ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಅಧಿವೇಶನ: ಒಂದು ರಾಷ್ಟ್ರ-ಒಂದು ಚುನಾವಣೆ ಚರ್ಚೆಗೆ ಬಲಿಯಾದ ಮೊದಲ ದಿನದ ಕಲಾಪ!

|
Google Oneindia Kannada News

ಬೆಂಗಳೂರು, ಮಾ. 04: ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪ್ರತಿಭಟನೆಯೊಂದಿಗೆ ಆರಂಭವಾದ ರಾಜ್ಯ ಬಜೆಟ್ ಅಧಿವೇಶನ, ಬೆಳಗ್ಗೆ 11ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆಯೆ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು, ಪ್ರತಿಭಟನೆ ಸಂದರ್ಭದಲ್ಲಿ ಶರ್ಟ್ ಬಿಚ್ಚಿದ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್, ಹೀಗಾಗಿ ಶಾಸಕ ಸಂಗಮೇಶ್ ಅವರನ್ನು ಒಂದು ವಾರ ವಿಧಾನಸಭೆಗೆ ಬರದಂತೆ ಅಮಾನತುಗಳಿಸಿದ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ.

Recommended Video

10 ದಿನ ಸದನದಿಂದ ಬ್ಯಾನ್ ಮಾಡಿದ್ದು ಯಾಕೆ ?? | Bhadravati | Oneinda Kannada

ನಂತರ ಮತ್ತೆ ಸದನದಲ್ಲಿ ಗದ್ದಲ, ಮತ್ತೆ ಕಲಾಪ ಮುಂದೂಡಿಕೆ. ಮುಂದೂಡಿದ್ದ ಸದನ ಮತ್ತೆ ಸೇರಿದಾಗ ಶಾಸಕ ಸಂಗಮೇಶ್ ಅಮಾನತು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಧರಣಿ ಆರಂಭಿಸಿದ ಕಾಂಗ್ರೆಸ್ ಸದಸ್ಯರು. ಸತತ ಧರಣಿಯ ಬಳಿಕ ನಾಳೆಗೆ ವಿಧಾನಸಭೆ ಕಲಾಪ ಮುಂದೂಡಿದ ವಿಧಾನ ಸಭಾಧ್ಯಕ್ಷರು.

ಈ ಮಧ್ಯೆ ತಮ್ಮದೇ ವಾದವನ್ನು ಮಂಡಿಸಿದ ಸಿಎಂ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಇವು ಇಂದಿನ ವಿಧಾನಸಭೆಯಲ್ಲಿ ಕಂಡು ಬಂದ ದೃಶ್ಯಗಳು.

ಅಷ್ಟಕ್ಕೂ ವಿಧಾನಸಭೆಯ ಮೊದಲ ದಿನದ ಕಲಾಪ ಬಲಿಯಾಗಲು ಕಾರಣವಾದ ವಿಚಾರ ಯಾವುದು? ಕಾಂಗ್ರೆಸ್ ಸದಸ್ಯರು ಚರ್ಚೆಯೆ ಬೇಡ ಎಂದು ವಿರೋಧಿಸಿದ್ದು ಯಾಕೆ? ಸದನದಲ್ಲಿ ಯಡಿಯೂರಪ್ಪ-ಸಿದ್ದರಾಮಯ್ಯ ಅವರ ಮಧ್ಯದ ವಾಗ್ಯುದ್ಧ ಹೇಗಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ!

ಇದು ಆರ್‌ಎಸ್‌ಎಸ್‌ ಅಜೆಂಡಾ ಎಂದ ಕಾಂಗ್ರೆಸ್

ಇದು ಆರ್‌ಎಸ್‌ಎಸ್‌ ಅಜೆಂಡಾ ಎಂದ ಕಾಂಗ್ರೆಸ್

ರಾಜ್ಯ ಬಜೆಟ್ ಅಧಿವೇಶನ ಇಂದು ಬೆಳಗ್ಗೆ 11ಕ್ಕೆ ಆರಂಭವಾಯಿತು. ಮಾರ್ಚ್‌ 31ರ ವರೆಗೆ ನಡೆಯಲಿರುವ ಅಧಿವೇಶನದ ಮೊದಲ ಎರಡು ದಿನಗಳನ್ನು 'ಒಂದು ರಾಷ್ಟ್ರ-ಒಂದು ಚುನಾವಣೆ' ಕುರಿತು ಚರ್ಚೆ ಮಾಡಲು ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಅಜೆಂಡಾ ನಿಗದಿ ಮಾಡಿದ್ದರು.

ಆದರೆ ಕಲಾಪ ಆರಂಭವಾಗುತ್ತಿದ್ದಂತೆಯೆ ಒಂದು ರಾಷ್ಟ್ರ-ಒಂದು ಚುನಾವಣೆ ಆರ್‌ಎಸ್‌ಎಸ್‌ ಅಜೆಂಡಾ, ಅದಕ್ಕೆ ನಮ್ಮ ವಿರೋಧವಿದೆ. ಚರ್ಚೆ ಮಾಡಲು ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಬಿಟ್ಟು ರಾ‍ಷ್ಟ್ರಕ್ಕೊಂದೇ ಚುನಾವಣೆ ಎಂಬ ವಿಷಯದ ಮೇಲೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರು ವಿರೋಧಿಸಿದರು.

ಚರ್ಚೆ ನಡೆಯಲೇ ಬೇಕು ಎಂದ ಯಡಿಯೂರಪ್ಪ

ಚರ್ಚೆ ನಡೆಯಲೇ ಬೇಕು ಎಂದ ಯಡಿಯೂರಪ್ಪ

ಆಗ, ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಚರ್ಚೆಗೆ ನಮ್ಮ ಸಹಮತವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದೇ ಚುನಾವಣೆ ವ್ಯವಸ್ಥೆ ಜಾರಿಯಾಗಬೇಕಿದೆ. ಸದ್ಯ ಬಹಳಷ್ಟು ಚುನಾವಣೆಗಳು ನಡೆಯುವುದರಿಂದ ಸಮಸ್ಯೆ ಆಗುತ್ತಿದೆ. ಒಂದೇ ಚುನಾವಣೆ ಇದ್ದರೆ ಎಲ್ಲರಿಗೂ ಸಹಾಯಕವಾಗುತ್ತದೆ. ಹೀಗಾಗಿ ಈ ವಿಷಯದ ಮೇಲೆ ಚರ್ಚೆ ಅತ್ಯವಶ್ಯಕವಾಗಿದೆ. ಚರ್ಚೆಗೆ ನೀವು ಅವಕಾಶ ಮಾಡಿಕೊಡಿ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಮನವಿ ಮಾಡಿಕೊಂಡರು.

ಆ ಸಂದರ್ಭದಲ್ಲಿ ಮಧ್ಯೆ ಪ್ರವೇಶ ಮಾಡಿದ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಕಾಂಗ್ರೆಸ್ ಸದಸ್ಯರ ಪ್ರತಿಭಟನೆಗೆ ಬೇಸರ ವ್ಯಕ್ತಪಡಿಸಿದರು. ಈ ವಿಷಯದ ಚರ್ಚೆ ಅಗತ್ಯವಿದೆ. ನೀವು ಇಂತಹ ಉದ್ಧಟತನ ತೋರಬಾರದು. ಪ್ರತಿಪಕ್ಷವಾಗಿ ಸರಿಯಾಗಿ ನಡೆದುಕೊಳ್ಳಿ ಎಂದು ಕಾಂಗ್ರೆಸ್ ಸದಸ್ಯರಿಗೆ ಸೂಚಿಸಿದರು.

ಅಂಗಿ ಬಿಚ್ಚಿದ ಭದ್ರಾವತಿ ಶಾಸಕ ಸಂಗಮೇಶ್

ಅಂಗಿ ಬಿಚ್ಚಿದ ಭದ್ರಾವತಿ ಶಾಸಕ ಸಂಗಮೇಶ್

ಹೀಗೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾಗ ಭದ್ರಾವತಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರು ಶರ್ಟ್ ಬಿಚ್ಚಿ ಸಭಾಧ್ಯಕ್ಷರ ಗಮನ ಸೆಳೆಯಲು ಪ್ರಯತ್ನಿಸಿದರು. ಸದನದಲ್ಲಿದ್ದುಕೊಂಡು ಹೀಗೆ ವರ್ತನೆ ಮಾಡಿದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗರಂ ಆಗಲು ಕಾರಣವಾಯ್ತು. ಹೀಗಾಗಿ ತಕ್ಷಣವೇ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.

ಮತ್ತೆ ಸದನ ಸೇರಿದಾಗ ಶಾಸಕ ಸಂಗಮೇಶ್ ಅವರನ್ನು ಒಂದು ವಾರದ ವಿಧಾನಸಭೆ ಕಲಾಪಕ್ಕೆ ಬರದಂತೆ ಅಮಾನತುಗೊಳಿಸಲಾಗಿದೆ ಎಂದು ಸ್ಪೀಕರ್ ಪ್ರಕಟಿಸಿದರು. ಅದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಮತ್ತೆ ಧರಣಿ ಆರಂಭಿಸಿದರು. ಸಂಗಮೇಶ್ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದು ಅವರು ಕಲಾಪದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಸದ್ಯರು ಆಗ್ರಹಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಪ್ರವೇಶ

ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಪ್ರವೇಶ

ಕಾಂಗ್ರೆಸ್ ಶಾಸಕ ಸಂಗಮೇಶ್ ಅಮಾನತು ಹಾಗೂ ಒಂದು ರಾಷ್ಟ್ರ-ಒಂದು ಚುನಾವಣೆ ಚರ್ಚೆ ಕುರಿತು ಸಿದ್ದರಾಮಯ್ಯ ಮಾತನಾಡಿದರು. ಒಂದು ರಾಷ್ಟ್ರ-ಒಂದು ಚುನಾವಣೆ ಚರ್ಚೆಯನ್ನು ಯಾವ ನಿಯಮದಡಿ ಚರ್ಚೆಗೆ ತಂದಿದ್ದೀರಿ? ಈ ಪ್ರಶ್ನೆಯನ್ನು ನಾನು ಕೇಳಿದ್ದೇನೆ. ನಿಮ್ಮ ಈ ಚರ್ಚೆ ಎಲ್ಲದಕ್ಕೂ ಅನ್ವಯವಾಗುತ್ತಾ? ಜಿಲ್ಲೆ, ತಾಲೂಕು‌ ಪಂಚಾಯಿತಿ ಚುನಾವಣೆಗಳು ಬರುತ್ತಿವೆ. ಅದಕ್ಕೂ ನಿಮ್ಮ ಈ ಒಂದೇ ಚುನಾವಣೆ ಅನ್ವಯವಾಗುತ್ತದೆಯಾ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಚರ್ಚೆ ಮಾಡದೇ ಅಮಾನತು ಮಾಡಿದ್ದು ಹೇಗೆ?

ಚರ್ಚೆ ಮಾಡದೇ ಅಮಾನತು ಮಾಡಿದ್ದು ಹೇಗೆ?

ಜೊತೆಗೆ ಹೆಚ್.ಕೆ. ಪಾಟೀಲ್ ಅವರು ಪಾಯಿಂಟ್ ಆಫ್ ಆರ್ಡರ್ ಎತ್ತಿದ್ದಾರೆ. ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕು. ಆದರೆ ನೀವು ಏಕಾಏಕಿ ಪ್ರಸ್ತಾವನೆ ಓದಲು ಆರಂಭಿಸಿದ್ರೆ ಏನು ಮಾಡಬೇಕು? ಅದೇ ವೇಳೆ ಸಂಗಮೇಶ್ ಧರಣಿ ಮಾಡಿದರು ಎಂದು ಸಂಗಮೇಶ್ ಯಾಕೆ ಶರ್ಟ್ ಬಿಚ್ಚಿದ್ದರು ಎಂಬುದನ್ನು ಸಿದ್ದರಾಮಯ್ಯ ಸದನಕ್ಕೆ ವಿವರಿಸಿದರು.

ಭದ್ರಾವತಿಯಲ್ಲಿ ಅವರ ಮನೆಯಲ್ಲಿ ಏಳು ಜನರ ಮೇಲೆ 307 ಪ್ರಕರಣ ದಾಖಲು ಮಾಡಿದ್ದಾರೆ. ಅವರಿಗೆ ಅದು ಅನ್ಯಾಯವಾಗಿದೆ. ಅದನ್ನು ಪ್ರಸ್ತಾಪಿಸಲು ಇಲ್ಲಿ ಹಾಗೆ ಮಾಡಿದ್ದಾರೆ ಎಂದು ಸಂಗಮೇಶ್ ಪರವಾಗಿ ಸಿದ್ದರಾಮಯ್ಯ ಅವರು ಮಾತನಾಡಿದರು. ಸಂಗಮೇಶ್‌ರನ್ನು ಏಕಾಏಕಿ‌ ಅಮಾನತು ಮಾಡಿದ್ದು ಸರಿಯೇ? ಪ್ರಜಾಪ್ರಭುತ್ವದಲ್ಲಿ ಚರ್ಚೆಗೆ ಅವಕಾಶವಿದೆ. ಚರ್ಚೆಯ ನಂತರ ನೀವು ಕ್ರಮಕೈಗೊಳ್ಳಬಹುದು. ಆದರೆ ಅದಕ್ಕೂ ಮೊದಲೇ ನೀವು ಅಮಾನತು ನಿರ್ಧಾರ ತೆಗೆದುಕೊಂಡರೆ ಹೇಗೆ? ಎಂದು ಸ್ಪೀಕರ್ ಕಾಗೇರಿ ಅವರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಅಮಾನತು ಮೇಲೆ ಚರ್ಚೆಗೆ ಅವಕಾಶ ಕೊಡಿ

ಅಮಾನತು ಮೇಲೆ ಚರ್ಚೆಗೆ ಅವಕಾಶ ಕೊಡಿ

ಜೊತೆಗೆ ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ಸಂಗಮೇಶ್ ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಅಮಾನತು ಮಾಡಿದ್ದನ್ನು ನಾವು ಸಹಿಸಿಕೊಳ್ಳಬೇಕಾ? ನಮ್ಮೆಲ್ಲರನ್ನೂ ಅಮಾನತು ಮಾಡಿ ಎಂದು ಸಿದ್ದರಾಮಯ್ಯ ಸದನದಲ್ಲಿ ಗುಡುಗಿದರು. ಇದು ಹಿಟ್ಲರ್ ಆಡಳಿತವಲ್ಲ. ನಿಯಮ ಬಾಹಿರವಾಗಿ ಅಮಾನತು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆಯೆ, ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಹಾಕಲು ಶುರು ಮಾಡಿದರು. ಹೀಗಾಗಿ ವಿಧಾನಸಭೆ ಕಲಾಪದಲ್ಲಿ ಮತ್ತೆ ಗದ್ದಲ, ಕೋಲಾಹಲ ಉಂಟಾಯಿತು.

ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಮುಂದುವರಿಯಿತು. ಹೀಗಾಗಿ ಕಲಾಪವನ್ನು ಸಂಜೆ 4.30ಕ್ಕೆ ಮುಂದೂಡಿ ಸ್ಪೀಕರ್ ಕಾಗೇರಿ ಆದೇಶ ಮಾಡಿದರು.

ನಾಳೆಗೆ ವಿಧಾನಸಭೆ ಕಲಾಪ ಮುಂದೂಡಿಕೆ

ನಾಳೆಗೆ ವಿಧಾನಸಭೆ ಕಲಾಪ ಮುಂದೂಡಿಕೆ

ಸಂಜೆ ಮತ್ತೆ ಸದನ ಸಮಾವೇಶಗೊಂಡಾಗ ಕಾಂಗ್ರೆಸ್ ಸದಸ್ಯರು ಮತ್ತೆ ಸದನದ ಬಾವಿಗಿಳಿದು ಪ್ರತಿಭಟನೆಯನ್ನು ಮುಂದುವರೆಸಿದರು. ಆಗ ಮಧ್ಯೆ ಪ್ರವೇಶ ಮಾಡಿದ ಸಿಎಂ ಯಡಿಯೂರಪ್ಪ ಅವರು, ಸ್ಪೀಕರ್‌ಗೆ ಮಾತನಾಡಲು ಅಧಿಕಾರವಿಲ್ಲವಾ? ಅಮಾನತು ಮಾಡಿ ಆದೇಶ ಮಾಡುವುದಕ್ಕೆ ಸಭಾಧ್ಯಕ್ಷರಿಗೆ ಅಧಿಕಾರ ಇಲ್ಲವಾ? ಎಂದು ಗರಂ ಆಗಿಯೇ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಆಗ ಮಧ್ಯೆ ಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ ಅವರು, ಶಾಸಕ ಸಂಗಮೇಶ್ ಅವರ ಬೆಂಬಲಕ್ಕೆ ನಿಲ್ಲಬೇಡಿ. ಸದನದಲ್ಲಿ ಅವರು ಅಶಿಸ್ತನ್ನು ಮೂಡಿಸಿದ್ದಾರೆ, ಅವರನ್ನು ಬೆಂಬಲಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರಲ್ಲಿ ಕಾಗೇರಿ ಮನವಿ ಮಾಡಿಕೊಂಡರು. ಆದರೆ ಒಂದು ರಾಷ್ಟ್ರ-ಒಂದು ಚುನಾವಣೆ ಆರ್‌ಎಸ್‌ಎಸ್‌ ಅಜೆಂಡಾ. ಅದನ್ನು ಸದನದಲ್ಲಿ ಏಕೆ ಚರ್ಚೆ ಮಾಡುತ್ತೀರಿ ಎಂದು ಕಾಂಗ್ರೆಸ್ ಸದಸ್ಯರು ಮತ್ತೆ ಘೋಷಣೆ ಹಾಕುವುದನ್ನು ಮುಂದುವರೆಸಿದರು. ಕೊನೆಗೆ ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಮಾಡಿದರು.

English summary
Assembly session adjourned tomorrow (Mar 5) after the dharma by Congress members in the House opposing a debate on the theme “one nation-one poll" initiated by the Speaker Kageri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X