Namratha Gowda: ಅಪ್ಪು ಹೆಸರಿನಲ್ಲಿ ನಮ್ರತಾ ಗೌಡ ಹೊಸ ಹೆಜ್ಜೆ
ಬೆಂಗಳೂರು, ಮಾರ್ಚ್ 18: ಕರ್ನಾಟಕ ರತ್ನ ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ. ರಾಜ್ಯದ ವಿವಿಧೆಡೆ ಅನ್ನದಾನ, ರಕ್ತದಾನ, ನೇತ್ರದಾನ ನೊಂದಣಿ ಸೇರಿದಂತೆ ವಿಶೇಷ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.
ಅಪ್ಪು ಅಭಿಮಾನಿಗಳಂತೆ ಸೆಲೆಬ್ರೆಟಿಗಳು ಕೂಡ ಪುನೀತ್ ಹೆಸರಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿದ್ದು, ಬಿಗ್‌ಬಾಸ್ ಕನ್ನಡ ಸೀಜನ್ 10ರ ಸ್ಪರ್ಧಿ, ಕಿರುತೆರೆ ನಟಿ ನಮ್ರತಾ ಗೌಡ ಬಡ ಜನರ ಹಸಿವು ನೀಗಿಸಲು ಹೊಸ ಹೆಜ್ಜೆ ಇಟ್ಟಿದ್ದಾರೆ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವಾಗಿಟ್ಟುಕೊಂಡು ನಮ್ರತಾ ಗೌಡ ಜನರಿಗೆ ಉಪಯೋಗವಾಗುವ ಕೆಲಸಕ್ಕೆ ಮುಂದಾಗಿದ್ದಾರೆ. ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿನ್ನೆ (ಮಾರ್ಚ್ 17)ರಂದು ಬಡವರಿಗೆ ಹಾಗೂ ನಿರ್ಗತಿಕರಿಗೆ ಹಾಗೂ ಬೀದಿ ಬದಿ ಸಣ್ಣ ವ್ಯಾಪಾರಿಗಳಿಗೆ ಊಟ ಹಂಚಿದ್ದಾರೆ. ಒಂದೊಳ್ಳೆ ಸಂದೇಶದೊಂದಿಗೆ ನಮ್ರತಾ ಗೌಡ ಊಟದ ಕಿಟ್‌ಅನ್ನು ಹಂಚಿದ್ದಾರೆ.
ಈ ವಿಡಿಯೋವನ್ನು ನಮ್ರತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರತಿ ತಿಂಗಳು ಹದಿನೇಳನೆ ತಾರೀಕು ಇದೇ ರೀತಿ ಹಸಿದವರಿಗೆ ಊಟ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಈ ವಿಚಾರವನ್ನು ಖುಷಿಯಿಂದ ನಮ್ರತಾ ಗೌಡ ಹಂಚಿಕೊಂಡಿದ್ದು, ನಟಿ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಮ್ರತಾ ಗೌಡ ಅಭಿಮಾನಿಗಳು ಮಾತ್ರವಲ್ಲದೇ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕೂಡ ಶ್ಲಾಘಿಸಿದ್ದಾರೆ.
ಅಪ್ಪು ಸ್ಮಾರಕಕ್ಕೆ ಲಕ್ಷಾಂತರ ಅಭಿಮಾನಿಗಳ ಭೇಟಿ
ಇನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಲಕ್ಷಾಂತರ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ದೊಡ್ಮನೆ ಕುಟುಂಬದವರು ಸಹ ಅಪ್ಪು ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಪ್ಪು ಪುತ್ರಿ ದೊಡ್ಡಪ್ಪ ರಾಘವೇಂದ್ರ ರಾಜ್‌ಕುಮಾರ್ ಹಾಗೂ ದೊಡ್ಡಮ್ಮ ಅವರೊಂದಿಗೆ ಅಪ್ಪನ ಸಮಾಧಿಗೆ ಪೂಜೆ ಸಲ್ಲಿಸಿದರು. ಇನ್ನು ಹುಟ್ಟುಹಬ್ಬದ ದಿನ ಅಪ್ಪು ಸಮಾಧಿ ದರ್ಶನಕ್ಕೆ ಆಗಮಿಸಿದ್ದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಹಾಗೂ ಅಪ್ಪು ಪುತ್ರಿ ವಂದಿತಾ ಅಭಿಮಾನಿಗಳಿಗೆ ಬಡಿಸಿದರು.












Click it and Unblock the Notifications