ವೈ ಎಸ್ ವಿ ದತ್ತಾ ಗೆ ಕೈ ತಪ್ಪಿದ ಟಿಕೆಟ್; ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಯಾರಿಗೂ ಟಿಕೆಟ್ ಭರವಸೆ ನೀಡಿಲ್ಲ: ಡಿಕೆಶಿ
ಬೆಂಗಳೂರು, ಏಪ್ರಿಲ್8: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಈಗಾಗಲೇ ಮೊದಲ ಹಾಗೂ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅಸಮಾಧಾನ ಭುಗಿಲೆದಿದ್ದೆ.
ಜೆಡಿಎಸ್ ಪಕ್ಷವನ್ನ ತೊರೆದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭರವಸೆ ಮೇಲೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈಎಸ್ ವಿ ದತ್ತಾ ಅವರಿಗೆ ಕಡೂರಿನಿಂದ ಟಿಕೆಟ್ ಸಿಗುತ್ತೇ ಎಂಬ ನಿರೀಕ್ಷೆಯಲ್ಲಿದ್ದರೂ ಆದರೇ ಕಡೂರಿನಿಂದ ಆನಂದ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದ್ದು, ವೈಎಸ್ ವಿ ದತ್ತಾ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ನಾಯಕರ ವಿರುದ್ದ ಅಸಮಾಧಾನಗೊಂಡಿದ್ದಾರೆ.

ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳಬೇಕಾದರೂ ಯಾರಿಗೂ ಟಿಕೆಟ್ ಭರವಸೆ ನೀಡುವುದಿಲ್ಲ. ಬೇಷರತ್ತಿನಿಂದ ಸೇರಿಸಿಕೊಳ್ಳುತ್ತೇವೆ. ಹಾಲಿ ಶಾಸಕರು ಬಂದರೂ ಅವರು ಕಾರ್ಯಕರ್ತರಾಗಿ ದುಡಿಯಲು ಬಯಸುತ್ತೇವೆ, ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಕೆಲವರಿಗೆ ಆಕ್ರೋಶ ಇರುತ್ತದೆ. ನಾವು ಅದನ್ನು ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಮೂರನೇ ಪಟ್ಟಿ ಬಿಡುಗಡೆ ಯಾವಾಗ ಎಂಬ ಕುರಿತು ಮಾತನಾಡಿ, ರಾಜಕಾರಣ ಎಂದರೆ ಚದುರಂಗ ಆಟ. ಬಿಜೆಪಿಯವರು ಆಡುತ್ತಿದ್ದಾರೆ. ಜೆಡಿಎಸ್ ನವರು ಹಾಗೂ ಬಿಜೆಪಿ 224 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಾವು ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಚರ್ಚೆ ಮಾಡಿದ್ದೇವೆ. ಬಹುತೇಕ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದೇವೆ. ಅಸಮಾಧಾನ ಇರುವವರನ್ನು ಕರೆದು ಮಾತನಾಡುತ್ತಿದ್ದೇವೆ. ಒಂದು ಕುಟುಂಬ, ಸಂಸಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಿ, ಸಮಾಧಾನ ಮಾಡಬೇಕು ಎಂದು ತಿಳಿಸಿದರು.
ಕೆಲವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ಬಿಜೆಪಿ ಪಟ್ಟಿ ಬಿಡುಗಡೆ ಆಗಲಿ. ಆನಂತರ ನಾವು ಚರ್ಚೆ ಮಾಡುತ್ತೇವೆ ಎಂದ ಅವರು, ಅನ್ಯ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಹಲವು ನಾಯಕರು ಬರುತ್ತಾರಾ ಎಂಬ ಪ್ರಶ್ನೆಗೆ ಈಗ ಚರ್ಚೆ ಬೇಡ ಎಂದು ಹೇಳಿದರು.

ರಘು ಆಚಾರ್ ಸೇರಿದಂತೆ ಕೆಲವರು ಕಾಂಗ್ರೆಸ್ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, 'ಅವರು ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಟಿಕೆಟ್ ಸಿಗದೇ ಇರುವುದಕ್ಕೆ ಬೇಸರ ಸಹಜ. ನಾವು ನಮ್ಮದೇ ಲೆಕ್ಕಾಚಾರದಿಂದ ಟಿಕೆಟ್ ನೀಡಿದ್ದೇವೆ' ಎಂದು ತಿಳಿಸಿದರು.
ರಾಜ್ಯದ ನೆಲ, ಜಲ, ಭಾಷೆ ಕಾಪಾಡಿ ಜನರ ಹಿತ ಕಾಯುವ ಪ್ರತಿಜ್ಞೆ ಮೂಲಕ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾನ ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ನಮ್ಮ ರಾಜ್ಯದ ಗಡಿ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಶಿವಸೇನೆ ಸರ್ಕಾರ ತಮ್ಮ ಯೋಜನೆ ಜಾರಿ ಮಾಡಲು ಹಣ ನೀಡಿದ್ದಾರೆ. ಇದು ಸರಿಯೇ? ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಕನ್ನಡ ನೆಲ, ಜಲ, ಭಾಷೆ ಉಳಿಸಬೇಕಾದವರು ಈ ಬಗ್ಗೆ ಉಸಿರು ಎತ್ತುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ನಮ್ಮ ರಾಜ್ಯದಲ್ಲಿ ಹೇಗೆ ಯೋಜನೆ ಜಾರಿ ತರಲು ಮುಂದಾಗಿದೆ? ರಾಜ್ಯದ ಹಿತ ರಕ್ಷಣೆ ಮಾಡುವುದಾಗಿ ಹೇಳಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿಗಳಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರೇ ಅವರನ್ನು ವಜಾಗೊಳಿಸಬೇಕು. ನಮ್ಮ ಜನರಿಗೆ ಮಹಾರಾಷ್ಟ್ರ ಯೋಜನೆ ನೀಡಲು ಅವರು ಯಾರು? ನಮ್ಮಲ್ಲಿ ಸರ್ಕಾರ ಇಲ್ಲವೇ?' ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಅಮೂಲ್ ಹಾಲು ಪ್ರವೇಶ ಮಾಡಿರುವ ಕುರಿತು ಮಾತನಾಡಿ, ನಂದಿನಿ ಮುಗಿಸಿ ಅಮೂಲ್ ಬೆಳೆಸಲು ಬಿಜೆಪಿ ತೀರ್ಮಾನಿಸಿದೆ. ಆ ಮೂಲಕ ರಾಜ್ಯದ ಹಾಲು ಉತ್ಪಾದಕ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.












Click it and Unblock the Notifications