Gruhalakshmi scheme: ಆಶಾ ಕಾರ್ಯಕರ್ತೆಗೆ ಒಳ್ಳೆಯ ಸಂಬಳ ಇಲ್ಲದಿದ್ರೂ ಗೃಹಲಕ್ಷ್ಮಿ ಹಣದಿಂದ ಶಾಲೆಗೆ ದೇಣಿಗೆ
ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಪರಿಸ್ಥಿತಿ ಹೀನಾಯವಾಗಿದೆ. ಹತ್ತಾರು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಸೂಕ್ತ ಸಂಬಳ ಅನ್ನೋದು ಇನ್ನೂ ಸಿಗಲೇ ಇಲ್ಲ. ರಾಜ್ಯ ಸರ್ಕಾರ ಈಗಷ್ಟೇ ಮಾಸಿಕ 10,000 ರೂಪಾಯಿ ಗೌರವಧನ ನೀಡುವ ಭರವಸೆ ನೀಡಿದೆ. ಆದರೆ, ಇಂತಹ ಬದುಕಿನ ಹೋರಾಟದ ಪರಿಸ್ಥಿತಿಯಿದ್ದರೂ ಆಶಾ ಕಾರ್ಯಕರ್ತೆಯೊಬ್ಬರು ತಮಗೆ ಬಂದಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಶಾಲೆಯ ಅಭಿವೃದ್ಧಿಗಾಗಿ ದೇಣಿಗೆ ನೀಡಿರುವ ಸಂಗತಿ ನಡೆದಿದೆ.
ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಮಹೇಶಪ್ಪ ಲಗುಬಿಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ 'ಗೃಹಲಕ್ಷ್ಮಿ' ಯೋಜನೆಯ 24 ಸಾವಿರ ರೂಪಾಯಿ ಹಣ ಕೂಡಿಟ್ಟಿದ್ದಾರೆ. ಅದನ್ನು ತಮ್ಮ ಗ್ರಾಮದ ಶಾಲೆಗೆ ದೇಣಿಗೆ ನೀಡುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.

ಈ ದೇಣಿಗೆಯನ್ನು ಶಾಲೆಗೆ ಸ್ಮಾರ್ಟ್‌ಕ್ಲಾಸ್ ಅಥವಾ ಶುದ್ಧ ಕುಡಿಯುವ ನೀರಿನ ಯಂತ್ರ ಖರೀದಿಸಲು ಬಳಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ತಮ್ಮ ಬದುಕಿಗೆ ಸರ್ಕಾರ ಆಸರೆಯಾಗಿದ್ದು ತಡವಾದರೂ, ಸರ್ಕಾರದ ಕೊಟ್ಟ ಅಲ್ಪಸ್ವಲ್ಪ ಹಣದಿಂದ ಆಶಾ ಕಾರ್ಯಕರ್ತೆ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಮಾದರಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಗೆ ಶಾಲಾ ವತಿಯಿಂದ ಸನ್ಮಾನ ಮಾಡುವ ಮೂಲಕ ಗೌರವ ಸೂಚಿಸಲಾಗಿದೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ಆಶಾ ಕಾರ್ಯಕರ್ತೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ 'ಗೃಹಲಕ್ಷ್ಮಿ' ಯೋಜನೆಯ 24 ಸಾವಿರ ಹಣ ಕೂಡಿಟ್ಟು, ತಮ್ಮ ಗ್ರಾಮದ ಶಾಲೆಗೆ ದೇಣಿಗೆ ನೀಡಿರುವ ಸುದ್ದಿ ಕೇಳಿ ಮನಸ್ಸಿಗೆ ಖುಷಿಯಾಯಿತು ಎಂದಿದ್ದಾರೆ.
ಶಾಲೆಗೆ ಸ್ಮಾರ್ಟ್ ಕ್ಲಾಸ್ ಅಥವಾ ಕುಡಿಯುವ ನೀರಿನ ಘಟಕ ಖರೀದಿಸಲು ಹಣ ನೀಡಿರುವುದಾಗಿ ಆಶಾ ಕಾರ್ಯಕರ್ತೆ ಗಂಗಮ್ಮ ಮಹೇಶಪ್ಪ ಲಗುಬಿಗಿ ತಿಳಿಸಿದ್ದಾರೆ. ಗಂಗಮ್ಮ ಅವರ ಬಯಕೆಯಂತೆ ಶಾಲೆಗೆ ನೀರಿನ ಘಟಕ ಖರೀದಿಸಿಸಲಾಗಿದೆ. ಗಂಗಮ್ಮನವರ ಈ ಕಾರ್ಯಕ್ಕೆ ಹೃದಯ ಪೂರ್ವಕವಾಗಿ ಶ್ಲಾಘಿಸುತ್ತೇನೆ ಎಂದು ಸಚಿವೆ ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಅನೇಕ ಫಲಾನುಭವಿಗಳು ಉತ್ತಮ ಕೆಲಸ ಕಾರ್ಯಗಳಿಗೆ ಹಣ ಸದುಪಯೋಗ ಮಾಡಿಕೊಳ್ಳುತ್ತಿರುವ ಮುಖೇನ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಸ್ವಾಗತಾರ್ಹ ಎಂದು ಶ್ಲಾಘಿಸಿದ್ದಾರೆ.

ಆಶಾ ಕಾರ್ಯಕರ್ತೆಯೊಬ್ಬರು ಗೃಹಲಕ್ಷ್ಮಿ ಹಣ ಕೂಡಿಟ್ಟು ತಮ್ಮೂರಿನ ಸರ್ಕಾರಿ ಶಾಲೆಗೆ ದೇಣಿಗೆ ನೀಡಿರುವುದು ಶ್ಲಾಘನೀಯ. ಆ ಹಣ ಬಳಸಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಖರೀದಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಫಲಾನುಭವಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ರೀತಿ ಸಮಾಜಕ್ಕೆ ಮಾದರಿಯಾಗಿದೆ. ಸರ್ಕಾರದ ಕೆಲವು ಯೋಜನೆಗಳು ಸಮಾಜದಲ್ಲಿ ಒಂದು ಮಹತ್ತರ ಬದಲಾವಣೆ ತರುತ್ತವೆ. ಅಂತಹ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications