ಸರ್ಕಾರ ಏನ್ ಮಾಡಿದ್ರೆ ಕನ್ನಡಿಗರಿಗೆ ಉದ್ಯೋಗ ಸಿಗುತ್ತೆ? ನಟಿ ಪೂಜಾ ಗಾಂಧಿ ಮಹತ್ವದ ಸಲಹೆ
ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಅವರು ಕನ್ನಡ ಭಾಷಾಭಿಮಾನದ ವಿಚಾರದಲ್ಲಿ ಸದಾ ಮುಂದೆ ಬಂದು ನಿಲ್ಲುವ ಸಾಲಿನವರು. ಇವರಿಗೆ ಕನ್ನಡ, ಕನ್ನಡಿಗರು ಅಂದರೆ ಎಲ್ಲಿಲ್ಲದ ಪ್ರೀತಿ, ಇವರ ಮೂಲ ಬೇರೆಯೇ ಆದರೂ ಕನ್ನಡದಲ್ಲೇ ಮುದ್ದಾಗಿ ಮಾತನಾಡಿ ಕನ್ನಡಿಗರ ಮನಗೆದ್ದಿದ್ದಾರೆ. ಇದೀಗ ಕನ್ನಡಿಗರ ಉದ್ಯೋಗದ ವಿಚಾರದಲ್ಲೂ ಪೂಜಾ ಗಾಂಧಿ ವಿಶೇಷ ಕಾಳಜಿ ತೋರಿದ್ದಾರೆ.
ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳು (MNC) ಅಧಿಕವಾಗಿದ್ದು, ಇದರಲ್ಲಿ ಕನ್ನಡಿಗರು ಉದ್ಯೋಗ ಪಡೆಯುವುದು ಹೇಗೆ? ಎಂಬುದರ ಕುರಿತು ನಟಿ ಪೂಜಾ ಗಾಂಧಿ ಅವರೇ ಖುದ್ದಾಗಿ ವರದಿ ಸಿದ್ಧಪಡಿಸಿದ್ದಾರೆ.

ಈ ತಲೆಮಾರಿನವು ಉದ್ಯೋಗ ಪಡೆಯಲು ಹೇಗೆಲ್ಲ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಹೇಗೆ ಬದಲಾಗಬೇಕು ಎಂಬ ಅಂಶಗಳ ಬಗ್ಗೆ ಪೂಜಾ ಗಾಂಧಿ ಬೆಳಕು ಚೆಲ್ಲಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿರುವ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿ ಮಲೆ ಅವರಿಗೆ ಪೂಜಾ ವರದಿ ಸಲ್ಲಿಸಿ, ಮಹತ್ವದ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕೂಡ ಇದ್ದರು.
ಪೂಜಾ ಗಾಂಧಿ ಕೊಟ್ಟ ಸಲಹೆಗಳೇನು?: ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತೆ ಅನುಕೂಲವಾಗಲು ರಾಜ್ಯ ಸರ್ಕಾರವೇ ಒಂದು ವೆಬ್‌ಸೈಟ್ ತೆರೆಯಬೇಕು. ಅದರಲ್ಲಿ ಎಂಎನ್‌ಸಿ ಕಂಪನಿಗಳಲ್ಲಿರುವ ಉದ್ಯೋಗ ಮಾಹಿತಿ, ವಿದ್ಯಾರ್ಹತೆ, ಕೌಶಲ್ಯಗಳ ಅಗತ್ಯತೆ ಯುವಕರಿಗೆ ಗೊತ್ತಾಗುವಂತಿರಬೇಕು ಎಂದು ಪೂಜಾ ಹೇಳಿದ್ದಾರೆ.

ಉದ್ಯೋಗ ಬಯಸುವವರೂ ಈ ವೆಬ್‌ಸೈಟ್‌ನಲ್ಲಿ ತಮ್ಮ ವಿದ್ಯಾರ್ಹತೆ, ಕಲಿತಿರುವ ಕೌಶಲ್ಯಗಳು, ತಾಂತ್ರಿಕ ಜ್ಞಾನ ಸೇರಿದಂತೆ ಇನ್ನಿತರ ಮಾಹಿತಿಯನ್ನು ಅಲ್ಲಿಗೆ ಅಪ್ಲೋಡ್ ಮಾಡುವಂತಿರಬೇಕು. ಬಳಿಕ ಈ ವಿವರಗಳೆಲ್ಲ ಖಾಸಗಿ ಕಂಪನಿಗಳಿಗೆ ಸಿಗುವಂತಿರಬೇಕು. ಆಗ ತಮ್ಮ ಕೆಲಸಕ್ಕೆ ಅರ್ಹರನ್ನು ಆಯ್ಕೆ ಮಾಡಲು ಕಂಪನಿಗಳಿಗೂ ಅನುಕೂಲವಾಗಲಿದೆ ಎಂದಿದ್ದಾರೆ.
ರಾಜ್ಯದ ಪದವಿ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ವಿಷಯವನ್ನು ಕಡ್ಡಾಯಗೊಳಿಸಬೇಕು. ಇದಕ್ಕೂ ಅಂಕಗಳನ್ನು ನಿಗದಿ ಮಾಡಬೇಕು. ಆಗ ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಗಳು ಉದ್ಯೋಗದ ಬಗೆಗಿನ ಜ್ಞಾನ, ಮಾಹಿತಿ ತಿಳಿದುಕೊಳ್ಳಲು ನೆರವಾಗಲಿದೆ. ಕಾಲೇಜಿನಿಂದ ಹೊರಗೆ ಬರುವಾಗಲೇ ಉದ್ಯೋಗಕ್ಕೆ ಬೇಕಾದ ಕೌಶಲ್ಯದೊಂದಿಗೆ ಸಜ್ಜಾಗಿರುತ್ತಾರೆ. ಈಗಿನ ಆಧುನಿಕ ತಂತ್ರಜ್ಞಾನಗಳ ಬಳಕೆಯ ಕುರಿತು ಕೌಶಲ್ಯ ಹೆಚ್ಚಿಸಲು ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದರ ಜೊತೆಗೆ ಕನ್ನಡಿಗರು, ಕನ್ನಡೇತರರು ಎಂದು ಸರ್ಕಾರ ಪ್ರತ್ಯೇಕ ಗುರುತಿನ ಚೀಟಿ ನೀಡಬೇಕು. ಹೀಗೆ ಮಾಡುವುದರಿಂದ ಸರ್ಕಾರ ಕೊಡುವ ಯೋಜನೆಗಳು ಸುಲಭವಾಗಿ ಕನ್ನಡಿಗರ ಕೈ ಸೇರುತ್ತದೆ. ಆಗ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳು ಸಿಗಲು ಕೂಡ ಅನುಕೂಲವಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಬಹುರಾಷ್ಟ್ರೀಯ ಕಂಪನಿಗಳ ಅಪೇಕ್ಷೆಯಂತೆ ಯುವಜನರನ್ನು ಸಜ್ಜುಗೊಳಿಸಬಹುದು. ಇದಕ್ಕೆ ಎಂಎನ್‌ಸಿ ಕಂಪನಿಗಳ ಸಹಕಾರವೂ ಅಗತ್ಯ. ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಸಿ, ಯುವಜನರಿಗೆ ಕೌಶಲಗಳ ತರಬೇತಿ ನೀಡಲು ಸಹಾಯವಾಗಲಿದೆ. ಈ ವಿಚಾರವಾಗಿ ಸರ್ಕಾರದೊಂದಿಗೆ ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ.












Click it and Unblock the Notifications