Sonia Gandhi: ಕರ್ನಾಟಕದಲ್ಲಿ ಮೇ 6ಕ್ಕೆ ಸೋನಿಯಾ ಗಾಂಧಿ ಪ್ರಚಾರ
ಹುಬ್ಬಳ್ಳಿ, ಮೇ 4: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷವು ಯಾವುದೇ ಸೀಟುಗಳನ್ನು ಬಿಟ್ಟುಬಿಡಲು ಬಯಸುವುದಿಲ್ಲ ಎಂದು ಪ್ರಚಾರದ ಯೋಜನೆಯಲ್ಲಿ ಸೋನಿಯಾ ಅವರನ್ನು ಕರೆತರಲಾಗುತ್ತಿದೆ. ಇದುವರೆಗೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಏಪ್ರಿಲ್ 16 ರಿಂದ ರಾಜ್ಯಾದ್ಯಂತ ಸುಮಾರು 60 ರ ರ‍್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸೋನಿಯಾ ಅವರನ್ನು ಪ್ರಚಾರದ ಕಣಕ್ಕಿಳಿಸುತ್ತಿದ್ದು, ಈ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪಕ್ಷ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರು ಮೇ 6ರಂದು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ಸೋನಿಯಾ ಗಾಂಧಿ ಅವರು ವಿಧಾನಸಭಾ ಚುನಾವಣೆ ಪ್ರಚಾರ ಆರಂಭವಾದಗಿನಿಂದ ಇದೇ ಮೊದಲ ಬಾರಿಗೆ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಶನಿವಾರ ಬೆಳಗ್ಗೆ ದೆಹಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಅವರು ಹುಬ್ಬಳ್ಳಿಯಲ್ಲಿ ಪಕ್ಷ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಬಳಿಕ ಸಂಜೆ ದೆಹಲಿಗೆ ಹಿಂದಿರುಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ವಿಷಸರ್ಪ ಎಂದಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಹೇಳಿದ್ದರು. ಇದು ವಿವಾದವಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ, ಸೋನಿಯಾ ಗಾಂಧಿ ಚೀನಾ ಮತ್ತು ಪಾಕಿಸ್ತಾನದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಇದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ರಾಜಕೀಯ ಭಾಷಣದ ಘನತೆ ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ಚುನಾವಣಾ ಆಯೊಗವು ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.












Click it and Unblock the Notifications