಮ್ಮೊಂದಿಗೆ ನಮ್ಮ ನಾಯಕರೆಲ್ಲರೂ ಇದ್ದಾರೆ. ದಯವಿಟ್ಟು ನೀವು ಬಿಜೆಪಿಗೆ ಬನ್ನಿ' ಎಂದು ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದ್ದಾರೆ.
'ನಿಮ್ಮ ಮಗನೊಂದಿಗೆ ಬಿಜೆಪಿಗೆ ಬನ್ನಿ'
'ಪಕ್ಷಾತೀತವಾಗಿ ಅವರೊಂದಿಗೆ ನಿಲ್ತೇವೆ. ರಾಜಣ್ಣನವರು ಯಾವುದೇ ತಪ್ಪು ಮಾಡಿಲ್ಲ. ಸತ್ಯವನ್ನ ಹೇಳಿದ್ದಕ್ಕೆ ಅವರು ರಾಜಣ್ಣನ ವಜಾ ಮಾಡಿದ್ದಾರೆ. ರಾಜಣ್ಣನವರೇ, ನೀವು ನಿಮ್ಮ ಮಗನೊಂದಿಗೆ ಬಿಜೆಪಿ ಪಕ್ಷಕ್ಕೆ ಬನ್ನಿ. ಪಕ್ಷದಲ್ಲಿ ನಮಗೆಲ್ಲ ಯಾವ ಗೌರವ ಸಿಗುತ್ತಿದೆಯೋ ಅದಕ್ಕಿಂತಲೂ ದೊಡ್ಡ ಸ್ಥಾನಮಾನವನ್ನ ನಿಮಗೆ ಕೊಡಿಸುತ್ತೇವೆ. ನಿಮ್ಮನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ' ಎಂದು ಶ್ರೀರಾಮುಲು ಆಹ್ವಾನ ನೀಡಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ "ಇದ್ದಿದ್ದು ಇದ್ದಂಗೆ ಹೇಳಿ" ಕಾಂಗ್ರೆಸ್ ದೋಷಗಳಿಗೆ ಕನ್ನಡಿ ಹಿಡಿದ ಕೆ.ಎನ್.ರಾಜಣ್ಣ ಅವರ ತಲೆದಂಡವಾಗಿದ್ದು, ಮುಖ್ಯಮಂತ್ರಿಗಳ ಬಲಗೈ ಭಂಟರಾಗಿ ಕಾಂಗ್ರೆಸ್ ಪಕ್ಷದ ವೈಫಲ್ಯಗಳು ಹಾಗೂ ಆಂತರಿಕ ದಬ್ಬಾಳಿಕೆಗಳನ್ನು ನಿಷ್ಟೂರವಾಗಿ ಬಿಚ್ಚಿಡುತ್ತಿದ್ದ ರಾಜಣ್ಣ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದರು ಎಂದು ಬಿವೈ ವಿಜಯೇಂದ್ರ ಕೂಡ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಎಡಬಿಡಂಗಿ ನಡೆಯನ್ನ ಎತ್ತಿ ತೋರಿಸಿದ ಪರಿಶಿಷ್ಟ ಪಂಗಡ ಹಾಗೂ ಶೋಷಿತ ಸಮುದಾಯಗಳ ಪರವಾಗಿ ಧ್ವನಿಯಾಗಿದ್ದ ಕೆ.ಎನ್.ರಾಜಣ್ಣನವರು ಸಚಿವ ಸ್ಥಾನದಿಂದ ಉಚ್ಚಾಟಿತಗೊಂಡಿರುವುದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸಂಸ್ಕೃತಿ ಇನ್ನೂ ತೊಲಗಿಲ್ಲ ಎನ್ನುವುದಕ್ಕೆ ಸಾಕ್ಷಿ. ಪರಿಶಿಷ್ಟ ಸಮುದಾಯದ ನಾಯಕರ ನಾಯಕತ್ವವನ್ನು ದಮನ ಮಾಡುವ ದಬ್ಬಾಳಿಕೆ ಇನ್ನೂ ನಿಂತಿಲ್ಲ ಎನ್ನುವುದಕ್ಕೂ ನಿದರ್ಶನ ಎಂದು ವಿಜಯೇಂದ್ರ ಖಂಡಿಸಿದ್ದರು. ಇದೀಗ ಬಿಜೆಪಿ ಸೇರಿಕೊಳ್ಳುವಂತೆ ರಾಜಣ್ಣಗೆ ಆಹ್ವಾನ ಬಂದಿದ್ದು, ಮುಂದಿನ ನಡೆ ಏನು ಎನ್ನುವುದೇ ರಾಜ್ಯ ರಾಜಕಾರಣದ ಕುತೂಹಲದ ವಿಷಯವಾಗಿದೆ.












Click it and Unblock the Notifications