ಹಾಸನದಲ್ಲಿ ನಂದಿನಿ ಉತ್ಪನ್ನ ಖರೀದಿಸಿದ ಡಿಕೆಶಿ: ಚುನಾವಣೆ ಹೊತ್ತಲ್ಲಿ 'ಕೈ' ನಾಯಕರಿಗೆ ಸಿಕ್ಕ ದೊಡ್ಡ ಅಸ್ತ್ರ 'Nandini vs Amul'
ಬೆಂಗಳೂರು, ಏಪ್ರಿಲ್ 10: ನಂದಿನಿ- ಅಮೂಲ್ ( Nandini- Amul ) ವಿವಾದ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಈ ವಿಚಾರವಾಗಿ ಆಡಳಿತಾರೂಢ ಬಿಜೆಪಿ ( BJP ) ವಿರುದ್ಧ ಕಾಂಗ್ರೆಸ್ ( Congress ) ಹಾಗೂ ಜೆಡಿಎಸ್ ( JDS ) ನಾಯಕರು ವಾಗ್ದಾಳಿ ನಡೆಸಿದ್ದಾರೆ. 'Save Nandini' ಅಭಿಯಾನಕ್ಕೆ ಕರ್ನಾಟಕ ಕಾಂಗ್ರೆಸ್ ನಾಯಕರು ಕರೆ ನೀಡಿದ್ದಾರೆ. ಚುನಾವಣೆ ಹೊತ್ತಲ್ಲಿ ಮುನ್ನೆಲೆಗೆ ಬಂದಿರುವ ಈ ವಿವಾದ ಬಿಜೆಪಿಗೆ ಮುಜುಗರ ತಂದಿದೆ ಎಂಬ ಮಾತುಗಳು ಕೇಳಿಬಂದಿದೆ.
ಇಂದು ಹಾಸನಕ್ಕೆ ತೆರಳಿರುವ ಕರ್ನಾಟಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿಕೆ ಶಿವಕುಮಾರ್ ನಂದಿನಿ ಮಳಿಗೆಗೆ ತೆರಳಿ ಅದರ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಅಲ್ಲಿಯೇ ನಿಂತು ನಂದಿನಿ ಆಹಾರ ಉತ್ಪನ್ನ ಹಾಗೂ ಪಾನೀಯವನ್ನು ಸೇವಿಸಿದ್ದಾರೆ.

'ಹಾಸನದ ನಂದಿನಿ ಮಳಿಗೆಗೆ ಇಂದು ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ಅನ್ನು ಹೈಜಾಕ್ ಮಾಡಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಇದು ನೆನಪಿರಲಿ ಕನ್ನಡಿಗರು ಎಂದಿಗೂ ತಮ್ಮ ಸ್ವಾಭಿಮಾನ ಮಾರಿಕೊಳ್ಳುವುದಿಲ್ಲ' ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನೊಂದಿಗೆ ನಂದಿನಿ ಉತ್ಪನ್ನ ಸೇವಿಸುತ್ತಿರುವ ಫೋಟೊಗಳನ್ನು ಹಂಚಿಕೊಡಿದ್ದಾರೆ.
ಕಳೆದ ವಾರ, ಅಮೂಲ್ ಕಂಪನಿಯು ಬೆಂಗಳೂರಿನಲ್ಲಿ ಹಾಲು ಮತ್ತು ಮೊಸರು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ಘೋಷಿಸಿತು. ಇದು ವಿರೋಧ ಪಕ್ಷಗಳಿಂದ ತೀವ್ರ ವಿರೋಧವನ್ನು ಕಂಡಿತು. ಬಿಜೆಪಿ ಸರ್ಕಾರ ಗುಜರಾತ್‌ನ ಉದ್ಯಮಿಗಳಿಗೆ ರಾಜ್ಯವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಭಾನುವಾರ ಟ್ವೀಟ್ ಮಾಡಿರುವ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕರ್ನಾಟಕಕ್ಕೆ ಕೊಡುವುದಕ್ಕೋ ಅಥವಾ ಕರ್ನಾಟಕದಿಂದ ಲೂಟಿ ಮಾಡುವುದಕ್ಕೋ? ನೀವು ಈಗಾಗಲೇ ಕನ್ನಡಿಗರಿಂದ ಬ್ಯಾಂಕುಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಕದ್ದಿದ್ದೀರಿ. ನೀವು ಈಗ ನಮ್ಮಿಂದ ನಂದಿನಿಯನ್ನು (ಕೆಎಂಎಫ್) ಕದಿಯಲು ಪ್ರಯತ್ನಿಸುತ್ತಿದ್ದೀರಾ?' ಎಂದು ವಾಗ್ದಾಳಿ ನಡೆಸಿದ್ದಾರೆ.
'ಗುಜರಾತ್‌ನ ಬರೋಡಾ ಬ್ಯಾಂಕ್ ನಮ್ಮ ವಿಜಯಾ ಬ್ಯಾಂಕ್‌ಗೆ ಉಪವಿಭಾಗವಾಯಿತು. ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಗುಜರಾತ್‌ನ ಅದಾನಿಗೆ ಹಸ್ತಾಂತರಿಸಲಾಯಿತು. ಈಗ, ಗುಜರಾತ್‌ನ ಅಮೂಲ್ ನಮ್ಮ ಕೆಎಂಎಫ್ (ನಂದಿನಿ) ಅನ್ನು ತಿನ್ನಲು ಯೋಜಿಸುತ್ತಿದೆ' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಏತನ್ಮಧ್ಯೆ, ಈ ವಿಚಾರನವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕೇವಲ ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕರ್ನಾಟಕದಲ್ಲಿ ಅಮೂಲ್ ಎಂದಿಗೂ ನಂದಿನಿಯ ಸ್ಥಾನವನ್ನು ಪಡೆಯುವುದಿಲ್ಲ. ಆದರೆ ಎರಡೂ ಬ್ರಾಂಡ್‌ಗಳು ಸಹ ಅಸ್ತಿತ್ವದಲ್ಲಿರುತ್ತವೆ ಎಂದು ಅವರು ಸ್ಪಷ್ಟಪಡಿಸಿದರು. ನಮ್ಮ ರಾಜ್ಯದಲ್ಲಿ ಬೆಳೆದ ನಂದಿನಿ ಬ್ರಾಂಡ್‌ಗೆ ಯಾರಿಂದಲೂ ಯಾವುದೇ ಬೆದರಿಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಡೈರಿ ಮಾರುಕಟ್ಟೆಗೆ ಅಮೂಲ್ ಪ್ರವೇಶಿಸಿರುವುದರ ಬಗ್ಗೆ ಮಾತನಾಡಿರುವ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ನಂದಿನಿಯನ್ನು ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.
'ನಂದಿನಿ ಮತ್ತು ಅಮೂಲ್ ಅನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ' ಎಂದು ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಬಗ್ಗೆ ಸಾಕಷ್ಟು ಅರಿವಿಲ್ಲದವರು ಮಾತ್ರ ತಪ್ಪು ಹೇಳಬಲ್ಲರು' ಎಂದು ಸೋಮಶೇಖರ್ ಹೇಳಿದ್ದಾರೆ. ಈ ಮೂಲಕ ನಂದಿನಿ-ಅಮೂಲ್ ವಿಚಾರದಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ನಂದಿನಿ ಉತ್ಪನ್ನಗಳು ಅಮೂಲ್ ಸೇರಿದಂತೆ ಯಾವುದೇ ಬ್ರಾಂಡ್‌ನಿಂದ ಸ್ಪರ್ಧೆಯನ್ನು ಎದುರಿಸಲು ಸಮರ್ಥವಾಗಿವೆ. ಕೆಎಂಎಫ್ ಅಭದ್ರತೆಯ ಪ್ರಶ್ನೆಯೇ ಇಲ್ಲ. ಎಸ್ ಎಂ ಕೃಷ್ಣ ಅವರ ಕಾಲದಿಂದಲೂ ಕೆಎಂಎಫ್ ಪ್ರಬಲವಾಗಿದೆ ಮತ್ತು ಲಾಭದಾಯಕವಾಗಿದೆ' ಎಂದು ಸೋಮಶೇಖರ್ ಹೇಳಿದ್ದಾರೆ.












Click it and Unblock the Notifications