ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ: ಜಿ.ಪರಮೇಶ್ವರ್ ಭೇಟಿಯಾದ ಯುವ ಕರ್ನಾಟಕ ವೇದಿಕೆ
ಬೆಂಗಳೂರು: ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದಿರುವ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಕನ್ನಡಿಗ ಭಕ್ತರು ಹಾಗೂ ಟಿಟಿ ವಾಹನ ಚಾಲಕರ ಮೇಲೆ ನಡೆದ ಹಲ್ಲೆ ಘಟನೆಗಳನ್ನು ತೀವ್ರವಾಗಿ ಖಂಡಿಸಿ ಯುವ ಕರ್ನಾಟಕ ವೇದಿಕೆ ವತಿಯಿಂದ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು.
ಶಬರಿಮಲೆ ಯಾತ್ರೆ ಪವಿತ್ರ ಧಾರ್ಮಿಕ ಯಾತ್ರೆಯಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಶಾಂತಿಯುತವಾಗಿ ಯಾತ್ರೆ ಕೈಗೊಳ್ಳುತ್ತಾರೆ. ಇಂತಹ ಸಂದರ್ಭದಲ್ಲೇ ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಕನ್ನಡಿಗ ಭಕ್ತರು ಹಾಗೂ ವಾಹನ ಚಾಲಕರ ಮೇಲೆ ನಡೆದ ದೌರ್ಜನ್ಯಗಳು ಗಂಭೀರ ಆತಂಕಕ್ಕೆ ಕಾರಣವಾಗಿವೆ ಎಂದು ಯುವ ಕರ್ನಾಟಕ ವೇದಿಕೆ ಸ್ಪಷ್ಟಪಡಿಸಿದೆ. ಈ ರೀತಿಯ ಘಟನೆಗಳು ರಾಜ್ಯಾಂತರ ಸೌಹಾರ್ದತೆ ಹಾಗೂ ಭಕ್ತರ ಭದ್ರತೆಯನ್ನು ಹಾಳು ಮಾಡುವಂತದ್ದಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಯುವ ಕರ್ನಾಟಕ ವೇದಿಕೆ ಪ್ರತಿನಿಧಿಗಳು, ತಕ್ಷಣವೇ ತಮಿಳುನಾಡು ಸರ್ಕಾರ ಹಾಗೂ ಅಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರನ್ನು ಮನವಿ ಮಾಡಿಕೊಂಡರು. ಜೊತೆಗೆ, ಶಬರಿಮಲೆ ಯಾತ್ರೆಯ ಅವಧಿಯಲ್ಲಿ ತಮಿಳುನಾಡಿನೊಳಗೆ ಸಂಚರಿಸುವ ಕನ್ನಡಿಗ ಭಕ್ತರು, ವಾಹನ ಚಾಲಕರು ಮತ್ತು ಪ್ರವಾಸಿಗರಿಗೆ ಸಮರ್ಪಕ ಪೊಲೀಸ್ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದರು.
ಈ ವೇಳೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ರಾಜ್ಯಾಂತರ ಪ್ರಯಾಣಿಸುವ ಕನ್ನಡಿಗರ ಸುರಕ್ಷತೆಗೆ ವಿಶೇಷ ಮಾರ್ಗಸೂಚಿ ಜಾರಿಗೊಳಿಸುವ ಅಗತ್ಯವಿದೆ ಎಂದು ಯುವ ಕರ್ನಾಟಕ ವೇದಿಕೆ ಹೇಳಿದೆ. ಮನವಿಯನ್ನು ಸ್ವೀಕರಿಸಿದ ಮಾನ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ವಿಚಾರ ಗಂಭೀರವಾದುದಾಗಿ ತಿಳಿಸಿ, ಕನ್ನಡಿಗರ ಸುರಕ್ಷತೆ ಮತ್ತು ಹಿತ ಕಾಯಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಯುವ ಕರ್ನಾಟಕ ವೇದಿಕೆಯು ರಾಜ್ಯದ ಹಿತ ಮತ್ತು ಕನ್ನಡಿಗರ ಗೌರವಕ್ಕಾಗಿ ಸದಾ ಹೋರಾಟ ನಡೆಸುತ್ತಿದ್ದು, ಇಂತಹ ಅನ್ಯಾಯಗಳ ವಿರುದ್ಧ ತನ್ನ ಹೋರಾಟ ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಏನಿದು ಘಟನೆ?
ಇತ್ತೀಚೆಗೆ ಶಬರಿಮಲೆಗೆ ತೆರಳುತ್ತಿದ್ದ ಕನ್ನಡಿಗರ ವಾಹನದಲ್ಲಿದ್ದ ಕನ್ನಡ ಬಾವುಟವನ್ನು ತೆಗೆಯುವಂತೆ ತಮಿಳುನಾಡಿನಲ್ಲಿ ಪುಂಡರು ಆಗ್ರಹಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ನಾನು ಖಂಡಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ತಮಿಳಿಗರು ಮತ್ತು ಕನ್ನಡಿಗರು ಕರ್ನಾಟಕದಲ್ಲಿ ಸೋದರ ಭಾವದಿಂದ ಬಾಳುತ್ತಿರುವಾಗ, ತಮಿಳುನಾಡಿನಲ್ಲಿ ಪುಂಡರು ಕನ್ನಡಿಗ ಪ್ರಯಾಣಿಕರನ್ನು ಗುರಿಯಾಗಿಸಿ ಹಲ್ಲೆ ನಡೆಸುವುದು, ಕನ್ನಡಿಗರ ಅಸ್ಮಿತೆಯಾದ ಕೆಂಪು ಹಳದಿ ಬಾವುಟವನ್ನು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದರು.
ತಮಿಳುನಾಡಿನ ಚುನಾವಣೆ ಸನಿಹದಲ್ಲಿರುವಾಗ ಇಂತಹ ಪ್ರಾದೇಶಿಕ ದ್ವೇಷವನ್ನೂ ಅಸ್ತ್ರವಾಗಿಸಿಕೊಳ್ಳುವ ಹುನ್ನಾರ ಇದರಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ತಮಿಳುನಾಡು ಮುಖ್ಯಮಂತ್ರಿಗಳಿಗೆ ಘಟನೆಯ ಕುರಿತು ಕ್ರಮ ಕೈಗೊಳ್ಳುವಂತೆ, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಆಗ್ರಹಿಸಬೇಕು ಎಂದಿದ್ದರು.












Click it and Unblock the Notifications