ಮೊಬೈಲ್ ತೊರೆ, ಪುಸ್ತಕ ತೆರೆ: ಹಟ್ಟಿಯಂಗಡಿಯಲ್ಲಿ ಮಕ್ಕಳ 'ಅಕ್ಷರ ಅಂಬಾರಿ'
ಕುಂದಾಪುರ: ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ರೂಪಿಸುವ ಮಹತ್ವದ ಕಾರ್ಯಕ್ರಮ 'ಅಕ್ಷರ ಅಂಬಾರಿ - ಗ್ರಾಮೀಣ ಮಕ್ಕಳ ಸಾಹಿತ್ಯ ಉತ್ಸವ'ಕ್ಕೆ ಕುಂದಾಪುರ ತಾಲ್ಲೂಕಿನ ಹಟ್ಟಿಯಂಗಡಿ ಗ್ರಾಮದ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶನಿವಾರ (ಮೇ 16) ಅರ್ಥಪೂರ್ಣ ಚಾಲನೆ ದೊರೆಯಿತು.
ಕನ್ನಡದ ಮಹತ್ವದ ಕೃತಿಗಳಿರುವ ಪಲ್ಲಕ್ಕಿಯನ್ನು ಮಕ್ಕಳೇ ಮೆರವಣಿಗೆಯಲ್ಲಿ ಸಭಾ ಮಂಟಪಕ್ಕೆ ತಂದರು. ಕವಿತೋಕ್ತಿ, ಕಥಾಲೋಕ, ವಿವೇಕಲೋಕ, ಕಲ್ಪನೆಯ ಕಾಡಿನೊಳಗೆ ಇತ್ಯಾದಿ ಬರಹಗಳಿದ್ದ ಸೂರ್ಯಕಾಂತಿ ವಿನ್ಯಾಸದ ಆಕರ್ಷಕ ಆಶಯ ಚಿಹ್ನೆಯನ್ನು (ಲೊಗೊ) ಗಣ್ಯರು ಲೋಕಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಆಪ್ತಶೈಲಿಯಲ್ಲಿ ಮಕ್ಕಳಿಗೆ ಹಲವು ಕಥೆಗಳನ್ನು ಹೇಳುವುದರ ಜೊತೆಗೆ ಓದಿನ ಮಹತ್ವವನ್ನು 'ತರಂಗ' ವಾರಪತ್ರಿಕೆಯ ಸಂಪಾದಕಿ ಡಾ ಸಂಧ್ಯಾ ಎಸ್ ಪೈ ವಿವರಿಸಿದರು.
"ರಾವಣ ಕೆಟ್ಟವನಲ್ಲ. ಆದರೆ ಕೆಟ್ಟ ಕೆಲಸ ಮಾಡಿದ. ಜಗತ್ತಿನಲ್ಲಿ ಇರುವ ಅಮೂಲ್ಯವಾದವುಗಳೆಲ್ಲವೂ ತನ್ನ ಬಳಿ ಇರಬೇಕು ಎನ್ನುವ ಲಾಲಸೆ ಅವನನ್ನು ಹಾಳು ಮಾಡಿತು. ರಾವಣನ ವ್ಯಕ್ತಿತ್ವ ಹೀಗಾಗಲು ಅವನ ಬಾಲ್ಯದಲ್ಲಿ ಅನುಭವಿಸಿದ ತಾರತಮ್ಯವೇ ಕಾರಣ" ಎಂದು ವಿವರಿಸಿದರು.
ಖ್ಯಾತ ಸಾಹಿತಿ ಮತ್ತು ಕನ್ನಡ ಸಂಸ್ಕೃತಿ ಸಂಶೋಧಕ ಡಾ ಬಿ.ಎ.ವಿವೇಕ ರೈ "ನಾನು ಹೇಗೆ ಬರೆಯಲು ಆರಂಭಿಸಿದೆ" ವಿಷಯದ ಕುರಿತು ತಮ್ಮ ಅಮೂಲ್ಯ ಅನುಭವ ಹಂಚಿಕೊಂಡರು.
"ನಮ್ಮ ಪ್ರಾದೇಶಿಕತೆಯೇ ನಮ್ಮ ಶಕ್ತಿ. ಕುಂದಾಪುರದವರು ಕುಂದಗನ್ನಡದಲ್ಲಿ, ಧಾರವಾಡ ಮತ್ತು ಇತರ ಪ್ರದೇಶಗಳವರು ತಮ್ಮ ಸ್ಥಳೀಯ ಸೊಗಡಿನಲ್ಲಿ ಬರೆಯಬೇಕು. ಬೇಂದ್ರೆ ಮತ್ತು ಕುವೆಂಪು ಹೀಗೆಯೇ ಬರೆದು ವಿಶ್ವಮಾನ್ಯರಾದರು" ಎಂದು ಕಿವಿಮಾತು ಹೇಳಿದರು.

"ಕೇವಲ ವಿವರಗಳು ಅಥವಾ ಆಕರ್ಷಕ ನಿರೂಪಣಾ ಶೈಲಿಯಷ್ಟೇ ಸಾಹಿತ್ಯವಲ್ಲ. ಸಾಹಿತ್ಯವು ಓದುಗರನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯಬೇಕು. ಒಂದು ಆಶಯ-ಸಂದೇಶ ಇರಬೇಕು" ಎಂದು ಮಕ್ಕಳಿಗೆ ಸೃಜನಶೀಲ ಬರಹದ ಮೊದಲ ಪಾಠ ಮಾಡಿದರು.
ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಚಾರ್ಯ ಶರಣ ಕುಮಾರ, ಮಣಿಪಾಲ್ ಮೀಡಿಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ಕುಮಾರ್, ಉದಯವಾಣಿ ಮಣಿಪಾಲ ಆವೃತ್ತಿಯ ಸಂಪಾದಕ ಅರವಿಂದ ನಾವಡ ಇತರರು ಪಾಲ್ಗೊಂಡಿದ್ದರು.
ಕರಾವಳಿ ಜಿಲ್ಲೆಗಳ ಜೊತೆಗೆ ಕಲಬುರಗಿ, ಚಿಕ್ಕಬಳ್ಳಾಪುರ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಮಕ್ಕಳು ಮತ್ತು ಪೋಷಕರು ಗ್ರಾಮೀಣ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಕಥಾ ಸುರುಳಿ, ಮೊಬೈಲ್ ಮರೆ-ಪುಸ್ತಕ ತೆರೆ, ನಿನ್ನ ನೀ ಅರಿ-ಬರಿ (ಚಿತ್ರಕಲಾ) ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ನವ ಮಂಗಳೂರು ಬಂದರು ಪ್ರಾಧಿಕಾರದ ಸಹಯೋಗದಲ್ಲಿ 'ಉದಯವಾಣಿ' ದಿನಪತ್ರಿಕೆಯು ಈ ಕಾರ್ಯಕ್ರಮ ಆಯೋಜಿಸಿದೆ.












Click it and Unblock the Notifications