ಚಿನ್ನಸ್ವಾಮಿ ಸ್ಟೇಡಿಯಂ ದುರಂತ: ತುರ್ತು ಅಧಿವೇಶನ ಕರೆಯುವಂತೆ ಅಶೋಕ್ ಆಗ್ರಹ
ಐಪಿಎಲ್ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ವಿಪಕ್ಷಗಳು ಆರೋಪ ಮಾಡಿದ್ದವು. ಜೊತೆಗೆ ಇದರ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕು ಎಂದೂ ಆಗ್ರಹಿಸಿದ್ದರು. ಇದೀಗ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಆಗ್ರಹಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಐಪಿಎಲ್ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯಬೇಕು ಎಂದು ಅಶೋಕ್ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ. ಕಾಲ್ತುಳಿತ ಘಟನೆಯಲ್ಲಿ 11 ಮಂದಿಯ ದುರದೃಷ್ಟಕರ ಸಾವು ಹಾಗೂ ಎಪ್ಪತ್ತೈದು ಮಂದಿ ಗಾಯಗೊಂಡಿರುವ ಘಟನೆಯು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ದುರ್ಘಟನೆಯು ಸಾರ್ವಜನಿಕ ಸುರಕ್ಷತೆ, ಗುಂಪು ನಿಯಂತ್ರಣ ಹಾಗೂ ರಾಜ್ಯದಲ್ಲಿ ಕ್ರೀಡಾ ಹಾಗೂ ಇತರೆ ಕಾರ್ಯಕ್ರಮಗಳ ಸಂಘಟನೆಗೆ ಸಂಬಂಧಿಸಿ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದಿದ್ದಾರೆ.

ಈ ಪ್ರಕರಣ ಜನರಲ್ಲಿ ಅತೀವವಾದ ಆತಂಕ ಮತ್ತು ಕಳವಳ ಉಂಟು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಆಡಳಿತದಲ್ಲಿ ಆಗಿರುವ ಲೋಪಗಳು, ಘಟನೆ ನಂತರ ಸರ್ಕಾರದ ಕ್ರಮಗಳು ಸಾರ್ವಜನಿಕ ವಲಯದಲ್ಲಿ ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ. ಕಾಲ್ತುಳಿತಕ್ಕೆ ಕಾರಣರಾದ ಬಲಾಢ್ಯರ ರಕ್ಷಣೆ ಮಾಡಲಾಗುತ್ತಿದೆ. ಸತ್ಯವನ್ನು ಮುಚ್ಚಿಹಾಕಲು ಮೂರು ರೀತಿಯ ತನಿಖೆಗಳನ್ನು ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಅಸಹಾಯಕ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಧಾನಮಂಡಲದ ಮೂರು ದಿನಗಳ ತುರ್ತು ಅಧಿವೇಶನ ಕರೆಯಿರಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಕಾಲ್ತುಳಿತ ಘಟನೆಗೆ ಕಾರಣವಾದ ಸಂಪೂರ್ಣವಾದ ತನಿಖೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗುಂಪು ನಿಯಂತ್ರಣ ಹಾಗೂ ಸುರಕ್ಷತಾ ಕ್ರಮಗಳ ಬಲವರ್ಧನೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ವ್ಯವಸ್ಥೆ, ಭವಿಷ್ಯದಲ್ಲಿ ಇಂತಹ ದುರ್ಘಟನೆಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚೆ ನಡೆಸಬೇಕು.
ಈ ಅಧಿವೇಶನವು ರಾಜ್ಯದ ಜನತೆಗೆ ಸರ್ಕಾರದ ಬದ್ಧತೆ ತೋರಿಸಲು ಹಾಗೂ ಈ ದುರಂತದಿಂದ ಕಲಿತ ಪಾಠಗಳ ಆಧಾರದಲ್ಲಿ ಭವಿಷ್ಯಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಹಾಯಕವಾಗಲಿದೆ. ಘಟನೆಗೆ ಕಾರಣವೇನು ಎಂದು ರಾಜ್ಯದ ಜನತೆಗೆ ತಿಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಈ ಹಿನ್ನೆಲೆ ವಿಧಾನಮಂಡಲದ ತುರ್ತು ಅಧಿವೇಶ ಕರೆಯಬೇಕು ಎಂದು ಎಂದು ಅಶೋಕ್ ಪತ್ರದಲ್ಲಿ ತಿಳಿಸಿದ್ದಾರೆ. ಈ ಅಧಿವೇಶನದ ಮೂಲಕ ಕಾಲ್ತುಳಿತ ದುರಂತದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ.












Click it and Unblock the Notifications