Aero India 2023; ಹೋರ್ಡಿಂಗ್ ಅಳವಡಿಕೆಗೆ ಹೈಕೋರ್ಟ್ ಒಪ್ಪಿಗೆ
ಬೆಂಗಳೂರು, ಜನವರಿ 13; ಬೆಂಗಳೂರು ನಗರದ ಯಲಹಂಕ ಐಎಎಫ್ ವಾಯುನೆಲೆಯಲ್ಲಿ ಫೆ.13ರಿಂದ ಐದು ದಿನಗಳ ಕಾಲ ನಡೆಯಲಿರುವ 'ಏರೋ ಇಂಡಿಯಾ-2023'ಕ್ಕೆ ಸಿದ್ಧತೆಗಳು ಆರಂಭವಾಗಿವೆ.
ಈಗಾಗಲೇ ಏರ್ ಶೋನಲ್ಲಿ ಪಾಲ್ಗೊಳ್ಳಲು ಹಲವಾರು ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ನಗರದಲ್ಲಿ ಆ ಕುರಿತ ಹೋರ್ಡಿಂಗ್ ಅಳವಡಿಕೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ.
ನಿಯಮದಂತೆ ಕರ್ನಾಟಕ ಹೈಕೋರ್ಟ್ ಈ ಹಿಂದೆ ನಗರದಲ್ಲಿ ಎಲ್ಲೂ ಯಾವುದೇ ರೀತಿಯ ಹೋರ್ಡಿಂಗ್ ಅಳವಡಿಸಬಾರದೆಂದು ಆದೇಶ ಹೊರಡಿಸಿತ್ತು. ವೈಮಾನಿಕ ಪ್ರದರ್ಶನದ ನಿಮಿತ್ತ ನಗರದ ಹಲವೆಡೆ ತಾತ್ಕಾಲಿಕ ಹೋರ್ಡಿಂರ್ಗ್ಸ್ ಅಳವಡಿಸಲು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಬಿಬಿಎಂಪಿ ಅನುಮತಿ ನೀಡಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯಪೀಠ ಈ ಆದೇಶ ಮಾಡಿದೆ.
ಅಲ್ಲದೆ, ನಗರದಲ್ಲಿ ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ತಡೆಯುವ ವಿಚಾರದಲ್ಲಿ ಹೈಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನಗಳನ್ನು ಜಾರಿಗೆ ತರುವಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರವಾದ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ನ್ಯಾಯಪೀಠ ಇದೇ ವೇಳೆ ಸೂಚಿಸಿದೆ.
ಬಿಬಿಎಂಪಿ ಪರ ವಕೀಲರು, ನಗರದ ಯಲಹಂಕ ಐಎಎಫ್ ವಾಯುನೆಲೆಯಲ್ಲಿ ಫೆ.13 ರಿಂದ 17ರವರೆಗೆ 'ಏರೋ ಇಂಡಿಯಾ-2023' ವೈಮಾನಿಕ ಪ್ರದರ್ಶನ ನಡೆಯಲಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ. ಭಾರತದ ವಿವಿಧ ರಾಜ್ಯ ಮತ್ತು ಜಗತ್ತಿನ ಹಲವು ರಾಷ್ಟ್ರಗಳಿಂದ ಜನ ಬೆಂಗಳೂರು ನಗರಕ್ಕೆ ಪ್ರದರ್ಶನಕ್ಕೆ ಆಗಮಿಸಲಿದ್ದಾರೆ ಎಂದರು.
ಹಾಗಾಗಿ, ಅವರಿಗೆ ಸೂಕ್ತ ಮಾಹಿತಿ ಹಾಗೂ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಹೋರ್ಡಿಂಗ್, ಸೂಚನಾಫಲಕ ಮತ್ತು ಮಾರ್ಗ ನಕ್ಷೆ ಅಳವಡಿಸಲು ಅನುಮತಿ ನೀಡುವಂತೆ ಎಚ್‌ಎಎಲ್ ಬಿಬಿಎಂಪಿಗೆ ಮನವಿ ಮಾಡಿದೆ ಎಂದು ಹೇಳಿದರು.
ಏರ್ ಶೋ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸುವುದಾಗಿಯೂ ತಿಳಿಸಿದೆ ಎಂದು ವಿವರಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಏರೋ ಇಂಡಿಯಾ-2023ಕ್ಕೆ ಸಂಬಂಧಿಸಿದ ಜಾಹೀರಾತು ಫಲಕ ಪ್ರದರ್ಶಿಸಲು ಎಚ್‌ಎಲ್‌ಗೆ ಅನುಮತಿ ನೀಡಲು ಬಿಬಿಎಂಪಿಗೆ ಅವಕಾಶ ಕಲ್ಪಿಸಿತು.
ಕೇಂದ್ರ ರಕ್ಷಣಾ ಸಚಿವಾಲಯ ಏರೋ ಇಂಡಿಯಾ 2023ಕ್ಕೆ ದಿನಾಂಕ ನಿಗದಿ ಮಾಡಿದೆ. ನಗರದ ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17ರ ತನಕ 14ನೇ ಅವೃತ್ತಿಯ ಏರ್ ಶೋ ನಡೆಯಲಿದೆ.












Click it and Unblock the Notifications