ಮೂಢನಂಬಿಕೆ ಕರಡು ಕಾಂಗ್ರೆಸ್ ಪಕ್ಷದ್ದಲ್ಲ: ಪರಮೇಶ್ವರ್

ಖುದ್ದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರೇ ಈ ಸ್ಪಷ್ಟನೆಯನ್ನು ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಮೇಲೆ ಹೇರಲು ಹೊರಟಿದ್ದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಗೆ ಭಾರಿ ಹಿನ್ನಡೆಯುಂಟಾಗಿದೆ. ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅಂದರೇನು ಎಂಬುದೇ ತಮಗೆ ಗೊತ್ತಿಲ್ಲ. ಅದರ ಬಗ್ಗೆ ಪಕ್ಷದ ನಾಯಕರಲ್ಲಿ ಚರ್ಚೆಗೆ ಬಂದಿಲ್ಲ ಎಂದು ತಿಳಿಸಿದರು. ಮೂಢನಂಬಿಕೆಗೆ ತಮ್ಮದೂ ವಿರೋಧವಿದೆ. ಆದರೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಮಂಡನೆ ವಿಚಾರ ತಮಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, 'ಮೂಢನಂಬಿಕೆ ಪ್ರತಿಬಂಧಕ ಕಾಯಿದೆಯನ್ನು ಜಾರಿಗೊಳಿಸುವ ವಿಚಾರದಲ್ಲಿ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮತ್ತು ಬೆಳಗಾವಿ ಅಧಿವೇಶನದಲ್ಲಿ ಇದನ್ನು ಮಂಡಿಸುವುದಿಲ್ಲ. ಏಕೆಂದರೆ ಆ ಬಗ್ಗೆ ರಾಜ್ಯದ ಜನರ ಮಧ್ಯೆ ಕೂಲಂಕಶವಾಗಿ ಚರ್ಚೆ ನಡೆಯಬೇಕಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಒತ್ತಿ ಹೇಳಿದ್ದಾರೆ.
ಬ್ರಾಹ್ಮಣರಿಗೂ ಮೀಸಲಾತಿ ಕೊಡಿ- ಪೂಜಾರಿ: ಇದೇ ವೇಳೆ ಮಂಗಳೂರಿನಲ್ಲಿ ಮಾತನಾಡಿರುವ ಬಿ ಜನಾರ್ದನ ಪೂಜಾರಿ ಅವರು 'ಬ್ರಾಹ್ಮಣರಲ್ಲೂ ಅತ್ಯಂತ ಬಡವರಿದ್ದಾರೆ. ಅಂಥವರಿಗೆ ಆರ್ಥಿಕ ನೆರವು/ ಮೀಸಲಾತಿ ಕೊಡಿ. ದೇಶದಲ್ಲೆಲ್ಲೂ ಇಂತಹ ಕಾರ್ಯ ಆಗಿಲ್ಲ. ನೀವೇ ಈ ಕೀರ್ತಿಗೆ ಭಾಜನರಾಗುತ್ತೀರಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.












Click it and Unblock the Notifications